ಕಲ್ಯಾಣ ಕರ್ನಾಟಕ ಮತ್ತು ವಿಜಯಪುರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ (Government School) ವಿದ್ಯಾರ್ಥಿಗಳಿಗೆ (Students) ಮೊಟ್ಟೆ (Egg) ನೀಡುವ ಕುರಿತ ವಿವಾದ ತಣ್ಣಗಾಗಲಿಲ್ಲ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಮೊಟ್ಟೆ ಬೇಡ ಅಂತ ವಾದ ಮಾಡುತ್ತಿರುವ ಮಠಾಧೀಶರ ವಿರುದ್ಧ ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿದ್ಯಾರ್ಥಿನಿ (Gangavati Student) ಆಕ್ರೋಶ ಹೊರ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗಿದೆ. ಗಂಗಾವತಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಾಳೆ, ಗಂಗಾವತಿಯಲ್ಲಿ ಎಸ್ ಎಫ್ಐ ಸಂಘಟನೆಯಿಂದ ಮೊಟ್ಟೆ ವಿರೋಧಿಸುವ ಸ್ವಾಮೀಜಿಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಮಾತನಾಡಿರುವ ವಿದ್ಯಾರ್ಥಿನಿ, ಮೊಟ್ಟೆ ಮತ್ತು ಬಾಳೆಹಣ್ಣು ನೀಡಬೇಕು. ನಮಗೆ ಮೊಟ್ಟೆ ತಿನ್ನಬೇಡಿ ಎಂದು ಹೇಳಲು ನೀವ್ಯಾರು? ಒಂದಲ್ಲ ಎರಡು ಮೊಟ್ಟೆ ತಿನ್ನುತ್ತೇವೆ, ನೀವೂ ಹೀಗೆ ವಿರೋಧ ಮಾಡುತ್ತಿದ್ರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ವಿದ್ಯಾರ್ಥಿನಿ ಸವಾಲು ಹಾಕಿದ್ದಾಳೆ.
ನಾವೆಲ್ಲ ಮೊಟ್ಟೆಗಾಗಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾ?
ನಾವು ಮೊಟ್ಟೆ ತಿಂದ್ರೆ ಬದುಕುತ್ತೇವೆ. ಇಲ್ಲಾಂದ್ರೆ ನಾವೆಲ್ಲ ಸಾಯ್ತಿವಿ. ನೀವೇ ಏನಾದ್ರು ಬಾಳೆಹಣ್ಣು ಬೇಡ, ಮೊಟ್ಟೆ ಬೇಡ ಎಂದು ವಿರೋಧ ಮಾಡಿದ್ರೆ, ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತಿವಿ, ನಮ್ಮದೇ ಏನು ಪ್ರತಿಭಟನೆ ಇಲ್ಲ, ಮೊಟ್ಟೆ ಕೊಡಬೇಕು ಅಷ್ಟೆ. ಮಕ್ಕಳು ದೇವರು ಆಂತ ನೀವೇ ಹೇಳ್ತಿರಿ. ಹಾಗಾದ್ರೆ ಈ ದೇವರ ಆಸೆ ಯಾಕೆ ನೆರವೇರಿಸಲ್ಲ.
ನಾವೆಲ್ಲ ಮೊಟ್ಟೆಗಾಗಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾ? ಇದು ನಿಮಗೆ ಚೆನ್ನಾಗಿ ಕಾಣಿಸುತ್ತಾ? ಒಂದು ವೇಳೆ ನಿಮ್ಮ ಮಕ್ಕಳು ಹೀಗೆ ರಸ್ತೆಗೆ ಇಳಿದ್ರೆ ನಿಮಗೆ ಚೆನ್ನಾಗಿ ಕಾಣಿಸುತ್ತಾ? ಇಲ್ಲವಲ್ಲ ಹಾಗಾದ್ರೆ ನಮಗೆ ನಮ್ಮ ಪಾಲಿನ ಮೊಟ್ಟೆ ನೀಡಿ. ನಮಗೆ ಬಾಳೆಹಣ್ಣು ಮತ್ತು ಮೊಟ್ಟೆ ಬೇಕು ಎಂದು ವಿದ್ಯಾರ್ಥಿನಿ ಗುಡುಗಿದ್ದಾಳೆ.
ಇದನ್ನೂ ಓದಿ: ದಿನಕ್ಕೊಂದು ಮೊಟ್ಟೆ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ..!
ನಮ್ಮ ದಕ್ಷಿಣೆ ಹಣದಿಂದಲೇ ನೀವು ಇರೋದು!
ನಿಮ್ಮ ಮಠದಲ್ಲಿ ನಾವು ಮೊಟ್ಟೆ ತಿನ್ನೋದು ಬೇಡ ಅಂದ್ರೆ ಶಾಲೆಯಲ್ಲಿ ನಮಗೆ ಬಾಳೆಹಣ್ಣು ಮತ್ತು ಮೊಟ್ಟೆ ನೀಡಿ. ಒಂದಲ್ಲ ಎರಡು ಮೊಟ್ಟೆ ತಿನ್ನುತ್ತೇವೆ, ತಿನ್ನಬೇಡ ಅಂತ ಹೇಳಲು ನೀವ್ಯಾರು ಎಂದು ವಿದ್ಯಾರ್ಥಿನಿ ಪ್ರಶ್ನೆ ಮಾಡಿದ್ದಾಳೆ. ಮೊಟ್ಟೆ ತಿಂದ ನಂತರ ಸ್ನಾನ ಮಾಡ್ಕೊಂಡು ನಿಮ್ಮ ಮಠಕ್ಕೆ ಬಂದು ಪೂಜೆ ಮಾಡಿದ್ದೇವೆ, ಮಠಕ್ಕೆ ಬಂದ ವೇಳೆ ದಕ್ಷಿಣೆ ಸಹ ಹಾಕಿದ್ದೇವೆ. ನಮ್ಮ ಹಣದಿಂದಲೇ ನೀವು ಇರೋದು. ನಮ್ಮ ಹಣ ನಮಗೆ ಕೊಟ್ಟು ಬಿಡಿ ಎಂದು ಖಡಕ್ ಮಾತುಗಳನ್ನಾಡಿದ್ದಾಳೆ.
ಮಠಕ್ಕೆ ಬಂದು ಕುಳಿತುಕೊಳ್ಳುವ ಶಕ್ತಿ ನಮ್ಮಲ್ಲಿದೆ
ನಿಮಗೆ ಬಡವರ ಕಷ್ಟ ಗೊತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ಊಟ, ಬಟ್ಟೆ, ಪುಸ್ತಕ ಸಿಗುತ್ತೆ ನಮ್ಮನ್ನ ಶಾಲೆ ಕಳಿಸ್ತಾರೆ. ನಮ್ಮಿಂದ ಏನೂ ಆಗಲ್ಲ ಎಂದು ತಿಳಿದುಕೊಳ್ಳಬೇಡಿ. ಮಠಕ್ಕೆ ಬಂದು ಕುಳಿತುಕೊಳ್ಳುವ ಶಕ್ತಿ ನಮ್ಮಲ್ಲಿದೆ. ಇಡೀ ಗಂಗಾವತಿ ತಾಲೂಕಿನ ಮಕ್ಕಳನ್ನು ಕರೆದುಕೊಂಡು ಬಂದ್ರೆ ನಿಮ್ಮ ಮಠದಲ್ಲಿ ನಿಲ್ಲಲು ಜಾಗ ಸಹ ಇರಲ್ಲ. ಮಕ್ಕಳು ಅಂತ ನಮ್ಮನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಬಾಲಕಿ ಎಚ್ಚರಿಕೆ ನೀಡಿದ್ದಾಳೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಶೇ.80ರಷ್ಟು ಮಕ್ಕಳಿಗೆ ಬಿಸಿಯೂಟದಲ್ಲಿ ಬೇಕು ಮೊಟ್ಟೆ: ಸಮೀಕ್ಷೆಯಲ್ಲಿ ಬಹಿರಂಗ
ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ವಿರೋಧ
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ರಾಷ್ಟ್ರೀಯ ಬಸವ ದಳದ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡಬಾರದೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೊಟ್ಟೆ ವಿತರಿಸುವ ಮೂಲಕ ಸರ್ಕಾರದಿಂದಲೇ ವಿದ್ಯಾರ್ಥಿಗಳಲ್ಲಿ ಪಂಕ್ತಿ ಬೇಧ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಶಾಲೆಗಳಲ್ಲಿ ಸಮವಸ್ತ್ರ ಇಟ್ಟಿರೋದು ಯಾಕೆ ಎಂದು ಪ್ರಶ್ನಿಸಿರೋ ಶ್ರೀಗಳು, ಎಲ್ಲರೂ ಸಮಾನವಾಗಿ ಇರಲೆಂದು ಸಮವಸ್ತ್ರ ಇಟ್ಟಿರುವಾಗ ಆಹಾರದಲ್ಲಿ ತಾರತಮ್ಯವೇಕೆ ಎಂದು ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ