ಮುನಿಯಪ್ಪ ಎಂಬ ಮಹತ್ವಾಕಾಂಕ್ಷಿ ಮತ್ತು ಅವರ ಲೆಕ್ಕಾಚಾರಗಳು

ಮುನಿಯಪ್ಪ ಅವರೇ ಕೆಪಿಸಿಸಿ ಅಧ್ಯಕ್ಷಗಾದಿ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಅವರು ಬಹಳ ಮುಖ್ಯವಾಗಿ ಮಾಡುತ್ತಿರುವುದು ಸಿದ್ದರಾಮಯ್ಯ ವಿರೋಧಿಗಳನ್ನು ಹುಡುಕಿ‌ ಹುಡುಕಿ ಅವರ ಬೆಂಬಲ ಕೇಳುತ್ತಿದ್ದಾರೆ.

news18-kannada
Updated:January 23, 2020, 8:47 AM IST
ಮುನಿಯಪ್ಪ ಎಂಬ ಮಹತ್ವಾಕಾಂಕ್ಷಿ ಮತ್ತು ಅವರ ಲೆಕ್ಕಾಚಾರಗಳು
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ
  • Share this:
ನವದೆಹಲಿ(ಜ.23) : ನಿಮಗೆಲ್ಲಾ ಗೊತ್ತು, ಮಾಜಿ ಸಂಸದ‌ ಕೆ.ಎಚ್. ಮುನಿಯಪ್ಪ ಈಗ ನಿರುದ್ಯೋಗಿ. ಜೊತೆಗೆ ಮಾಜಿ ಸಂಸದ ಎನ್ನಿಸಿಕೊಳ್ಳುವುದಿರಲಿ, ಮಾಜಿ ಕೇಂದ್ರ ಸಚಿವ ಎಂದರೂ ಅವರಿಗೆ ಏನೋ ಒಂಥರಾ ಸಂಕಟ. ಅಧಿಕಾರ ಎಷ್ಟು ಮುಖ್ಯ ಮತ್ತು ಒಬ್ಬ ಮನುಷ್ಯನನ್ನು ಅದು ಯಾವ ರೀತಿ ವರ್ತಿಸುವಂತೆ ಮಾಡುತ್ತೆ ಎಂಬುದಕ್ಕೆ ಮುನಿಯಪ್ಪ ಅವರನ್ನು ನೋಡಿಯೇ ತಿಳಿಯಬೇಕು. 'ಮಾಜಿ ಅಂತಾ ಬರೀಬೇಡಿ, ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯ ಅಂತಾ ಬರೀರೀ' ಎಂದು ಪತ್ರಕರ್ತರಿಗೆ ದುಂಬಾಲು ಬೀಳುತ್ತಾರೆ ಮುನಿಯಪ್ಪ.

ಇಂಥ ಮುನಿಯಪ್ಪ ಅವರಿಗೆ ಸದ್ಯಕ್ಕೆ ಅವರ ಪಕ್ಷ ಯಾವ ಹುದ್ದೆಯನ್ನು ನೀಡಲು ಸಾಧ್ಯವಿಲ್ಲ‌. ಹಾಗಾಗಿ ಮುನಿಯಪ್ಪ ಅವರೇ ಕೆಪಿಸಿಸಿ ಅಧ್ಯಕ್ಷಗಾದಿ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಅವರು ಬಹಳ ಮುಖ್ಯವಾಗಿ ಮಾಡುತ್ತಿರುವುದು ಸಿದ್ದರಾಮಯ್ಯ ವಿರೋಧಿಗಳನ್ನು ಹುಡುಕಿ‌ ಹುಡುಕಿ ಅವರ ಬೆಂಬಲ ಕೇಳುತ್ತಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ವಿರೋಧಿ ಒಬ್ಬರು ದೆಹಲಿಗೆ ಬಂದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಈ ವಿಷಯವನ್ನರಿತ ಮುನಿಯಪ್ಪ ಆ ಸಿದ್ದರಾಮಯ್ಯ ವಿರೋಧಿಗೆ ಕರೆ ಮಾಡಿದ್ದರು. ಆದರೆ ಪಾಪ ಆ ಸಿದ್ದರಾಮಯ್ಯ ವಿರೋಧಿ 'ಸಾರ್ ನಾನು ಇವತ್ತು ಕೆಲವರನ್ನು ಭೇಟಿ ಮಾಡಿದ್ದೆ. ಆದರೆ ಯಾರೂ ನಿಮ್ಮ ಬಗ್ಗೆ ಕೇಳಲೇ‌ ಇಲ್ಲ' ಅಂತಾ ನೇರವಾಗಿ ಹೇಳಿಬಿಟ್ಟರು. ಆ ಕಡೆ ಮುನಿಯಪ್ಪ ಪೆಚ್ಚಾದರಂತೆ. 'ನಿಜಕ್ಕೂ ನನ್ನ ಹೆಸರ ಬಗ್ಗೆ ಚರ್ಚೆ ಆಗುತ್ತಿಲ್ಲವಾ ಹಾಗಾದರೆ...' ಎಂದು ಮತ್ತೊಮ್ಮೆ ಪ್ರಶ್ನೆ ಮಾಡಿದರಂತೆ‌‌. ಇವರು 'ಇಲ್ಲ' ಎಂದು ಸುಮ್ಮನಾದರು.

ಇಷ್ಟಕ್ಕೆ ಸುಮ್ಮನಾಗುವ ಜಯಮಾನ ಮುನಿಯಪ್ಪ ಅವರದ್ದಲ್ಲ. ದೆಹಲಿ ಪತ್ರಕರ್ತರಿಗೆ ಕಾಲ್ ಮಾಡಿದ್ದಾರೆ. ಆದರೆ, ಪಾಪ ಪತ್ರಕರ್ತರಿಂದಲೂ ಮುನಿಯಪ್ಪಗೆ ತೀವ್ರ ನಿರಾಸೆ ಆಗಿದೆ.‌ ಏಕೆಂದರೆ ಪತ್ರಕರ್ತ ಹೇಳಿದ್ದಿಷ್ಟು... 'ಸಾರ್ ಈಗ ಆಲ್ಮೋಸ್ಟ್ ಎಲ್ಲಾ ಆಗೋಗಿದೆ, ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ್ ಇಬ್ಬರಲ್ಲಿ ಒಬ್ಬರಾಗಬಹುದು, ಅದು ಕೂಡ ಯಾವಾಗ ಆಗುತ್ತೆ ಅಂತಾ ಗೊತ್ತಿಲ್ಲ. ನಿಮ್ಮನ್ನ ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ಮಾಡ್ತಿದಾರಂತೆ...' ಎಂದಿದ್ದಾರೆ‌. ಹಾಗಂದಿದ್ದೇ ತಡ, 'ಏನು ನನ್ನ ಕಾರ್ಯಾಧ್ಯಕ್ಷರನ್ನಾಗಿ ಮಾಡ್ತಾರಾ? ಅಲ್ರೀ ನಾನು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯ, ನನ್ನನ್ನು ಹೇಗ್ರಿ ಕಾರ್ಯಾಧ್ಯಕ್ಷರನ್ನಾಗಿ ಮಾಡ್ತಾರೆ?' ಅಂತಾ ಕೆಂಡಕಾರಿದ್ದಾರೆ.‌ ಆಗ ಆ ಪತ್ರಕರ್ತರು, 'ನಾನು ಕೇಂದ್ರದ ಮಾಜಿ ಸಚಿವ, ನನ್ನ ವಿರುದ್ದ ಕಾರ್ಪೊರೇಟರ್ ಲೆವಲ್ ವ್ಯಕ್ತಿಯನ್ನು ತಂದು ನಿಲ್ಲಿಸಿದ್ದಾರಲ್ರಿ ಈ ಬಿಜೆಪಿಯವವರು, ಯಾವುದಕ್ಕೂ ಒಂದು ಲೆವಲ್ ಬೇಡ್ವಾ..' ಎಂದು ಎದುರಾಳಿ ಬಗ್ಗೆ ಮುನಿಯಪ್ಪ ಅವರು ಹೇಳಿದ್ದ 'ಭೀಷ್ಮ ಮತ್ತು ಶಿಖಂಡಿ‌' ಕತೆಯನ್ನು ನೆನಪಿಸಿಕೊಂಡು ನಕ್ಕು ಸುಮ್ಮನಾಗಿದ್ದಾರೆ.

ಇದನ್ನೂ ಓದಿ : ​​​​ಬಗೆಹರಿಯದ ಕೆಪಿಸಿಸಿ ಅಧ್ಯಕ್ಷ ಗಾದಿ ಕಗ್ಗಂಟು - ಬರಿಗೈಲಿ ವಾಪಸ್ಸಾದ ಸಿದ್ಧರಾಮಯ್ಯ - ಡಿಕೆಶಿ ಲಾಬಿ ಆರಂಭ

ಅಂದಹಾಗೆ ಮುನಿಯಪ್ಪ ಈಗ ದೆಹಲಿ ನಾಯಕರ ಮುಂದೆ ಬೇರೆ ವರಸೆ ತೆಗೆದಿದ್ದಾರೆ‌. ನನ್ನನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಡಿ ಅಂತಾ. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುನಿಯಪ್ಪ ಅವರನ್ನು ಸೀರಿಯಸ್ಸಾಗಿ ತೆಗೆದುಕೊಂಡ ಸಿಂಗಲ್ ಸುಳಿವು ಕೂಡ ಸಿಗುತ್ತಿಲ್ಲ.
First published: January 23, 2020, 8:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading