58 ವರ್ಷದಿಂದ ಚುನಾವಣೆ ಕಾಣದ ಗ್ರಾಮ ಪಂಚಾಯಿತಿ; ಬೆಳಗಾವಿಯಲ್ಲಿ ಇತಿಹಾಸ ಬರೆದ ಅವಿರೋಧ ಆಯ್ಕೆ

ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದಲ್ಲಿ 1962ರಿಂದ ರಚನೆಯಾದ ಪಂಚಾಯಿತಿಯಲ್ಲಿ ಕಳೆದ 2015ರಲ್ಲಿ ಚುನಾವಣೆ ಜರುಗಿದ ಹೊರತುಪಡಿಸಿ 58 ವರ್ಷಗಳ ಕಾಲ ಪಂಚಾಯಿತಿಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯುತ್ತಿದೆ.

ಚಿಕ್ಕೋಡಿ

ಚಿಕ್ಕೋಡಿ

  • Share this:
ಬೆಳಗಾವಿ (ಡಿ. 13): ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬಂದರೆ ಸಾಕು ಕುಟುಂಬದವರ ಮಧ್ಯೆ ಚುನಾವಣಾ ಭರಾಟೆ ಜೋರಾಗಿಯೇ ಇರುತ್ತದೆ. ಗ್ರಾಮದಲ್ಲಿ ನಾನು ನೀನು ಎಂದು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಮುಂದಾಗುತ್ತಾರೆ. ಗ್ರಾಮದಲ್ಲಿ ತಮ್ಮದೆ ಹಿಡಿತ ಸಾಧಿಸಲು ಗ್ರಾಮ ಪಂಚಾಯತಿ ಚುನಾವಣೆ ಒಂದು ಅಡಿಪಾಯ ಆಗುತ್ತೆ . ಬಿರುಸಿನ ಫೈಟ್ ನಡೆಯುವ ಕಾಲದಲ್ಲಿ ಇಲ್ಲೊಂದು ಗ್ರಾಮ ಪಂಚಾಯಿತಿ ರಚನೆಯಾದಾಗಿನಿಂದ ಕೇವಲ ಒಂದು ಬಾರಿ ಚುನಾವಣೆ ನಡೆದಿದ್ದು ಬಿಟ್ಟರೆ ಉಳಿದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದು ರಾಜ್ಯದ ಗಮನ ಸೆಳೆದಿರುವುದು ವಿಶೇಷವಾಗಿದೆ.

ಹೌದು, ಇಂತಹ ಗ್ರಾಮ ಪಂಚಾಯಿತಿ ಇರೋದು ಬೆಳಗಾವಿ ಜಿಲ್ಲೆಯಲ್ಲಿ. ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಕರಗಾಂವ, ಡೋಣವಾಡ, ಹಂಚನಾಳಕೆಕೆ ಸೇರಿ ಒಟ್ಟು ಮೂರು ಗ್ರಾಮಗಳು ಬರಲಿವೆ. 16 ಸದಸ್ಯ ಸ್ಥಾನಗಳನ್ನು ಹೊಂದಿರುವ ಈ ಪಂಚಾಯಿತಿಯಲ್ಲಿ ಆರು ವಾರ್ಡಗಳಿವೆ.  ಕರಗಾಂವ ಗ್ರಾಮದಲ್ಲಿ 1962 ರಿಂದ ರಚನೆಯಾದ ಪಂಚಾಯಿತಿಯಲ್ಲಿ ಕಳೆದ 2015ರಲ್ಲಿ ಚುನಾವಣೆ ಜರುಗಿದ ಹೊರತುಪಡಿಸಿ 58 ವರ್ಷಗಳ ಕಾಲ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿದೆ.

ಇದನ್ನೂ ಓದಿ: ಬಿಕ್ಕಟ್ಟು ಬಗೆಹರಿಸುವುದು ಸದನದಲ್ಲಿ ರೋಮಾಂಚನಕಾರಿ ಚಿತ್ರ ನೋಡಿದ ಹಾಗಲ್ಲ; ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಲೇವಡಿ

1962ರಲ್ಲಿ ಗ್ರೂಪ್ ಗ್ರಾಮ ಪಂಚಾಯಿತಿ, 1985ರಲ್ಲಿ ಮಂಡಲ ಪಂಚಾಯಿತಿ ಹಾಗೂ 1993ರಲ್ಲಿ  ಗ್ರಾಮ ಪಂಚಾಯಿತಿಗಳನ್ನಾಗಿ ಸರ್ಕಾರ ಮಾರ್ಪಾಡು ಮಾಡಿದೆ. ಕಳೆದ 1962ರಿಂದ ಕರಗಾಂವ ಗ್ರಾಮ ಪಂಚಾಯಿತಿಗೆ ಇಲ್ಲಿಯವರೆಗೆ ಕೇವಲ ಒಂದು ಬಾರಿ ಚುನಾವಣೆ ಜರುಗಿದೆ. ಉಳಿದ ಎಲ್ಲ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತಾ ಗಮನ ಸೆಳೆದಿದೆ. ಚಿಕ್ಕೋಡಿ ನಗರದಿಂದ 15 ಕಿ.ಮೀ ಅಂತರದಲ್ಲಿ ಇರುವ ಕರಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತ ಅವಿರೋಧವಾಗಿ ನಡೆಯಲು ಗ್ರಾಮದ ಹಿರಿಯ ಮುಖಂಡ ಡಿ.ಟಿ. ಪಾಟೀಲ(ಕಾಕಾ) ಹಾಗೂ ಡೋನವಾಡದ ಹಿರಿಯ ನ್ಯಾಯವಾದಿ ಟಿ.ವೈ.ಕಿವಡ ನೇತೃತ್ವದಲ್ಲಿ ಸತತ ಪ್ರಯತ್ನ ಪಟ್ಟಿದ್ದಾರೆ.

ಇಂದು ಒಂದೊಂದು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯುವುದು ದೊಡ್ಡ ಸಾಧನೆ. ಇಡೀ ಗ್ರಾಮ ಪಂಚಾಯತಿ ಎಲ್ಲ ಸದಸ್ಯರು ಅವಿರೋಧ ಆಯ್ಕೆ ನಡೆಯುವುದು ಸಣ್ಣ ಮಾತಲ್ಲ, ಆದರೆ ಕರಗಾಂವ ಗ್ರಾಮ ಪಂಚಾಯತಿ ಕಳೆದ 58 ವರ್ಷಗಳ ಇತಿಹಾಸದಲ್ಲಿ ಕೇವಲ ಒಂದೇ ಒಂದು ಬಾರಿ ಚುನಾವಣೆ ನಡೆದದ್ದನ್ನು ಬಿಟ್ಟರೆ ಉಳಿದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದಿರುವುದು ಇತಿಹಾಸ.

2015 ರಲ್ಲಿ ಒಂದು ಬಾರಿ ಮಾತ್ರ ಈ ಗ್ರಾಮ ಪಂಚಾಯತಿಗೆ ಚುನಾವಣೆ ನಡೆದಿರೋದು ವಿಶೇಷ. ಕಳೆದ ಬಾರಿಯೂ ಇಲ್ಲಿನ ಹಿರಿಯ ಮುಖಂಡರು ಅವಿರೋಧ ಆಯ್ಕೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ, ಯುವಕರು ಮಾತ್ರ ಅದಕ್ಕೆ ಒಪ್ಪದೆ ಚುನಾವಣೆಗೆ ಸ್ಪರ್ಧೆ ಮಾಡಿದರು. ಈಗ ಮತ್ತೆ ಅವಿರೋಧ ಆಯ್ಕೆ ಮಾಡಲು ಹಿರಿಯ ಮುಖಂಡರು ಮುಂದಾಗಿದ್ದಾರೆ. ಈಗಾಗಲೇ 30ಕ್ಕೂ ಹೆಚ್ಚು ಜನ ಯುವಕರು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಮತ್ತೊಮ್ಮೆ ಅವಿರೋಧ ಆಯ್ಕೆ ಕಸರತ್ತು ನಡೆಸಲು ಮುಖಂಡರು ಮುಂದಾಗಿದ್ದು, ಇಂದಿನ ಯುವಕರ ಉತ್ಸಾಹ, ಆಯಾ ಸಮುದಾಯಗಳ ಬಲಾಬಲದ ನಡುವೆ ಅವಿರೋಧ ಆಯ್ಕೆ ನಡೆಸುಲು ಮುಖಂಡರು ಯಶಸ್ವಿ ಆಗುತ್ತಾರಾ? ಎಂದು ಕಾದು ನೋಡಬೇಕಾಗಿದೆ.
Published by:Sushma Chakre
First published: