ಕೋಲಾರ (ಮಾ. 25): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಕೇಸ್ ನ ಸಂತ್ರಸ್ತ ಮಹಿಳೆ ಪರವಾಗಿ ನಿಲ್ಲುತ್ತೇವೆ. ತನಿಖೆ ಎದುರಿಸಲು ಸಂತ್ರಸ್ತೆ ಹೆದರಬೇಕಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಸಂತ್ರಸ್ತೆ ಮಹಿಳೆ ಬಿಡುಗಡೆ ಮಾಡಿರುವ ಎರಡನೇ ವಿಡಿಯೋದಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಅವರು, ನಮ್ಮಕುಟುಂಬಕ್ಕೆ ಹಾಗೂ ನನಗೆ ನ್ಯಾಯ ಒದಗಿಸಲು ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸದನದಲ್ಲಿ ಈಗಾಗಲೇ ನ್ಯಾಯದ ಪರವಾಗಿ ಸಂತ್ರಸ್ತೆಗೆ ಬೆಂಬಲ ಸೂಚಿಸಿದ್ದೇವೆ. ವಿಡಿಯೋದಲ್ಲಿ ಗಮನಿಸಿದ ಹಾಗೆ ನನ್ನನ್ನು ಸೇರಿ ಮೂವರು ನಾಯಕರ ಸಹಕಾರವನ್ನ ಸಂತ್ರಸ್ತೆ ಕೇಳಿದ್ದಾರೆ. ಖಂಡಿತ ಆಕೆಯ ಪರವಾಗಿ ನಾವಿರುತ್ತೇವೆ ಎಂದು ತಿಳಿಸಿದರು.
ಎಸ್ ಐಟಿ ಎದುರು ಹೇಳಿಕೆ ನೀಡಲು ಒತ್ತಡವಿದ್ದರೆ, ನ್ಯಾಯಾಧೀಶರ ಎದುರೇ ಹೇಳಿಕೆ ನೀಡಲಿ
ಸಂತ್ರಸ್ತೆ ಸದ್ಯ ಅಜ್ಞಾತ ಸ್ಥಳದಲ್ಲಿದ್ದಾಳೆ, ಪಾಪ ಆಕೆ ನಮ್ಮನ್ನು ಮನವಿ ಮಾಡಿದ್ದಾಳೆ. ನಾವು ಮನುಷ್ಯರಲ್ಲವಾ ಅದಕ್ಕೆ ಅವರ ನೆರವಿಗೆ ಖಂಡಿತ ಧಾವಿಸುತ್ತೇವೆ. ಆದರೆ ಕಾಂಗ್ರೆಸ್ ನಾಯಕರ ನೆರವು ಮಾತ್ರ ಏತಕ್ಕೆ ಕೋರಿದ್ದಾಳೊ ಗೊತ್ತಿಲ್ಲ. ಒಬ್ಬ ಸಾಮಾನ್ಯನಾಗಿ ಸಹಾಯ ಮಾಡುವೆ. ತನಿಖೆ ಎದುರಿಸಲು ಸಂತ್ರಸ್ತೆ ಹೆದರ ಬೇಕಿಲ್ಲ, ನಮ್ಮದು ಅನಾಗರೀಕರ ಸಮಾಜವೇನಲ್ಲ, ಎಸ್ ಐಟಿ ಮುಂದೆ ಹೇಳಿಕೆ ನೀಡಲು ಒತ್ತಡ ಇದ್ದಲ್ಲಿ, ನೇರವಾಗಿ ಹೋಗಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಿ, ಅವರ ಮುಂದೆ ನೀಡುವ ಹೇಳಿಕೆಯೇ ಅಧಿಕೃತವಾಗಿರುತ್ತದೆ ಎಂದು ಸಲಹೆ ನೀಡಿದರು.
ಇದನ್ನು ಓದಿ: ಕಂಗನಾ ತಾಯಿಯಾಗಿ ಶಿವಣ್ಣನ ನಟಿ: ಸೀತಾರಾಮ ಕಲ್ಯಾಣದ ಬಳಿಕ ತಮಿಳು ಚಿತ್ರದಲ್ಲಿ ಭಾಗ್ಯಶ್ರೀ
ನನಗೂ ಹೆಣ್ಣು ಮಗಳಿದ್ದಾಳೆ, ಸಂತ್ರಸ್ತೆಯು ಮಗಳಂತೆ ಅಲ್ಲವೇ
ಒಬ್ಬ ಹೆಣ್ಣು ಮಗಳು ಸಂಕಷ್ಟದಲ್ಲಿದ್ದು ಬಾಯಿ ತೆರೆದು ಸಹಾಯ ಕೇಳಿದ್ದಾಳೆ. ಆಕೆ ನೆರವಿಗೆ ನಾವು ನಿಲ್ಲುತ್ತೇವೆ. ಸಾರ್ವಜನಿಕ ಜೀವನದಲ್ಲಿರುವ ನಾವು ಯಾರೇ ಸಹಾಯ ಕೇಳಿದರೂ ಅವರ ಸಹಾಯಕ್ಕೆ ನಿಲ್ಲುತ್ತೇವೆ, ಇದು ಮನುಷ್ಯ ಧರ್ಮ ಅಷ್ಟೆ. ಅಲ್ಲದೆ ಅಜ್ಞಾತ ಸ್ಥಳದಿಂದ ಹೊರಬಂದು ಧೈರ್ಯವಾಗಿ ಬಂದು ಪೊಲೀಸರ ಎದುರು ಹೇಳಿಕೆ ನೀಡಲಿ, ಆಕೆ ನೆರವಿಗೆ ನಾವೆಲ್ಲರೂ ನಿಲ್ಲತ್ತೇವೆ, ನನಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಆಕೆಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಲ್ಲವೇ, ಇವರು ಮಗಳಂತೆ ಎಂದು ಧೈರ್ಯ ತುಂಬಿದರು.
ಕಾಂಗ್ರೆಸ್ ನಲ್ಲಿ ಎಲ್ಲಾ ಗೌರವ ಸಿಕ್ಕಿದೆ, ಬೇರ್ಯಾವುದೆ ಸ್ಥಾನಮಾನ ಬೇಕಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ನಾಯಕರ ಪಟ್ಟಿಯಲ್ಲಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಿಗೆ, ಇತ್ತೀಚಿಗೆ ಪಕ್ಷದ ಚೌಕಟ್ಟಿನಲ್ಲಿ ಉನ್ನತ ಸ್ಥಾನಮಾನ ನೀಡುವ ಬಗ್ಗೆ ರಾಜ್ಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್, ನನಗೆ ಯಾವುದೇ ಸ್ಥಾನಮಾನ ಬೇಕಿಲ್ಲ, ಶ್ರೀನಿವಾಸಪುರ ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆಯಿಟ್ಟು ಮತನೀಡಿ ಗೆಲ್ಲಿಸಿದ್ದಾರೆ. ಅವರು ನೀಡಿರುವ ಸ್ತಾನಮಾನವೇ ಸದ್ಯಕ್ಕೆ ಸಾಕು. ಪಕ್ಷದ ಚೌಕಟ್ಟಿನಲ್ಲೂ ಎಲ್ಲಾ ಗೌರವ ಸಿಕ್ಕಿದೆ. ನನಗೆ ಈಗಾಗಲೇ 71 ವರ್ಷ ವಯಸ್ಸಾಗಿದೆ. ಕೋಲಾರ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸುವ ಮಹದಾಸೆಯನ್ನ ಹೊಂದಿರುವೆ. ಕೆಸಿ ವ್ಯಾಲಿ ನೀರು ಸಹ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಗೆ ಹರಿಯುತ್ತಿಲ್ಲ, ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ಯೋಜನೆಯ ಸಮರ್ಪಕ ಪಾಲು ನಮ್ಮ ಜಿಲ್ಲೆಗೆ ಸಿಕ್ಕರೆ ಅದಕ್ಕಿಂತ ಸಂತಸದ ವಿಚಾರ ನನಗೆ ಮತ್ತೊಂದಿಲ್ಲ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ