ಪಿಂಚಣಿಗಾಗಿ ಸ್ವಾತಂತ್ರ್ಯ ಹೋರಾಟಗಾರನ ವೃದ್ಧ ಪತ್ನಿ ಈಗಲೂ ಪರದಾಟ

ತನ್ನ ಪತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮೃತಪಟ್ಟ ಬಳಿಕ ಬರುತ್ತಿದ್ದ ಪಿಂಚಣಿ ಹಣ ಇತ್ತೀಚೆಗೆ ನಿಂತುಹೋಗಿ ಲಕ್ಷ್ಮಮ್ಮ ಎಂಬಾಕೆ ಬೀದಿಗೆ ಬರುವಂತಾಗಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮದ ಈ ಹೊತ್ತಲ್ಲಿ ದುಃಖಕರ ಸುದ್ದಿ ಇದು.

ಸ್ವಾತಂತ್ರ್ಯ ಯೋಧರ ವಿಧವಾ ಪತ್ನಿ ಲಕ್ಷ್ಮಮ್ಮ

ಸ್ವಾತಂತ್ರ್ಯ ಯೋಧರ ವಿಧವಾ ಪತ್ನಿ ಲಕ್ಷ್ಮಮ್ಮ

  • Share this:
ಆನೇಕಲ್: ಆಕೆ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಮಡಿದ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ. ಮದುವೆಯಾಗಿ ಕೇವಲ ಎರಡೇ ತಿಂಗಳಿಗೆ ಪತಿಯನ್ನು ಕಳೆದುಕೊಂಡ ನತದೃಷ್ಟೆ. ದೇಶ ಮಾತ್ರ 75ನೇ ವರ್ಷದ ಸ್ವತಂತ್ರ ಸಂಭ್ರಮಾಚರಣೆಯಲ್ಲಿದೆ. ಆದ್ರೆ ಆಕೆ ಮಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ಪತಿಯ ಪಿಂಚಣಿಗಾಗಿ ಕಳೆದ ಒಂದು ವರ್ಷದಿಂದ ಪರದಾಟ ನಡೆಸುತ್ತಿದ್ದಾಳೆ. ಪತಿಯ ಪಿಂಚಣಿಗಾಗಿ ಕಚೇರಿಗಳಿಗೆ ಅಲೆದು ಅಲೆದು ಅನಾರೋಗ್ಯ ಪೀಡಿತರಾಗಿರುವ ಈಕೆಯ ಹೆಸರು ಲಕ್ಷ್ಮಮ್ಮ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ವಾಸಿಯಾದ ಈಕೆ ತನ್ನವರನ್ನೆಲ್ಲ ಕಳೆದುಕೊಂಡು ತೊಂಬತ್ತರ ವಯಸ್ಸಿನಲ್ಲೂ ಒಂಟಿ ಜೀವನ ನಡೆಸುತ್ತಿದ್ದಾಳೆ.

ಮೂಲತಃ ಆನೇಕಲ್ ಪಟ್ಟಣದ ವಾಸಿಯಾದ ಈಕೆ ಗುರು ಹಿರಿಯರ ಸಮ್ಮುಖದಲ್ಲಿ ತುಮಕೂರಿನ ನಂಜುಂಡಪ್ಪ ಎಂಬುವವರ ಜೊತೆ 1947 ಮೇ 15 ರಂದು ವಿವಾಹವಾಗಿದ್ದರು. ಆದಾಗಿ ಕೇವಲ ಎರಡೇ ತಿಂಗಳಿಗೆ ಆನೇಕಲ್ ಪಟ್ಟಣ ಕೋರ್ಟ್ ಬಳಿ ನಡೆದ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಗುಂಡೇಟಿಗೆ ನಂಜುಂಡಪ್ಪ ಬಲಿಯಾಗಿದ್ದಾನೆ. ಅಂದಿನಿಂದ ತಂದೆ ಮತ್ತು ಸಹೋದರರು ಲಕ್ಷ್ಮಮ್ಮನ ಪಾಲನೆ ಮಾಡಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪತಿ ಮಡಿದಿದ್ದರಿಂದ ಪಿಂಚಣಿ ಸಹ ಬರುತ್ತಿದ್ದರಿಂದ ಹೇಗೋ ಜೀವನ ನಡೆಸಿಕೊಂಡು ಬಂದಿದ್ದಾರೆ. ಆದ್ರೆ ಕಳೆದ ಒಂದು ವರ್ಷದಿಂದ ಪಿಂಚಣಿ ಬರುವುದು ನಿಂತಿದೆ. ಬೇರೆ ಆದಾಯದ ಮೂಲವಿಲ್ಲದೆ ಹಿರಿಜೀವ ಪಿಂಚಣಿಗಾಗಿ ಪರದಾಡುವಂತಾಗಿದೆ.

ಇನ್ನು, ಸ್ವಾತಂತ್ರ್ಯ ಹೋರಾಟದಲ್ಲಿ ಪತಿ ತೀರಿಕೊಂಡ ಮೇಲೆ ತಂದೆ ಮತ್ತು ಸಹೋದರ ಅಸರೆಯಾಗಿದ್ದರು. ಅವರು ತೀರಿಕೊಂಡ ಮೇಲೆ ಲಕ್ಷ್ಮಮ್ಮ ಅಕ್ಷರಶಃ ಒಬ್ಬಂಟಿಯಾಗಿದ್ದಾಳೆ. ನಿಲ್ಲಲು ನೆಲೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಲಕ್ಷ್ಮಮ್ಮ ತನ್ನ ಗಂಡನ ಪಿಂಚಣಿ ಹಣದ ಜೊತೆಗೆ ಕೂಲಿ ಮಾಡಿ ಬರುವ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದಳು. ಆದ್ರೆ ಕಳೆದ ಹಲವು ವರ್ಷಗಳಿಂದ ಅಸ್ತಮಾ ರೋಗ ಕಾಡಲು ಶುರುವಿಟ್ಟುಕೊಂಡಿದ್ದರಿಂದ ಕೂಲಿ ಮಾಡಲಾಗದೆ ಗಂಡನ ಪಿಂಚಣಿ ನಂಬಿಕೊಂಡೇ ಜೀವನ ನಡೆಸುವಂತಹ ದುಃಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: Independence Day- ಇವತ್ತಿನಿಂದ ನವಕರ್ನಾಟಕ ಆಗಲಿದೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಬೊಮ್ಮಾಯಿ

ಇದರ ನಡುವೆ ಪಿಂಚಣಿ ದಾಖಲೆಗಳಲ್ಲಿ ಪತಿಯ ಹೆಸರು ಬದಲಾಗಿದ್ದರಿಂದ ಕಳೆದ ಒಂದು ವರ್ಷದಿಂದ ಪಿಂಚಣಿ ನಿಂತಿದೆ. ಆನೇಕ ಬಾರಿ ಬ್ಯಾಂಕು, ತಾಲ್ಲೂಕು ಕಚೇರಿಗೆ ಅಲೆದರೂ ಯಾರೊಬ್ಬರೂ ಕೂಡ ವೃದ್ಧೆ ಲಕ್ಷ್ಮಮ್ಮನ ನೆರವಿಗೆ ಧಾವಿಸಿಲ್ಲ. ಮೊದಲೇ ಬಾಧಿಸುತ್ತಿರುವ ಅನಾರೋಗ್ಯಕ್ಕೆ ಚಿಕಿತ್ಸೆಗೆ ಹಣವಿಲ್ಲದೆ ಜೀವನ ನಡೆಸಲು ಕಷ್ಟವಾಗಿದೆ. ಪರಿಚಯಸ್ಥರು ಪಿಂಚಣಿ ಬರುವಂತೆ ಮಾಡಿಸುವುದಾಗಿ ತಿಳಿಸಿದ್ದಾರೆ ಎನ್ನುವ ಲಕ್ಷ್ಮಮ್ಮ ಕೊನೆ ಉಸಿರು ಇರುವವರೆಗೂ ಪಿಂಚಣಿ ಹಣ ನಿಲ್ಲಿಸದಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಮಂತ್ರಿ ಮಹೋದಯರು ಮಾತಿಗೆ ಮೊದಲು ದೇಶ ಭಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಯ ಮಡದಿ ಸ್ಥಿತಿ ನಿಜಕ್ಕೂ ಎಂತಹವರಿಗಾದರೂ ಒಂದು ಕ್ಷಣ ಕಣ್ಣು ಒದ್ದೆಯಾಗದೇ ಇರದು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ದಾಖಲೆಗಳನ್ನು ಸರಿಪಡಿಸಿ ವಯೋ ವೃದ್ಧ ಲಕ್ಷ್ಮಮ್ಮನ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಬೇಕಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಆದೂರು ಚಂದ್ರು
Published by:Vijayasarthy SN
First published: