Karnataka Assembly Session: ಚಳಿಗಾಲದ ಅಧಿವೇಶನದ ಇಂದಿನ ಸದನದಲ್ಲಿ ರೇಪ್ ವಿಚಾರದ ಬಗ್ಗೆ ಸ್ಪೀಕರ್ ಮತ್ತು ಮಾಜಿ ಸ್ಪೀಕರ್ ಅವರು ಹಗುರವಾಗಿ ವರ್ತಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಖಂಡನೆಗೆ ಒಳಗಾಗಿದೆ.
ಬೆಳಗಾವಿ, ಡಿ. 16: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿ ಅತ್ಯಾಚಾರದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದು, ಆ ಮಾತನ್ನು ಹಾಲಿ ಸ್ಪೀಕರ್ ಆನಂದಿಸಿದ ವಿವಾದಾತ್ಮಕ ಘಟನೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಡೆದಿದೆ. ರೈತರ ಸಮಸ್ಯೆ ವಿಚಾರವಾಗಿ ಮಾತನಾಡುತ್ತಾ ಒಂದು ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೆಟ್ಸ್ ಎಂಜಾಯ್ ದ ಸಿಚುಯೇಶನ್ ಎಂದರು. ಆಗ ರಮೇಶ್ ಕುಮಾರ್ ಅವರು ಮಧ್ಯ ಪ್ರವೇಶಿಸಿ, ಯಾವಾಗ ರೇಪ್ ಅನಿವಾಯರ್ಯ ಆಗುತ್ತೋ ಆಗ ಮಲಗಿ ಆನಂದಿಸಬೇಕು ಎಂದು ಇಂಗ್ಲೀಷ್ನ ನುಡಿಯೊಂದನ್ನು ಪ್ರಸ್ತಾಪಿಸಿದರು. ಇದಕ್ಕೆ ಸ್ಪೀಕರ್ ಕಾಗೇರಿ ಯಾವ ಆಕ್ಷೇಪ ಕೂಡ ವ್ಯಕ್ತಪಡಿಸಲಿಲ್ಲ.
ಯಾವ ಸಂದರ್ಭ?: ವಿಧಾನಸಭೆಯಲ್ಲಿ ರೈತರ ಸಮಸ್ಯೆ ಬಗ್ಗೆ ಎಲ್ಲಾ ಸದಸ್ಯರು ಮಾತನಾಡಲು ಅವಕಾಶ ಕೇಳಿದ ವೇಳೆ ಘಟನೆ ನಡೆದಿದೆ. ಎಲ್ಲರಿಗೂ ಮಾತಾಡೋಕೆ ಅವಕಾಶ ನೀಡಿದರೆ ನಾನು ಕಲಾಪ ನಡೆಸೋದು ಹೇಗೆ ಎಂದು ಸ್ಪೀಕರ್ ಕಾಗೇರಿ ಅಸಹಾಯಕತೆ ತೋರ್ಪಡಿಸುತ್ತಾರೆ. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಅವರವರ ಕ್ಷೇತ್ರದ ಬಗ್ಗೆ ಸದಸ್ಯರು ಮಾತಾಡೋಕೆ ಎರಡು ನಿಮಿಷ ಸಮಯ ನೀಡಿ. ಸರ್ಕಾರದ ಉತ್ತರ ನಾಳೆ ಪಡೆಯಿರಿ ಎಂದು ಸ್ಪೀಕರ್ಗೆ ಸಲಹೆ ನೀಡಿದರು.
ಎಲ್ಲರಿಗೂ ಅವಕಾಶ ಕೊಟ್ಟಾಗ ಗಮನ ಸೆಳೆಯುವಯಷ್ಟು ಚರ್ಚೆಯ ಸಮಯ ಇರುವುದಿಲ್ಲ. ನೀವು ನೀವು ತೀರ್ಮಾನ ಮಾಡಿ ಎಂದು ಸ್ಪೀಕರ್ ಹೇಳಿದರು. ಬಳಿಕ ರಮೇಶ್ ಕುಮಾರ್ ಉದ್ದೇಶಿಸಿ ಹೇಳಿದ ಸ್ಪೀಕರ್, ರಮೇಶ್ ಕುಮಾರ್ ಅವರೆ ನಾನು ಲೆಟ್ಸ್ ಎಂಜಾಯ್ ದ ಸಿಚುಯೇಶನ್ ಎನ್ನುತ್ತೇನೆ. ಇದನ್ನ ಕಂಟ್ರೋಲ್ ಮಾಡಿ ನಿಯಂತ್ರಣದಲ್ಲಿಟ್ಟು, ಇದನ್ನ ಒಂದು ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗೋ ಪ್ರಯತ್ನ ಬಿಟ್ಟು ಹೀಗೆ ಮಾತಾಡ್ರಪ್ಪ ಅಂತ ಬಿಟ್ ಬಿಡೋದು ಎಂದರು.
ಆಗ ಎದ್ದು ನಿಂತ ರಮೇಶ್ ಕುಮಾರ್, ಒಂದು ಮಾತಿದೆ…. ವೆನ್ ರೇಪ್ ಈಸ್ ಇನ್ಎವಿಟಬಲ್ ಲೈ ಡೌನ್ ಅಂಡ್ ಎಂಜಾಯ್ ಇಟ್ (When Rape is inevitable, lie down and enjoy it- ಯಾವಾಗ ರೇಪ್ ಅನಿವಾರ್ಯ ಎಂಬಂತಾದಾಗ ಮಲಗಿ ಆನಂದಿಸಿಬಿಡಬೇಕು) ಎಂದು ಹೇಳಿದರು. ಇದಕ್ಕೆ ಸ್ಪೀಕರ್ ಕಾಗೇರಿ ಕೂಡ ಸಹಮತ ವ್ಯಕ್ತಪಡಿಸಿದಂತೆ ಮುಗುಳ್ನಕ್ಕರು.
ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗಿದೆ. ಹಾಲಿ ಸ್ಪೀಕರ್ ಮತ್ತು ಮಾಜಿ ಸ್ಪೀಕರ್ ಅವರ ವರ್ತನೆ ಬಗ್ಗೆ ಹಲವು ಕಿಡಿಕಾರಿದ್ಧಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂಥ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಸದನದ ಮರ್ಯಾದೆ ತೆಗೆಯುತ್ತಿದ್ದಾರೆಂಬ ಟೀಕೆ ವ್ಯಕ್ತವಾಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ