news18-kannada Updated:January 7, 2021, 10:05 AM IST
ಆರೋಪಿ ಯುವರಾಜ್
ಬೆಂಗಳೂರು (ಜ. 7): ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಜೊತೆ ಮತ್ತಷ್ಟು ಸ್ಯಾಂಡಲ್ವುಡ್ ನಟಿಯರು ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಯುವರಾಜ್ ಹಣಕಾಸಿನ ವಹಿವಾಟು ನಡೆಸಿದ್ದ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದರು. ಇದೀಗ ಸ್ಯಾಂಡಲ್ವುಡ್ನ ಹಲವು ನಟಿಯರ ಜೊತೆ ಯುವರಾಜ್ ಅಲಿಯಾಸ್ ಸ್ವಾಮಿ ಸಂಪರ್ಕ ಹೊಂದಿದ್ದ ಎಂಬುದು ಪತ್ತೆಯಾಗಿದೆ.
ಬಂಧಿತ ಆರೋಪಿ ಯುವರಾಜ್ನ ಮೊಬೈಲ್ ಪೋನ್ನಲ್ಲಿ ನಟಿಯರ ನಂಟು ಪತ್ತೆಯಾಗಿದೆ. ಪೋನ್ ಕರೆಗಳು, ಚಾಟಿಂಗ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು ಹಲವು ನಟಿಯರ ಜೊತೆ ಮಾತನಾಡಿರುವ ಕಾಲ್ ವಿವರ ಪತ್ತೆ ಹಚ್ಚಿದ್ದಾರೆ. ಯುವರಾಜ್ ನಟಿಯರ ಜೊತೆ ಹಣಕಾಸಿನ ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಯುವರಾಜ್ ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ಮಾತನಾಡಿರುವುದು ಕೂಡ ಬೆಳಕಿಗೆ ಬಂದಿದೆ. ಮೊಬೈಲ್ ಕರೆಗಳು ಮತ್ತು ಟವರ್ ಲೋಕೇಷನ್ ಹಾಗೂ ಚಾಟಿಂಗ್ ಪತ್ತೆ ಮಾಡುತ್ತಿರುವ ಸಿಸಿಬಿ ಪೊಲೀಸರು ಇನ್ನಷ್ಟು ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಯುವರಾಜ್ನ ಸಾಮ್ರಾಜ್ಯ ನೋಡಿ ಸಿಸಿಬಿ ಅಧಿಕಾರಿಗಳೇ ಅಚ್ಚರಿ ಪಟ್ಟಿದ್ದಾರೆ. ಯುವರಾಜನ ಇಂಚಿಂಚು ಮಾಹಿತಿ ಕಲೆ ಹಾಕುವಲ್ಲಿ ತಲ್ಲೀನರಾದ ಸಿಸಿಬಿ ಅಧಿಕಾರಿಗಳು ಯುವರಾಜ್ ಅಕೌಂಟ್ ಪರಿಶೀಲನೆ ಜೊತೆ ಕಾರು ಸೀಜ್ ಮಾಡಿದ್ದಾರೆ. ಯುವರಾಜ್ನ ಬೆಂಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ 47 ಅಕೌಂಟ್ ಗಳ ಬಗ್ಗೆ ಪೂರ್ತಿ ಮಾಹಿತಿ ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು ಪತ್ನಿ ಹಾಗೂ ಮಗಳ ಅಕೌಂಟ್ಗಳನ್ನು ಸಹ ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Karnataka Rain: ಶಿವಮೊಗ್ಗ, ಹಾಸನ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಇನ್ನೆರಡು ದಿನ ಭಾರೀ ಮಳೆ
ಆರ್ಎಸ್ಎಸ್ ನಾಯಕರು, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಹಲವು ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಯುವರಾಜ್ ಎಂಬಾತನನ್ನು ಕಳೆದ ತಿಂಗಳು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ನಿವೃತ್ತ ನ್ಯಾಯಾಧೀಶೆಯೊಬ್ಬರನ್ನು ರಾಜ್ಯಪಾಲರನ್ನಾಗಿ ಮಾಡುತ್ತೇನೆಂದು ನಂಬಿಸಿ ಕೋಟ್ಯಂತರ ರೂ. ಹಣ ಪಡೆದಿದ್ದು ಕೂಡ ಬೆಳಕಿಗೆ ಬಂದಿತ್ತು.
ಮೂಲತಃ ಶಿವಮೊಗ್ಗದವನಾದ ಯುವರಾಜ್ ಅಲಿಯಾಸ್ ಸ್ವಾಮಿ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಈತನ ವಿರುದ್ಧ ಕೋಟ್ಯಾಂತರ ರೂ. ವಂಚನೆ ಪ್ರಕರಣವಿದ್ದು, ಉದ್ಯಮಿ ಸುಧೀಂದ್ರ ರೆಡ್ಡಿ ಎಂಬುವವರು ಈತನ ವಿರುದ್ಧ ಸಿಸಿಬಿಗೆ ದೂರು ಸಲ್ಲಿಸಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಬಾವಿಯಲ್ಲಿರುವ ಯುವರಾಜನ ಮನೆಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು.
ಯುವರಾಜನ ಅಕ್ರಮಗಳು ಇನ್ನಷ್ಟು ಬೆಳಕಿಗೆ ಬರುತ್ತಿದ್ದು, ಮೊಬೈಲ್ ರಿಟ್ರೀವ್ ವೇಳೆ ಹಲವು ಪ್ರಮುಖ ಕಾಲ್ ಡೀಟೇಲ್ಸ್ ಪತ್ತೆಯಾಗಿವೆ. ನಿನ್ನೆ ಸುದ್ದಿಗೋಷ್ಠಿ ವೇಳೆ ಯುವರಾಜ್ ಬಗ್ಗೆ ಮಾಹಿತಿ ನೀಡಿದ್ದ ರಾಧಿಕಾ ಕುಮಾರಸ್ವಾಮಿ, ಯುವರಾಜ್ ನಾಟ್ಯರಾಣಿ ಶಾಂತಲಾ ಕುರಿತ ಸಿನಿಮಾಗಾಗಿ ನನಗೆ 15 ಲಕ್ಷ ರೂ. ಅಡ್ವಾನ್ಸ್ ಹಣವನ್ನು ನೀಡಿದ್ದರು. ಅದರ ಹೊರತಾಗಿ ಅವರೊಂದಿಗೆ ಬೇರಾವ ವ್ಯವಹಾರವೂ ನಡೆದಿಲ್ಲ ಎಂದಿದ್ದರು.
Published by:
Sushma Chakre
First published:
January 7, 2021, 10:05 AM IST