ಮೈಸೂರು: ಇಲ್ಲಿನ ವಿಶ್ವವಿದ್ಯಾಲಯದಲ್ಲಿ Free Kashmir ಪೋಸ್ಟರ್ ಪ್ರದರ್ಶನ ಪ್ರಕರಣದಲ್ಲಿ ಆರೋಪಿ ನಳಿನಿ ಪರ ವಕಾಲತ್ತಿನ ವಿಚಾರವಾಗಿ ಮೈಸೂರು ವಕೀಲರ ಸಂಘದಲ್ಲೇ ಭಿನ್ನಾಭಿಪ್ರಾಯ ಮನೆ ಮಾಡಿದೆ. ಈ ಹಿಂದೆ ಈ ಪ್ರಕರಣದಲ್ಲಿ ಯಾವ ವಕೀಲನು ನಳಿನಿ ಪರ ಹಾಜರಾಗುವುದಿಲ್ಲ ಎಂದು ಸಂಘದಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, ಈ ನಿರ್ಣಯವನ್ನು ಇದೀಗ ಹಲವರು ಮುರಿದಿರುವುದು ವಕೀಲರ ಸಂಘ ಎರಡು ಬಣವಾಗಲು ಕಾರಣ ಎನ್ನಲಾಗುತ್ತಿದೆ.
ಅಸಲಿಗೆ ಕಳೆದ ವಾರ ನಳಿನಿ ಪರ ಮೈಸೂರು ವಕೀಲರ ಸಂಘದ ಯಾವ ವಕೀಲನೂ ಹಾಜರಾಗುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳುತ್ತಿದ್ದಂತೆ ನಳಿನಿ ಪರ ವಕಾಲತ್ತು ವಹಿಸಲು ಬೆಂಗಳೂರು ಮೂಲದ ಹಲವು ವಕೀಲರು ಅರ್ಜಿ ಹಾಕಿ ವಾದ ಮಂಡಿಸಿದ್ದರು. ಈ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಗೂ ಗ್ರಾಸವಾಗಿತ್ತು. ಆದರೆ, ಈ ಪ್ರಸಂಗದ ಬೆನ್ನಿಗೆ ಮೈಸೂರು ವಕೀಲರ ಸಂಘದ ಕೆಲ ವಕೀಲರೂ ಸಹ ನಳಿನಿ ಪರ ವಕಾಲತ್ತಿಗೆ ಅರ್ಜಿ ಸಲ್ಲಿಸಿರುವ ಈ ಎಲ್ಲಾ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
ಹೀಗಾಗಿ Fress Kashmir ಎಂಬ ಒಂದೇ ಒಂದು ಪೋಸ್ಟರ್ ಹಾಗೂ ಅದರ ಬೆನ್ನಿಗೆ ದಾಖಲಾದ ದೇಶದ್ರೋಹದ ಪ್ರಕರಣ ಇದೀಗ ಶತಮಾನದ ಇತಿಹಾಸವಿರುವ ಮೈಸೂರು ವಕೀಲರ ಸಂಘವನ್ನೇ ಎರಡು ಬಣವಾಗಿ ಛಿದ್ರಗೊಳಿಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನಳಿನಿಗೆ ಜಾಮೀನು ನೀಡುವಂತೆ ಈಗಾಗಲೇ 129 ಮಂದಿ ವಕೀಲರು ವಕಾಲತ್ತು ಸಲ್ಲಿಸಿದ್ದಾರೆ.
ನಳಿನಿ ತಪ್ಪು ಮಾಡಿದ್ದರೆ ಕೋರ್ಟ್ ಶಿಕ್ಷೆ ನೀಡಲಿ, ವಾದ ಮಂಡಿಸುವುದರಲ್ಲಿ ತಪ್ಪೇನಿದೆ?
ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಆಗಿರುವ ನಳಿನಿ ಬಾಲಕುಮಾರ್ ಅವರ ಭವಿಷ್ಯವೇ ಈ ಪ್ರಕರಣದ ತೀರ್ಪಿನ ಮೇಲೆ ನಿಂತಿದೆ. ಆದರೆ, ಮೈಸೂರು ವಕೀಲರ ಸಂಘ ಆಕೆಯ ಪರ ಯಾರೂ ವಕಾಲತ್ತು ಸಲ್ಲಿಸಬಾರದು ಎಂದು ನಿರ್ಣಯ ತೆಗೆದುಕೊಂಡಿತ್ತು.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಮೂಲದ ವಕೀಲರೊಬ್ಬರು" ನಾವು ಮೈಸೂರು ವಕೀಲರ ಸಂಘದ ನಿರ್ಣಯದ ಬಗ್ಗೆ ಮಾತನಾಡೋಲ್ಲ, ನಮ್ಮ ವೃತ್ತಿ ಧರ್ಮದಲ್ಲಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದೇವೆ. ಆರೋಪಿ ನಳಿನಿ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ. ಆದ್ರೆ ತಪ್ಪೆ ಮಾಡದೆ ಶಿಕ್ಷೆ ನೀಡೋದು, ಅಥವಾ ವಾದ ಮಂಡಿಸದೆ ಇರೋದು ತಪ್ಪಾಗುತ್ತದೆ.
ಹಾಗಾಗಿ ನಾವು ವಾದ ಮಂಡಿಸಲು ಬಂದಿದ್ದೇವೆ ನಳಿನಿ ಪರ ನಾವು ವಕಾಲತ್ತು ವಹಿಸುತ್ತೇವೆ ಎಂದು ಹೇಳಿದ್ರು. ಜೊತೆಗೆ ಇದು ದೇಶದ್ರೋಹದ ಕೇಸ್ ಆಗಿರುವುದರಿಂದ ಆಕೆಯ ಭವಿಷ್ಯವೇ ಈ ಕೇಸ್ನಲ್ಲಿ ನಿಂತಿರುತ್ತದೆ. ಆಕೆ ಯಾರು ಏನೆಂದು? ನ್ಯಾಯಾಲಯದ ಮೂಲಕವೇ ಇತ್ಯಾರ್ಥವಾಗಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅತ್ತ ಮೈಸೂರು ವಕೀಲರ ಸಂಘ ಕೈಗೊಂಡಿದ್ದ ನಿರ್ಣಯ ಹಿಂಪಡೆದು ಮರುಪರಿಶೀಲನೆ ಮಾಡುವಂತೆ 100ಕ್ಕು ಹೆಚ್ಚು ಮೈಸೂರಿನ ವಕೀಲರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಭೆ ಕರೆದಿದ್ದ ವಕೀಲರ ಸಂಘ, ನಳಿನಿ ಪರ ವಕಾಲತ್ತು ವಹಿಸದಿರಲು ಮತ್ತೆ ಹಳೆ ನಿರ್ಣಯಕ್ಕೆ ಬದ್ದರಾಗಿದ್ದಾರೆ. ಆದರೆ, ನಿರ್ಣಯದ ವಿರುದ್ದ ಹೊರಟಕ್ಕೆ ನೂರಕ್ಕು ಹೆಚ್ಚು ವಕೀಲರು ನಳಿನಿ ಪರ ವಕಾಲತ್ತು ವಹಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಸಂಘ ನಮ್ಮ ಮೇಲೆ ಕ್ರಮಕೈಗೊಂಡರೆ ಅದು ಏಕಪಕ್ಷೀಯ ನಿರ್ಧಾರವಾಗಿರಲಿದೆ ಎಂದು ಆರೋಪಿಸಿದ್ದಾರೆ.
ಸಂಘದ ನಿರ್ಣಯವನ್ನ ಉಲ್ಲಂಘಿಸಿ ನಳಿನಿ ಪರ ವಕಾಲತ್ತು ವಹಿಸಿದರೆ ವಕೀಲರ ಸದಸ್ಯತ್ವ ಅಮಾನತುಗೊಳಿಸುವ ಎಚ್ಚರಿಕೆಯನ್ನು ಮೈಸೂರಿನ ವಕೀಲರ ಸಂಘ ಈಗಾಗಲೇ ನೀಡಿದೆ. ಆದರೆ, ಸಂಘದ ಎಚ್ಚರಿಕೆಗೂ ಡೊಂಟ್ ಕೇರ್ ಎಂದಿರುವ ಕೆಲ ವಕೀಲರು ಸಂಘವನ್ನೇ ಇಬ್ಬಾಗ ಮಾಡಿಕೊಂಡು ನಳಿನಿ ಪರ ನಿಂತಿದ್ದಾರೆ.
ಒಟ್ಟಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಆ ಒಂದು ಪ್ರತಿಭಟನೆ ಮೈಸೂರು ವಕೀಲರ ಸಂಘವನ್ನೇ ಹೀಗೆ ಒಡೆದು ಇಬ್ಭಾಗ ಮಾಡಲಿದೆ ಎಂದು ಯಾರೂ ಊಹಿಸಿರಲಿಲ್ಲವೇನೋ?. ನಿನ್ನೆವರೆಗೆ ಸಾಧಾರಣ ವಿದ್ಯಾರ್ಥಿನಿಯಾಗಿದ್ದ ನಳಿನಿ ಬಾಲಕುಮಾರ್ ಇಂದು ಕೇವಲ ಓರ್ವ ವಿದ್ಯಾರ್ಥಿನಿಯಾಗಿ ಮಾತ್ರ ಉಳಿದಿಲ್ಲ. ಆಕೆಯ ಪರ ವಹಿಸಲು ಮುಂದಾಗುತ್ತಿರುವ ವಕೀಲರ ಸಂಖ್ಯೆಯೂ ಇಳಿಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ .
ಈ ಪ್ರಕರಣ ಮುಂದಿನ ವಿಚಾರಣೆ ಜನವರಿ 24 ರಂದು ನಡೆಯಲಿದ್ದು, ಮೈಸೂರು ವಕೀಲರ ಸಂಘ ಮಾತ್ರವಲ್ಲ ಇಡೀ ರಾಜ್ಯ ಕುತೂಹಲದಿಂದ ಈ ದಿನವನ್ನು ಎದುರು ನೋಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ