• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನಾಲ್ಕು ತಿಂಗಳ ನಂತರ ಕಾರಜೋಳ ಕಲಬುರ್ಗಿಗೆ : ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ದ ಗರಂ

ನಾಲ್ಕು ತಿಂಗಳ ನಂತರ ಕಾರಜೋಳ ಕಲಬುರ್ಗಿಗೆ : ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ದ ಗರಂ

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

2020 ರ ಸಂಕಷ್ಟದ ಸರಮಾಲೆಗಳ ಮಧ್ಯದಲ್ಲಿಯೂ ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಸಂಕಷ್ಟ ಸವಾಲುಗಳನ್ನು ಮೆಟ್ಟಿ ಹೊಸ ವರ್ಷಕ್ಕೆ ಮುನ್ನಡೆಯುತ್ತಿದ್ದೇವೆ. ಹಳೆಯದನ್ನು ಮರೆತು ಹೊಸತನದಿಂದ ಅಭಿವೃದ್ಧಿಯತ್ತ ಮುಂದುವರೆಯೋಣ

  • Share this:

ಕಲಬುರ್ಗಿ (ಜನವರಿ.01): ಕಲಬುರ್ಗಿ ವಿಭಾಗೀಯ ಕೇಂದ್ರ. ದೇಶದ ಮೊದಲ ಕೊರೋನಾ ಸಾವು ಸಂಭವಿಸಿದ್ದೂ ಕಲಬುರ್ಗಿಯಲ್ಲಿಯೇ. ಆದರೆ ಜಿಲ್ಲೆಗೊಬ್ಬ ಸಚಿವರಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರೆಂದು ನೇಮಕವಾಗಿರುವ ಗೋವಿಂದ ಕಾರಜೋಳ ಸಾಹೇಬರು ಮಾತ್ರ ಇತ್ತ ಕಡೆ ತಿರುಗಿಯೂ ನೋಡದಂತಿದ್ದರು. ಮೊದಲು ಕೋವಿಡ್ ಬಂದಾಗ ನಿರ್ಲಕ್ಷ್ಯ ಮಾಡಿದರು. ನಂತರ ಅತಿವೃಷ್ಟಿ, ಅದಾದ ನಂತರ ಭೀಕರ ಪ್ರವಾಹ. ಸ್ವತಹ ಮುಖ್ಯಮಂತ್ರಿಗಳೇ ವೈಮಾನಿಕ ಸಮೀಕ್ಷೆ ನಡೆಸಿ, ಕಲಬುರ್ಗಿಯಲ್ಲಿ ಸಭೆ ಮಾಡಿ ಹೋದರು. ಆದರೆ, ಗೋವಿಂದ ಕಾರಜೋಳ ಅವರು ಮಾತ್ರ ಬಂದಿರಲಿಲ್ಲ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಗೋವಿಂದ ಕಾರಜೋಳ ಕೊನೆಗೂ ಜಿಲ್ಲೆಗೆ ನಾಲ್ಕು ತಿಂಗಳ ನಂತ್ರ ಆಗಮಿಸಿದ್ದು, ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆಯೇ ಗರಂ ಆದ ಘಟನೆ ನಡೆದಿದೆ. ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಕಾರಜೋಳ ಆಗಮಿಸಿದ್ದರು. ಕೋವಿಡ್ ನಂತರ ನೆರೆ, ಪ್ರವಾಹ ಬಂದರೂ ಬಂದಿಲ್ಲ ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಕಾರಜೋಳ ಸಿಡಿಮಿಡಿಗೊಂಡರು. 


ನನ್ನ ಅನುಪಸ್ಥಿತಿಯಲ್ಲಿ ಸಿಎಂ ಅವರೇ ರಿವ್ಯೂ ಮಾಡಿದ್ದಾರೆ. ಕಂದಾಯ, ಕೃಷಿ ಮಂತ್ರಿ ಸೇರಿ ಇಡೀ ಕ್ಯಾಬಿನೆಟ್ ಬಂದು ಹೋಗಿದೆ. ನನಗೆ ಕೋವಿಡ್ ಆಗಿತ್ತು, ಅದು ನನ್ನ ಸಮಸ್ಯೆ ಬೇರೆ. ಎಲ್ಲವೂ ನಿಮಗೆ ಗೊತ್ತಿದೆ. ಆದರೂ ಹೀಗೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು. ಮೀಟಿಂಗ್ ಮುಗಿದ ಮೇಲೆ ಮಾತನಾಡೋಣ ಬನ್ನಿ ಎಂದರು. ಪತ್ರಕರ್ತರು ಬಿಡದೇ ಇದ್ದಾಗ ಸಿಡಿಮಿಡಿಗೊಂಡರು.


ವಿರೋಧ ಪಕ್ಷದವರ ವಿರುದ್ಧವೂ ಹರಿಹಾಯ್ದರು. ವಿರೋಧ ಪಕ್ಷಗಳವರ ಮಾತು ತಗೊಂಡು ಏನ್ ಮಾಡುವುದು ಬಿಡ್ರಿ ಎಂದು ಕಾರಜೋಳ ಸಿಡಿಮಿಡಿಗೊಂಡರು. 2020 ರ ಸಂಕಷ್ಟದ ಸರಮಾಲೆಗಳ ಮಧ್ಯದಲ್ಲಿಯೂ ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಸಂಕಷ್ಟ ಸವಾಲುಗಳನ್ನು ಮೆಟ್ಟಿ ಹೊಸ ವರ್ಷಕ್ಕೆ ಮುನ್ನಡೆಯುತ್ತಿದ್ದೇವೆ. ಹಳೆಯದನ್ನು ಮರೆತು ಹೊಸತನದಿಂದ ಅಭಿವೃದ್ಧಿಯತ್ತ ಮುಂದುವರೆಯೋಣ ಎಂದರು.


ಗುಲ್ಬರ್ಗಾ ವಿ.ವಿ.ಯಲ್ಲಿ ಸಭೆ ನಡೆಸಿದ ಕಾರಜೋಳ :


ಕೆಲ ತಿಂಗಳ ನಂತರ ಕಲಬುರ್ಗಿಗೆ ಆಗಮಿಸಿದ ಗೋವಿಂದ ಕಾರಜೋಳ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡಿದರು. ಸಭೆಗೆ ಸರಿಯಾದ ಮಾಹಿತಿ ತಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿದ್ಯುತ್ ಗೆ ಸಂಬಂಧಿಸಿ ಅಧಿಕಾರಿಗಳು ಸರಿಯಾದ ಉತ್ತರ ನೀಡದೇ ಇದ್ದಾಗ, ಸಚಿವರೇ ಅಂಕಿ-ಅಂಶಗಳನ್ನು  ನೀಡಿದರು. ಸಭೆಗೆ ಬರುವ ಮುಂಚೆ ಎಲ್ಲ ಸಿದ್ಧತೆ ಮಾಡಿಕೊಂಡು ಬರಬೇಕೆಂದು ತಾಕೀತು ಮಾಡಿದರು.


ಅಧಿಕಾರಿ ಅಮಾನತಿಗೆ ಸೂಚನೆ :


ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿದ ಪಿ.ಆರ್.ಇ.ಡಿ. ಕಾರ್ಯನಿರ್ವಾಹಕ ಎಂಜಿನಿಯರ್ ಶರಣಬಸಪ್ಪ ರನ್ನು ಅಮಾನತು ಮಾಡುವಂತೆ ಗೋವಿಂದ ಕಾರಜೋಳ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಪಿ.ರಾಜಾಗೆ ಸೂಚಿಸಿದ್ದಾರೆ. ಸರಿಯಾಗಿ ಮಾಹಿತಿ ನೀಡದ, ಮಾಹಿತಿ ಇಲ್ಲದೆ ಸಭೆಗೆ ಬಂದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಕಾರಜೋಳಗೆ ಪ್ರಿಯಾಂಕ್ ಖರ್ಗೆ ತಿರುಗೇಟು :


ಪ್ರತಿ ಕೆಡಿಪಿ ಸಭೆಯಲ್ಲೂ ಅಧಿಕಾರಿಗಳು ಇದೇ ರೀತಿ ಉತ್ತರ ಕೊಡುತ್ತಿದ್ದಾರೆ. ಉಪಮುಖ್ಯಮಂತ್ರಿ ಕಾರಜೋಳ ಅವರ ಮಾತಿಗೂ ಅಧಿಕಾರಿಗಳು ಬೆಲೆ ಕೋಡುತ್ತಿಲ್ವ ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾರಜೋಳಗೆ ತಿರುಗೇಟು ನೀಡಿದ್ದಾರೆ. ಸರ್ಕಾರದ ಮಾತಿಗೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ಅಂತಾ ಭಾವಿಸಬಹುದಾ ಅಂತಾ ಪ್ರಶ್ನೆ‌ ಮಾಡಿದ್ದಾರೆ. ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ನಡೆಯುತ್ತಿರುವ ಚರ್ಚೆ ವೇಳೆ ಪ್ರಶ್ನಿಸಿದ್ದು, ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.


ಇದನ್ನೂ ಓದಿ : Ramesh Jarkiholi: ಸ್ನೇಹಿತರೊಂದಿಗೆ ಕಾಮಾಕ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ


ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು ನಿಯಂತ್ರಣ ಮಾಡುವಂತೆ ಕಾರಜೋಳ ಅವರನ್ನು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಕಲಬುರ್ಗಿ‌ ಜಿಲ್ಲೆಯಲ್ಲಿ ಜೂಜು, ಗಾಂಜಾ ಮಾರಾಟ, ಐಪಿಎಲ್ ಬೆಟ್ಟಿಂಗ್ ನಂತ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು. ಕ್ಲಬ್ ಹೆಸರಲ್ಲಿ ಅಕ್ರಮ ದಂದೆಗಳು ನಡೆಯುತ್ತಿವೆ. ಈ ಅಕ್ರಮ ಚಟುವಟಿಕೆಗಳನ್ನು ಕೂಡಲೇ ನಿಯಂತ್ರಣಕ್ಕೆ ತನ್ನಿ ಎಂದು ಆಗ್ರಹಿಸಿದರು.


ಜಿಲ್ಲೆಯಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಕಳಪೆ ಕಾಮಕಾರಿ ವ್ಯಾಪಕವಾಗಿ ನಡೀತಿದೆ. ಇದೆಲ್ಲಕ್ಕೂ ಕಡಿವಾಣ ಹಾಕುವಂತೆ ಸಚಿವರನ್ನು ಆಗ್ರಹಿಸಿದರು.


ಸಂಸದ ಡಾ ಉಮೇಶ್ ಜಾಧವ್, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಎಂ.ವೈ.ಪಾಟೀಲ, ಸುಭಾಷ್ ಗುತ್ತೇದಾರ, ಬಸವರಾಜ್ ಮತ್ತಿಮಡು, ರಾಜಕುಮಾರ ಪಾಟೀಲ್ ತೆಲ್ಕೂರ್, ಡಾ ಅವಿನಾಶ ಜಾಧವ್ ಮತ್ತಿತರರು ಉಪಸ್ಥಿತಿರಿದ್ದರು.

Published by:G Hareeshkumar
First published: