ಪ್ರಯಾಣಿಕರ ಗಮನಕ್ಕೆ - ಇಂದಿನಿಂದ ಸಾರಿಗೆ ನೌಕರರ ಮುಷ್ಕರ; ಸರ್ಕಾರದಿಂದ ಖಾಸಗಿ ಬಸ್ಸುಗಳ ಪರ್ಯಾಯ ವ್ಯವಸ್ಥೆ!

ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಪ್ರಯಾಣಿಕ ವರ್ಗದ ವಾಹನಗಳ ಮೂಲಕ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆಗಾಗಿ  ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅನುಪಯುಕ್ತ ಖಾಸಗಿ ಪ್ರಯಾಣಿಕ ವರ್ಗದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ. ಅಲ್ಲದೇ,   ಇಂದಿನಿಂದ ಹೆಚ್ಚುವರಿಯಾಗಿ ಮೆಟ್ರೋ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಂತೆ ಆರನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿ ಸಾರಿಗೆ ನೌಕರರು ಇಂದಿನಿಂದ ಮತ್ತೊಮ್ಮೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಾರಿಗೆ ಮುಷ್ಕರದಿಂದ ಇದೀಗ ಸರ್ಕಾರ ಸಂಕಟಕ್ಕೆ ಸಿಲುಕಿದ್ದು,  ಪ್ರತಿಭಟನೆ ಕೈ ಬಿಡುವಂತೆ ಮನವಿ ಜೊತೆಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದೆ. ಆದರೂ ಸರ್ಕಾರದ ಎಚ್ಚರಿಕೆಗೆ ಜಗ್ಗದ ಸಾರಿಗೆ ನೌಕರರು ಇಂದು ಮುಷ್ಕರಕ್ಕೆ ಮುಂದಾಗಿದ್ದಾರೆ. ಸಾರಿಗೆ ಮುಷ್ಕರದಿಂದ ಇಂದು ಸಾರಿಗೆ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ಇಂದು ಸಂಚರಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

ಕಳೆದ ವರ್ಷದ ನವೆಂಬರ್​ನಲ್ಲಿ ಸಾರಿಗೆ ನೌಕರರು 10 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ಅವುಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗದಂತೆ ಸಂಬಳ ಜಾರಿ ಬೇಡಿಕೆಗಳು ಪ್ರಮುಖವಾಗಿದ್ದು. ಆಗ ಮುಷ್ಕರನಿರತ ನೌಕರರೊಂದಿಗೆ ಮಾತುಕತೆ ನಡೆಸಿದ್ದ ಸರ್ಕಾರ 10 ಬೇಡಿಕೆಗಳಲ್ಲಿ ಸರ್ಕಾರಿ ನೌಕರರೆಂದು ಪರಿಗಣನೆ ಒಂದನ್ನು ಬಿಟ್ಟು ಉಳಿದ 9 ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಭರವಸೆ ನೀಡಿತ್ತು. ಆದರೆ, ನಾಲ್ಕು ತಿಂಗಳು ಕಳೆದರೂ ಸರ್ಕಾರ ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಸಾರಿಗೆ ನೌಕರರು ಇದೀಗ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಸಂಬಂಧ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ನೌಕರರು ಮುಷ್ಕರ ಕೈಬಿಡಬೇಕು. ಅದರ ಸಮಸ್ಯೆ ಏನೇ ಇದ್ದರೂ ಹಂತಹಂತವಾಗಿ ಈಡೇರಿಸಲಾಗುವುದು. ಇಲ್ಲವಾದಲ್ಲಿ ಎಸ್ಮಾ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಬಳಿಕ ಇದೇ ವಿಷಯವಾಗಿ ನೆನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಈಗಾಗಲೇ ಸಾರಿಗೆ ನೌಕರರ ಒಂಬತ್ತು ಬೇಡಿಕೆಯಲ್ಲಿ ಎಂಟು ಬೇಡಿಕೆ ಈಡೇರಿಸಿದ್ದೇವೆ. ಮುಂದೆಯೂ ಸಾರಿಗೆ ನೌಕರರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಇಷ್ಟಾದರೂ ಮುಷ್ಕರ ಮಾಡುವ ಪಟ್ಟು ಹಿಡಿಯೋದು ಸರಿಯಲ್ಲ. ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡಬಾರದು. ಮುಷ್ಕರದ ನಿರ್ಧಾರ ಕೈ ಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು. ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಎಚ್ಚರಿಕೆಯ ಜೊತೆಗೆ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಕರೆ ಹಿನ್ನೆಲೆಯಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲೂ ತಯಾರಿ ಮಾಡಲಾಗಿದೆ. ಪರ್ಮಿಟ್ ಇರುವ ಖಾಸಗಿ ಬಸ್ ಗಳ ಓಡಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈಲು ಸಂಚಾರ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಬಿಗಿ ಕ್ರಮ ಕೈಗೊಳ್ಳುವ ಮುನ್ನವೇ ಸಾರಿಗೆ ನೌಕರರು ಮುಷ್ಕರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ಮುಷ್ಕರ ನಿರತರ ಮೇಲೆ ಕಠಿಣ ಕ್ರಮ ಖಚಿತ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಇದನ್ನು ಓದಿ: ಸರ್ಕಾರದ ಬಿಗಿ ಕ್ರಮಕ್ಕೆ ಅವಕಾಶ ಮಾಡಿಕೊಡಬೇಡಿ; ಸಾರಿಗೆ ನೌಕರರಿಗೆ ಸಿಎಂ ಬಿಎಸ್​ವೈ ಕಟ್ಟುನಿಟ್ಟಿನ ಎಚ್ಚರಿಕೆ!

ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಪ್ರಯಾಣಿಕ ವರ್ಗದ ವಾಹನಗಳ ಮೂಲಕ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆಗಾಗಿ  ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅನುಪಯುಕ್ತ ಖಾಸಗಿ ಪ್ರಯಾಣಿಕ ವರ್ಗದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ. ಅಲ್ಲದೇ,   ಇಂದಿನಿಂದ ಹೆಚ್ಚುವರಿಯಾಗಿ ಮೆಟ್ರೋ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಮೆಟ್ರೋ ರೈಲುಗಳು ಸಂಚರಿಸಲಿವೆ.  ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ರೈಲುಗಳನ್ನ ಓಡಿಸಲು ಮೆಟ್ರೋ ನಿಗಮ ಮುಂದಾಗಿದೆ. ಸದ್ಯ ನಿತ್ಯ ನೇರಳೆ ಮಾರ್ಗದಲ್ಲಿ 122 ಟ್ರಿಪ್ ಹಾಗೂ ಹಸಿರು ಮಾರ್ಗದಲ್ಲಿ 126 ಟ್ರಿಪ್ ಸೇರಿದಂತೆ ಒಟ್ಟು 248 ಟ್ರಿಪ್ ಮೆಟ್ರೋ ರೈಲು ಸಂಚಾರವಿದೆ. ಸದ್ಯ ಬೆಳಗ್ಗೆ ಹಾಗೂ ಸಂಜೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ. ಹಾಗೂ ಮಧ್ಯಾಹ್ನ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚಾರ ಇದೆ. ಆದರೆ ಇಂದಿನಿಂದ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ ಇರಲಿದೆ. ಪ್ರಯಾಣಿಕರ ದಟ್ಟಣೆಗೆ ಅನುಸಾರವಾಗಿ ರೈಲು ಕಾರ್ಯಾಚರಣೆ ಮಾಡಲು ಮೆಟ್ರೋ ನಿಗಮ ನಿರ್ಧಾರ ಮಾಡಿದೆ. ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಮೆಟ್ರೋ ರೈಲು ಓಡಾಡಲಿದೆ ಎಂದು ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ.
Published by:HR Ramesh
First published: