ಕಾಂಗ್ರೆಸ್‍ ಪಕ್ಷದ್ದು ಹಿಟ್ ಆ್ಯಂಡ್ ರನ್ ಪಾಲಿಸಿ: ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಂಗ್ಯ

ರೈತರ ತಿದ್ದುಪಡಿ ಕಾಯ್ದೆ, ಕೋವಿಡ್‍ನಂಥ ಮಹತ್ವದ ವಿಚಾರಗಳಲ್ಲಿ ಚರ್ಚೆಗೆ ಕಾಂಗ್ರೆಸ್ ಮುಂದಾಗಲಿಲ್ಲ. ಇದು ಪ್ರಜಾತಂತ್ರಕ್ಕೆ ಮಾಡಿದ ಅಪಮಾನ. ರಾಹುಲ್ ಗಾಂಧಿ ಅವರ ಹೇಳಿಕೆಗಳು ಗಾಂಭೀರ್ಯತೆ ಹೊಂದಿಲ್ಲ ಎಂದು ತಿಳಿಸಿದರು.

ಡಿ.ವಿ. ಸದಾನಂದ ಗೌಡ

ಡಿ.ವಿ. ಸದಾನಂದ ಗೌಡ

 • Share this:
  ಬೆಂಗಳೂರು: ಕಾಂಗ್ರೆಸ್‍ ಪಕ್ಷದ್ದು ಯಾವಾಗಲೂ ಹಿಟ್ ಆ್ಯಂಡ್ ರನ್ ಪಾಲಿಸಿಯಾಗಿದೆ. ಕೋವಿಡ್ ವೇಳೆ ಅಧಿವೇಶನಕ್ಕೆ ಒತ್ತಾಯಿಸಿದ್ದ ಕಾಂಗ್ರೆಸ್ ಪಕ್ಷದವರು ಈಗ ಪೆಗಾಸಿಸ್ ಸೇರಿದಂತೆ ಬೇರೆ ಬೇರೆ ನೆಪದಲ್ಲಿ ಅಧಿವೇಶನ ನಡೆಯದಂತೆ ನೋಡಿಕೊಂಡರು ಎಂದು  ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

  ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಖಂಡತೆ, ಸಮಗ್ರತೆ, ಜಾಗತಿಕ ವ್ಯವಸ್ಥೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ದಿನಗಳು ಇದಾಗಿವೆ. ನೆರೆಯ ಅಘಘಾನಿಸ್ಥಾನದ ಭಯೋತ್ಪಾದಕ ಸಂಘಟನೆಯ ಆತಂಕಕಾರಿ ಕ್ರಮಗಳು, ಪಾಕಿಸ್ತಾನ ಮತ್ತು ಚೀನಾದ ಸವಾಲುಗಳ ಕುರಿತು ಚರ್ಚಿಸಿ ತೀರ್ಮಾನ ಮಾಡಬೇಕಿತ್ತು. ಆದರೆ, ಕಳೆದ 19ರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯ ದೇಗುಲವನ್ನು ಅಪವಿತ್ರಗೊಳಿಸಲು ಕಾಂಗ್ರೆಸ್ಸಿಗರು ಯತ್ನಿಸುತ್ತಾ ಸಾಗಿದ್ದಾರೆ ಎಂದು ತಿಳಿಸಿದರು.

  ಚರ್ಚಿಸಲು ವಸ್ತುಗಳಿಲ್ಲದೆ ಪಲಾಯನವಾದಕ್ಕೆ ಒತ್ತು ಕೊಡುವ ರೀತಿಯಲ್ಲಿ ಸಂಸತ್ತಿನ ಅಧಿವೇಶನ ಸ್ಥಗಿತಗೊಳಿಸಲು ಕಾಂಗ್ರೆಸ್ ಮುಂದಾಯಿತು. ಇದರಿಂದ, ಕೇವಲ 18 ಗಂಟೆಗಳ ಕಾಲ ಸಂಸತ್ತಿನ ಅಧಿವೇಶನ ನಡೆಯುವಂತಾಯಿತು. ಒಂದು ಗಂಟೆಯ ಪ್ರಶ್ನೋತ್ತರ ಕಾಲ ಅತ್ಯಂತ ಮಹತ್ವದ್ದು. ಅದನ್ನೂ ನಡೆಯಲು ಬಿಡಲಿಲ್ಲ ಎಂದು ತಿಳಿಸಿದರು.
  ಅತ್ಯಂತ ಗಂಭೀರವಾಗಿ ಅಧಿವೇಶನ ನಡೆಸುವ ದೃಷ್ಟಿಯಿಂದ ಪ್ರಧಾನಿಯವರು ಅಧಿವೇಶನಕ್ಕೆ ಮೊದಲು ಸರ್ವಪಕ್ಷಗಳ ಸಭೆ ನಡೆಸಿದ್ದರು. ಈ ಬಾರಿ ಅತ್ಯಂತ ಗಂಭೀರವಾಗಿ ಅಧಿವೇಶನ ನಡೆಸಬೇಕು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಡಳಿತ ಪಕ್ಷ ಸಿದ್ಧವಿದೆ ಎಂದು ತಿಳಿಸಿದ್ದರು. ಆದರೆ, ಮಹತ್ವಪೂರ್ಣ ಸದನವನ್ನು ಕಾಂಗ್ರೆಸ್‍ನವರು ಕೆಟ್ಟ ರೀತಿಯಲ್ಲಿ ಯತ್ನಿಸಿತು. ಎಂದರು.

  ರೈತರ ತಿದ್ದುಪಡಿ ಕಾಯ್ದೆ, ಕೋವಿಡ್‍ನಂಥ ಮಹತ್ವದ ವಿಚಾರಗಳಲ್ಲಿ ಚರ್ಚೆಗೆ ಕಾಂಗ್ರೆಸ್ ಮುಂದಾಗಲಿಲ್ಲ. ಇದು ಪ್ರಜಾತಂತ್ರಕ್ಕೆ ಮಾಡಿದ ಅಪಮಾನ. ರಾಹುಲ್ ಗಾಂಧಿ ಅವರ ಹೇಳಿಕೆಗಳು ಗಾಂಭೀರ್ಯತೆ ಹೊಂದಿಲ್ಲ ಎಂದು ತಿಳಿಸಿದರು. ಹಿಂದೆ ರಫೇಲ್ ಚರ್ಚೆಯ ಸಂದರ್ಭದಲ್ಲೂ ಭೌತಿಕ ದಿವಾಳಿತನಕ್ಕೆ ಸಾಕ್ಷಿಯಾಗುವ ಮಾದರಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಮಿತ್ರ ಪಕ್ಷದವರು ನಡೆದುಕೊಂಡಿದ್ದರು ಎಂದರು.

  ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆ ತಮ್ಮ ಮೇಲೆ ಬೇಹುಗಾರಿಕೆ ನಡೆದಿದೆ ಎಂದು ಕಾಂಗ್ರೆಸ್‍ನ ಹಣಕಾಸು ಸಚಿವರೇ ಹೇಳಿದ್ದರು. ಪೆಗಾಸಿಸ್, ಟೂಲ್‍ಕಿಟ್‍ನ ಮುಂದುವರಿದ ಭಾಗ ಎಂಬ ಅನಿಸಿಕೆ ಕಾಡುವಂತಾಗಿದೆ ಎಂದು ತಿಳಿಸಿದರು.

  ಸೈನಿಕರ ಮೇಲೆ ಕಲ್ಲು ತೂರಾಟ, ಜಿಹಾದಿ ಸಾಹಿತ್ಯ ಒದಗಿಸುವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಾರೆ. ಸದನದಲ್ಲಿ ಈ ಕುರಿತು ಕಾಯ್ದೆ ಮಂಡಿಸಿದಾಗ ಅದನ್ನು ಕಾಂಗ್ರೆಸ್ ವಿರೋಧಿಸಿದ್ದು, ಇದು ದೇಶಪ್ರೇಮದ ಸಂಕೇತವೇ ಎಂದು ಡಿ.ವಿ.ಸದಾನಂದ ಗೌಡ ಅವರು ಪ್ರಶ್ನಿಸಿದರು. ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅತ್ಯಂತ ಕೆಟ್ಟ ದಿನಗಳು ಈಗ ಬರುತ್ತಿವೆ ಎಂದು ಅವರು ವಿವರಿಸಿದರು.

  ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೇ ಸಿಕ್ಕಿಲ್ಲ. ಇನ್ನೊಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿಯೂ ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ. ಪರಮೇಶ್ವರ್ ಅವರು ತಮ್ಮದೇ ಆದ ಬೆಂಬಲಿಗರ ಜೊತೆ ನಡೆಸುತ್ತಿರುವ ಕಾರ್ಯಾಚರಣೆಗಳೂ ಮುಂದುವರಿದಿವೆ. ತುಮಕೂರಿನಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‍ರನ್ನು ಹೊರಗಿಟ್ಟು ಸಭೆ ನಡೆಸುವ ದಯನೀಯ ಪರಿಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ ಎಂದು ತಿಳಿಸಿದರು.  ರಕ್ಷಾ ರಾಮಯ್ಯ- ನಲಪಾಡ್ ಜಟಾಪಟಿಯೂ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಎಂದರು.

  ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸನ್ನು ದುರ್ಬೀನು ಹಿಡಿದು ಹುಡುಕುವಂತಾಗಿದೆ. ಕೇರಳ, ಪುದುಚೇರಿಯಲ್ಲೂ ಇದೇ ಸ್ಥಿತಿ ಇದೆ. ಕಾಂಗ್ರೆಸ್ ತನ್ನೆಲ್ಲವನ್ನೂ ಕಳೆದುಕೊಳ್ಳುವಂತಾಗಿದೆ. ಪಂಜಾಬ್‍ನಲ್ಲೂ ಒಳಜಗಳ ಮುಂದುವರಿದಿದೆ. ಇಷ್ಟಾದರೂ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ ಎಂದರು.

  ನಿಗದಿತ ದಿನಗಳವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಒಂದು ವಾರವಾದರೂ ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಅವರು ಆಗ್ರಹಿಸಿದರು.
  ರಾಜ್ಯಕ್ಕೆ ಬೇಕಾದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಮೇಕೆದಾಟು ವಿಚಾರದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೇಕೆದಾಟು ಯೋಜನೆ ಅನುಷ್ಠಾನದಿಂದ ನೀರಿನ ಸಂಗ್ರಹ ಹೆಚ್ಚಲಿದೆ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗದು. ನೆರೆ ನಿಯಂತ್ರಣಕ್ಕೂ ಇದು ಪೂರಕ. ರಾಜ್ಯದ ಎಲ್ಲ 25 ಬಿಜೆಪಿ ಸಂಸದರು ಈ ಯೋಜನೆ ಅನುಷ್ಠಾನವನ್ನು ಬೆಂಬಲಿಸಲಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಎಲ್ಲ 25 ಸಂಸದರೂ ಶ್ರಮಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

  ಇದನ್ನೂ ಓದಿ: 5,800 ಡಾಲರ್​ ಮೊತ್ತದ ಜಪಾನ್​ ವಿಸ್ಕಿ ಬಾಟಲಿ ಕಾಣೆ: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಪೊಂಪಿಯೊ ವಿಚಾರಣೆ

  ಸಂಸದರಾದ ಪಿ.ಸಿ. ಮೋಹನ್ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: