ನಾನು ಮೀನು ತಿಂದು 42 ವರ್ಷ ಆಯ್ತು; ಮಾಜಿ ಪ್ರಧಾನಿ ದೇವೇಗೌಡ

news18
Updated:September 4, 2018, 6:49 PM IST
ನಾನು ಮೀನು ತಿಂದು 42 ವರ್ಷ ಆಯ್ತು; ಮಾಜಿ ಪ್ರಧಾನಿ ದೇವೇಗೌಡ
news18
Updated: September 4, 2018, 6:49 PM IST
ನ್ಯೂಸ್​18 ಕನ್ನಡ

ಹಾಸನ (ಸೆ. 4): 'ನಾನು ಮತ್ಸ್ಯಪ್ರಿಯ. ಆದರೆ,  ನಾನು ಮೀನು ತಿಂದು 42 ವರ್ಷಗಳಾಯ್ತು. ನಾನೀಗ ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿದ್ದೇನೆ' ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮೀನುಗಾರಿಕೆ ಇಲಾಖೆ ವಿಷಯ ಚರ್ಚೆ ವೇಳೆ ಮಾತನಾಡಿದ ದೇವೇಗೌಡ, ಮೀನು ಸಾಕುವವರಿಗೆ ಹೆಚ್ಚು ಉತ್ತೇಜನ ನೀಡಿ ಎಂದು‌ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಮೊದಲೆಲ್ಲ ವಯಸ್ಸಿತ್ತು, ಹೆಚ್ಚು ಮೀನು ತಿನ್ನುತ್ತಿದ್ದೆ. ಆದರೆ, ಈಗ ನನ್ನ ಕೈಲಿ ಆಗುತ್ತಾ? ಎಂದು  ಈ ವೇಳೆ ಹೇಳಿದರು.

ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿಯನ್ನು ಹೊಂದಿರುವ ದೇವೇಗೌಡರು 86ನೇ ವಯಸ್ಸಿನಲ್ಲಿಯೂ ದೇಹವನ್ನು ಸದೃಢವಾಗಿಟ್ಟುಕೊಂಡಿದ್ದು, ವ್ಯಾಯಾಮ ಪಥ್ಯಾಹಾರ ಸೇವನೆ ಮಾಡುತ್ತಾ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ಗೌಡರ ಎದುರೇ ವಾಗ್ವಾದ:

ಈ ಸಭೆಯಲ್ಲಿ ಪಶುಭಾಗ್ಯ ಅವ್ಯವಹಾರ ವಿಚಾರದ ಕುರಿತು ಚರ್ಚಿಸುವಾಗ ದೇವೇಗೌಡರ ಎದುರೇ ಶಾಸಕರೇ ಕಿತ್ತಾಡಿಕೊಂಡ ಘಟನೆ ನಡೆಯಿತು.  ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಹಾಗೂ ಎ .ಟಿ. ರಾಮಸ್ವಾಮಿ ವಾಗ್ವಾದ ನಡೆಸಿದರು. ಜಿಲ್ಲಾ ಸಹಕಾರಿ ಬ್ಯಾಂಕ್​ನಿಂದ ಪಶು ಭಾಗ್ಯ ಯೋಜನೆ ಅವ್ಯವಹಾರ ಎಂದು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಆರೋಪ ಮಾಡಿದರು.

ಇದಕ್ಕೆ ಚನ್ನರಾಯಪಟ್ಟಣ ಶಾಸಕ ಸಿ.ಎನ್​. ಬಾಲಕೃಷ್ಣ ಸಮರ್ಥನೆ ನೀಡಿದರು. ಆದರೆ, ಬಾಲಕೃಷ್ಣ ಅವರ ಸಮರ್ಥನೆಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ, ದೇವೇಗೌಡರು ಗದರಿದ್ದರಿಂದ ಮೂವರೂ ಶಾಸಕರು ಸುಮ್ಮನಾದರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ