ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ವಿವಾದ ಸೃಷ್ಟಿಸಿದ ಫ್ರೀ ಕಾಶ್ಮೀರ ಭಿತ್ತಿಪತ್ರ; ಆಯೋಜಕರು ಹೇಳುವುದೇನು?

ಪ್ಲ ಕಾರ್ಡ್ ಪ್ರದರ್ಶನಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ಹೋರಾಟ ಇದ್ದದ್ದು ಕೇವಲ ಜೆಎನ್‌ಯು ಘಟನೆ ಖಂಡಿಸಿ ಮಾತ್ರ. ನಮ್ಮ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಪ್ಲ ಕಾರ್ಡ್ ಅನ್ನು ಎಬಿವಿಪಿಯವರೇ ಪ್ರದರ್ಶನ ಮಾಡಿರಬೇಕು ಎಂದು ಆರೋಪಿಸಿದ್ದಾರೆ.

news18-kannada
Updated:January 9, 2020, 8:27 PM IST
ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ವಿವಾದ ಸೃಷ್ಟಿಸಿದ ಫ್ರೀ ಕಾಶ್ಮೀರ ಭಿತ್ತಿಪತ್ರ; ಆಯೋಜಕರು ಹೇಳುವುದೇನು?
ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶಿಸುತ್ತಿರುವ ವಿದ್ಯಾರ್ಥಿನಿ.
  • Share this:
ಮೈಸೂರು: ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್‌ ಪ್ಲ ಕಾರ್ಡ್‌ ಪ್ರದರ್ಶನ ಸಾಕಷ್ಟು ವಿವಾದ ಸೃಷ್ಠಿಸಿದೆ. ಇಂದು ಇಡೀ ದಿನ ಮೈಸೂರು ವಿವಿ ಸುತ್ತ ಸುತ್ತಿದ ಪ್ಲ ಕಾರ್ಡ್‌ ಪ್ರಕರಣ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದಲ್ಲದೇ, ಘಟನೆ ಸಂಬಂಧ ವಿವಿಯಿಂದ ರಾಜ್ಯಪಾಲರು ವರದಿ ಕೇಳಿದ್ದಾರೆ.

ಜೆಎನ್​ಯು ಯೂನಿವರ್ಸಿಟಿನಲ್ಲಿ ನಡೆದ ಹಿಂಸಾಚಾರ ಖಂಡಿಸಿ ಮೈಸೂರು ವಿವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ  ವಿದ್ಯಾರ್ಥಿನಿಯರೊಬ್ಬರು ಫ್ರೀ ಕಾಶ್ಮೀರ ಎಂಬ ಬರಹ ಇರುವ ನಾಮಫಲಕ ಹಿಡಿದು ಭಾಗಿಯಾಗಿದ್ದರು. ಸ್ವತಂತ್ರ ಕಾಶ್ಮೀರದ ನಾಮಫಲಕ ಪ್ರದರ್ಶಿಸಿದ ಯುವತಿ ತಮಿಳುನಾಡಿನ ಮೂಲದವರು ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರ ಸೂಚನೆ ಮೇರೆಗೆ ಜಯಲಕ್ಷೀಪುರಂ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆಗೆ ತನಿಖೆ ಆರಂಭವಾಗಿದ್ದು, ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಪ್ಲ ಕಾರ್ಡ್ ಹಿಡಿದವರ ಗುರುತು ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಪೊಲೀಸ್ ಠಾಣೆಯಿಂದ ಅನುಮತಿಯನ್ನೇ ಪಡೆದಿಲ್ಲ. ಈ ಬಗ್ಗೆ ವಿವಿ ಕುಲಪತಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.

ಎಫ್‌ಐಆರ್ ದಾಖಲಾಗುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಘಟನಾ ಸ್ಥಳದಲ್ಲಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಆದರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಟನೆಯ ಆಯೋಜಕರು, ನಮ್ಮ ಪ್ರತಿಭಟನೆಯ ಉದ್ದೇಶ ಬೇರೆಯೇ ಇತ್ತು. ಯಾರೋ ಹೊರಗಿನಿಂದ ಬಂದವರು ಈ ಕೃತ್ಯ ಎಸಗಿದ್ದಾರೆ. ಪ್ಲ ಕಾರ್ಡ್ ಪ್ರದರ್ಶನಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ಹೋರಾಟ ಇದ್ದದ್ದು ಕೇವಲ ಜೆಎನ್‌ಯು ಘಟನೆ ಖಂಡಿಸಿ ಮಾತ್ರ. ನಮ್ಮ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಪ್ಲ ಕಾರ್ಡ್ ಅನ್ನು ಎಬಿವಿಪಿಯವರೇ ಪ್ರದರ್ಶನ ಮಾಡಿರಬೇಕು ಎಂದು ಆರೋಪಿಸಿದ್ದಾರೆ.

ಇಡೀ ಘಟನೆ ಬಗ್ಗೆ ಮೈಸೂರು ವಿವಿಯಿಂದ ಪ್ರತಿಭಟನಾ ಆಯೋಜಕರಿಗೆ ನೋಟಿಸ್ ಜಾರಿಯಾಗಿದೆ. ಮೈಸೂರು ವಿವಿ ರಿಜಿಸ್ಟ್ರಾರ್ ಆರ್.ಶಿವಪ್ಪ ಅವರು ಪ್ರತಿಭಟನಾ ಆಯೋಜಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಮೈಸೂರು ವಿವಿಯಿಂದ ಪ್ರತ್ಯೇಕ ದೂರು ಸಹ ನೀಡಲಿದ್ದು, ಜಯಲಕ್ಷೀಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವ ಕುಲಸಚಿವ ದಲಿತ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರು, ಸಂಶೋಧಕರ ಸಂಘದ ಅಧ್ಯಕ್ಷರಿಗೆ ನೋಟಿಸ್ ನೀಡಿ ಕಾರಣ ಕೇಳಿದ್ದಾರೆ. ಇವೆಲ್ಲದರ ನಡುವೆ ಘಟನೆ ಸಂಬಂಧ ರಾಜ್ಯಪಾಲರು ವರದಿ ಕೇಳಿದ್ದಾರೆ.

ಇದನ್ನು ಓದಿ: ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ; ವರದಿ ಕೇಳಿದ ರಾಜ್ಯಪಾಲರು‌

ಒಟ್ಟಾರೆ ಇಡೀ ದಿನ ಪ್ಲ ಕಾರ್ಡ್ ಪ್ರದರ್ಶನ  ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನಾ ಆಯೋಜಕರಿಗೆ ನೋಟಿಸ್ ಜಾರಿಯಾಗಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ತಮ್ಮ ಗಮನಕ್ಕೆ ಬಾರದೆ ಈ ಘಟನೆ ನಡೆದಿದೆ ಎಂದು ಆಯೋಜಕರು ಆರೋಪ ಮಾಡಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆಯಿಂದ ಪೊಲೀಸರು ಸತ್ಯವನ್ನು ಹೊರಹಾಕಬೇಕಿದೆ.
First published: January 9, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading