ಬೆಂಗಳೂರು; ನಾಳೆಯಿಂದ ಆರಂಭವಾಗಿ ಕೊರೋನಾ ಲಸಿಕೆ ವಿತರಣೆಗೆ ಪ್ರಧಾನಿ ಮೋದಿ ನಾಳೆ ಬೆಳಿಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ 243 ಹಾಗೂ ಬೆಂಗಳೂರಿನ 10 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಮೊದಲನೇ ಹಂತದಲ್ಲಿ ಕೊರೋನಾ ವಾರಿಯರ್ಸ್ ಗೆ ನೀಡುತ್ತಿದ್ದೇವೆ. ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು ಮತ್ತು ಪೊಲೀಸರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ರಿಜಿಸ್ಟರ್ ಮಾಡಿಕೊಂಡ ಎಲ್ಲರಿಗೂ ನಾಳೆಯಿಂದ ವಾಕ್ಸಿನ್ ನೀಡುತ್ತೇವೆ. ಲಸಿಕೆಯಿಂದ ಯಾರಿಗೂ ಆತಂಕ, ಭಯ ಬೇಡ. ಇದು ಸಂಪೂರ್ಣ ಸುರಕ್ಷಿತವಾಗಿದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಕೊಡಲಾಗುತ್ತೆ. ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಕಂಟ್ರೋಲ್ ರೂಂ ಇರುತ್ತದೆ. ಮೊದಲ ಹಂತದಲ್ಲಿ ದೇಶಾದ್ಯಂತ 3 ಕೋಟಿ ಮಂದಿಗೆ ಲಸಿಕೆ ನೀಡಲಾಗುತ್ತದೆ. ಚುಚ್ಚುಮದ್ದು ಪಡೆಯುವ ಕೆಲವರಿಗೆ ಜ್ವರ ಬರಬಹುದು. ಆದರೆ ಇದರಿಂದ ಗಾಬರಿ ಬೇಡ. ರಾಜ್ಯದಲ್ಲಿ ಒಟ್ಟು 7.17 ಲಕ್ಷ ಮಂದಿ ಈಗ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಸದ್ಯ ನಮಗೆ 8.14 ಲಕ್ಷ ಲಸಿಕೆಗಳು ಕೇಂದ್ರದಿಂದ ಬಂದಿದೆ. ಪ್ರತಿ ಕೇಂದ್ರದಲ್ಲಿ100 ಮಂದಿಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಲಸಿಕೆ ನೀಡಿರುವ ಪ್ರತಿ ದಿನದ ಮಾಹಿತಿಯ ಬುಲೆಟಿನ್ ನಿತ್ಯ ಬಿಡುಗಡೆ ಮಾಡುತ್ತೇವೆ. ಲಸಿಕೆ ತೆಗದುಕೊಂಡ ನಂತರ ಕೆಲವರಿಗೆ ಸೈಡ್ ಎಫೆಕ್ಟ್ ಆಗಬಹುದು. ಸ್ಪಲ್ಪ ಜ್ವರ ಬರಬಹುದು. ಆಮೇಲೆ ಅದೇ ಸರಿ ಹೋಗುತ್ತೆ. ಇದಕ್ಕೆ ಆತಂಕಕ್ಕೆ ಒಳಗಾಗಬಾರದು. ಕೊರೋನಾ ಲಸಿಕೆಯಿಂದ ಏನು ಸಮಸ್ಯೆ ಆಗಲ್ಲ. ಸೋಷಿಯಲ್ ಮೀಡಿಯದಲ್ಲಿ ತಪ್ಪು ಮಾಹಿತಿ ಬಂದರೆ ಅದನ್ನು ಯಾರೂ ನಂಬಬಾರದು ಎಂದು ಸುಧಾಕರ್ ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರು ಮತ್ತು ಸಫಾಯಿ ಕರ್ಮಚಾರಿಗಳಿಗೆ ನಾಳೆ ಸಾಂಕೇತಿಕವಾಗಿ ಮೊದಲು ಲಸಿಕೆ ನೀಡಲಾಗುತ್ತದೆ. ಕೊರೋನಾ ಲಸಿಕೆ ಹಾಕುವ ಸ್ಥಳದಲ್ಲಿ ಮಾಧ್ಯಮದವರಿಗೆ ಪ್ರವೇಶವಿಲ್ಲ. ಮಾಧ್ಯಮದವರು ಇದಕ್ಕೆ ಸಹಕರಿಸಬೇಕು. ದೂರದರ್ಶನದಲ್ಲಿ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ನಾಳೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ; ಭದ್ರಾವತಿ, ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ
ಸಿಎಂ ಬಿಎಸ್ವೈ ವಿರುದ್ಧದ ಸಿಡಿ ಆರೋಪ ಪ್ರಕರಣ ಸಂಬಂಧ ಮಾತನಾಡಿದ ಸಚಿವ ಸುಧಾಕರ್, ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ. ಯಾರು ಸಿಡಿ ಬಗ್ಗೆ ಹೇಳಿದ್ದಾರೋ ಅವರನ್ನೇ ಕೇಳಿ. ನನಗೆ ಗೊತ್ತಿರೋದು ಕೋವಾಕ್ಸಿನ್, ಕೋವಿಶಿಲ್ಡ್ ಮಾತ್ರ ಎಂದರು. ಅವರು ತುಂಬಾ ದೊಡ್ಡವರು. ಅವರ ಮಾತುಗಳಿಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳುವ ಮೂಲಕ ವಿಶ್ವನಾಥ್ ಗೆ ಟಾಂಗ್ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ