ಕೋಲಾರ (ಡಿ. 10): ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ನನ್ನ ಬಗ್ಗೆ ಕೆಲ ಅಪಪ್ರಚಾರ ನಡೆಯುತ್ತಿದೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ ಅವರು, ನಾನು ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ ಎಂಬ ವದಂತಿ ಹರಡಿದೆ. ಈ ಬಗ್ಗೆ ಸಾಮಾಜಿ ಜಾಲತಾಣದಲ್ಲಿಯೂ ಗಮನಿಸಿದ್ದೇನೆ. ನಾನು ಯಾರಿಗೆ ಹೇಳಿದ್ದೇನೆ ನಿವೃತ್ತಿ ಪಡಿದುಕೊಳ್ಳುವ ಬಗ್ಗೆ ಎಂದು ಪ್ರಶ್ನಿಸಿದರು. ನಾನು ಯಾವುದೇ ಸುದ್ದಿಗೋಷ್ಟಿ ಕರೆದು ಹೇಳಿಲ್ಲ. ಜನರ ಎದುರು ಹೇಳಿಲ್ಲ, ಬಹಿರಂಗವಾಗಿಯು ಹೇಳಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಕಿಡಿಕಾರಿದರು.
ರಾಜಕೀಯ ನಿವೃತ್ತಿ ಎಂಬ ಸುದ್ದಿಗಳನ್ನ ಗಮನಿಸಿದ ಕೆಲವರು ಗಣ್ಯರು, ಬೆಂಗಳೂರು, ಬೆಳಗಾವಿ, ವಿಜಯಪುರ ಭಾಗದಿಂದ ನೂರಾರು ಪೋನ್ ಕರೆಗಳು ಬರುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕಾರ್ಯನಿರತನಾಗಿದ್ದರೂ ಯಾವುದೇ ಕರೆಗಳನ್ನ ನಿರ್ಲಕ್ಷ್ಯ ಮಾಡದೇ ಎಲ್ಲರಿಗೂ ಸ್ಪಂದಿಸಿದ್ದೇನೆ. ರಾಜಕೀಯ ನಿವೃತ್ತಿ ನನ್ನೊಬ್ಬನ ನಿರ್ಧಾರ ಆಗಿರುವುದಿಲ್ಲ. ಮುಖಂಡರು, ಸಾರ್ವಜನಿಕರ ಅಭಿಪ್ರಾಯ ಕೂಡ ಮುಖ್ಯವಾಗುತ್ತದೆ. ರಾಜಕೀಯದಿಂದ ನಿವೃತ್ತಿಯಾಗುವಷ್ಟು ಸಮಯ ನನ್ನ ಬಳಿಯಂತು ಇಲ್ಲ. ನಾನು ಜನರ ಬಂಧನದಲ್ಲಿ ಸಿಲುಕಿದ್ದೇನೆ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನಹರಣ ಮಾಡಬೇಡಿ ಎಂದು ವದಂತಿಗಳ ಬಗ್ಗೆ ಆಕ್ರೋಶ ಹೊರಹಾಕಿದರು.
ಸದ್ಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ರಮೇಶ್‍ಕುಮಾರ್, ಹೋಬಳಿವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಚುನಾವಣಾ ಸ್ಪರ್ಧೆಯಲ್ಲಿ ತಮ್ಮ ಬೆಂಬಲಿಗರಲ್ಲಿ ಯಾವುದೇ ಅಸಮಾಧಾನ ಉಂಟಾಗದ ರೀತಿಯಲ್ಲಿ ಉಸ್ತುವಾರಿ ವಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ