ಬೆಳಗಾವಿ(ಫೆ. 21): ಲಾಕ್ ಡೌನ್ ಪರಿಣಾಮದಿಂದ ದೇಶದಲ್ಲಿ ಅನೇಕ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೆ ಒಳ್ಳೆಯ ಕೆಲಸಕ್ಕೆ ಸೇರಬೇಕು, ಕೈತುಂಬ ಹಣ ಸಂಪಾದನೆ ಮಾಡಬೇಕು ಅಂತ ಕಾಯುತ್ತಿದ್ದಾರೆ. ಆದರೇ ಇದನ್ನೆ ಬಂಡವಾಳ ಮಾಡಿಕೊಂಡು ಅನೇಕರು ವಿದೇಶದಲ್ಲಿ ಉದ್ಯೋಗದ ಹೆಸರಿನಲ್ಲಿ ವಂಚನೆಗೆ ಇಳಿದಿದ್ದಾರೆ. ಹೌದು ಬೆಳಗಾವಿ ನಗರ ಪೊಲೀಸರು ಇಂತಹ ವಂಚಕ ಗ್ಯಾಂಗ್ ಬೆನ್ನು ಹತ್ತಿದ್ದು, ನೊಂದ ಯುವಕರಿಗೆ ನ್ಯಾಯ ಒಸಗಿಸುವ ಭರವಸೆ ನೀಡುತ್ತಿದ್ದಾರೆ. ನಗರ ಮಾರ್ಕೆಟ್ ಠಾಣೆ ಪೊಲೀಸರು ನಕಲಿ ಜಾಬ್ ಕನ್ಸಲ್ಟನ್ಸಿ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಬಣ್ಣ ಬಣ್ಣದ ಕನಸು ತೋರಿಸಿ ವಂಚಿಸುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ಬೆಳಗಾವಿಯ ಶಾಹುನಗರದ ನಿವಾಸಿ ಇಮ್ತಿಯಾಜ್ ಯರಗಟ್ಟಿ ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಉಮರ್ ಫಾರೂಖ್ ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಇಬ್ಬರು ಆರೋಪಿಗಳು ಬೆಳಗಾವಿಯ ದರ್ಬಾರ್ ಗಲ್ಲಿಯ ಟ್ರಾವೆಲ್ ವರ್ಲ್ಡ್ ಜಾಬ್ ಕನ್ಸಲ್ಟಂಟ್ಸ್ ಹಾಗೂ ಶೆಟ್ಟಿ ಗಲ್ಲಿಯ ಸ್ಟ್ಯಾಂಡರ್ಡ್ ಗ್ರೂಪ್ ಆಫ್ ಎಂಟರ್ಪ್ರೈಸ್ ಎಂಬ ಹೆಸರಿನ ಎರಡು ಪ್ರತ್ಯೇಕ ನಕಲಿ ಜಾಬ್ ಕನ್ಸಲ್ಟನ್ಸಿ ಸೆಂಟರ್ ಗಳನ್ನು ನಡೆಸುತ್ತಿದ್ದರು. ಅದಕ್ಕಾಗಿ ಪಾಂಪ್ಲೆಟ್, ವಿಸಿಟಿಂಗ್ ಕಾರ್ಡ್ ತಯಾರಿಸಿ ಅವುಗಳನ್ನು ಹಂಚಿ ಪ್ರಚಾರ ಮಾಡಿ ಹೊರದೇಶದಲ್ಲಿ ಕೆಲಸ ಕೊಡಿಸುವುದಾಗಿ ಜನರಿಗೆ ನಂಬಿಸಿ ಮೋಸ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಗಳಿಂದ 1.13 ಲಕ್ಷ ಹಣ, 315 ಪಾಸ್ಪೋರ್ಟ್, ಐದು ಕಂಪ್ಯೂಟರ್, ಮೂರು ಮೊಬೈಲ್, ಪಾಂಪ್ಲೆಟ್, ಲೀಸ್ ಅಗ್ರಿಮೆಂಟ್ ಸೇರಿ ಹಲವು ದಾಖಲಾತಿ ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:
ನಮ್ಮೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ; ಮಾಜಿ ಸಿಎಂ ಸಿದ್ದರಾಮಯ್ಯ
ಇದೇ ರೀತಿ ಭಗವಾನ್ ಗಲ್ಲಿಯಲ್ಲಿ ಟ್ರಾವೆಲ್ ವರ್ಡ್ ಜಾಬ್ ಕನ್ಸಟೆಂಟ್ ಲೋಕಲ್ ಅಂಡ್ ಇಂಟರ್ನ್ಯಾಷನಲ್ ಮೇಲೆ ದಾಳಿ ಮಾಡಿದ ಮಾರ್ಕೆಟ್ ಪೊಲೀಸರು. ತನಿಖೆಯನ್ನು ಕೈಗೊಂಡಿದ್ದು, ಅಂಗಡಿ ಲೈಸನ್ಸ್ ರದ್ದು ಮಾಡಿದ್ದಾರೆ. ಯುವಕರನ್ನು ಉದ್ಯೋಗದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಜಾಲದ ಬೆನ್ನು ಬಿದ್ದಿರೋ ನಗರ ಪೊಲೀಸರು ಮೂರು ಪ್ರಕರಣ ಬಯಲು ಮಾಡಿದ್ದಾರೆ. ಡಿಸಿಪಿ ಡಾ. ವಿಕ್ರಮ ಅಮಟೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಗೋವಾ ಮತ್ತು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು ಇದನ್ನ ತಡೆಯಲು ಪೊಲೀಸರು ಕೂಡ ಶ್ರಮಿಸುತ್ತಿದ್ದಾರೆ. ಒಂದು ಕಡೆ ಕೆಲಸದ ಆಸೆಗೆ ಬಿದ್ದು ನಕಲಿ ಜಾಬ್ ಕನ್ಸಲ್ಟನ್ಸಿಗಳಿಗೆ ಮೊರೆ ಹೋಗಿ ವಂಚನೆಗೊಳಗಾಗುತ್ತಿರುವ ನಿರುದ್ಯೋಗಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ