Sushma ChakreSushma Chakre
|
news18-kannada Updated:November 14, 2019, 12:54 PM IST
ಡಾ. ಸುಧಾಕರ್
ಬೆಂಗಳೂರು (ನ. 14): ನಿನ್ನೆಯಷ್ಟೇ ಸುಪ್ರೀಂಕೋರ್ಟ್ನಿಂದ ಅನರ್ಹ ಶಾಸಕರ ಅರ್ಜಿ ವಿಚಾರದಲ್ಲಿ ತೀರ್ಪು ಪ್ರಕಟವಾಗಿದೆ. ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಸಿಕ್ಕಿದೆ. ಇಂದು 16 ಅನರ್ಹ ಶಾಸಕರು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ ಡಾ. ಸುಧಾಕರ್, ರಾಜೀನಾಮೆ ನೀಡಿದ ಶಾಸಕರ ರಾಜಕೀಯ ಜೀವನವನ್ನೇ ಮುಗಿಸಲು ಹೊರಟಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ತಕ್ಕ ಉತ್ತರ ನೀಡಿದೆ ಎಂದಿದ್ದಾರೆ.
ಜೆಡಿಎಸ್- ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ನಾವು ಏಕಾಏಕಿ ಪಕ್ಷ ಬಿಟ್ಟು ಬಂದವರಲ್ಲ. ಕಳೆದ 14 ತಿಂಗಳ ಹಿಂದೆ ಅಪವಿತ್ರ ಮೈತ್ರಿ ಆಯಿತು. ಯಾವುದೇ ಮೈತ್ರಿ ಆಗಬೇಕಾದರೆ ಚುನಾವಣೆಗೆ ಮೊದಲು ಆಗಬೇಕು. ಆದರೆ ಕೇವಲ ಬಿಜೆಪಿಯನ್ನು ದೂರ ಇಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡರು. ಆದರೆ ಪಕ್ಷಗಳು ಒಂದಾದವೇ ಹೊರತು ನಮ್ಮ ಮನಸ್ಸುಗಳು ಒಂದಾಗಲಿಲ್ಲ. ನಮ್ಮ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ. ನಾವೆಲ್ಲ ಸ್ವಯಂ ಶಕ್ತಿಯಿಂದ ಗೆದ್ದು ಬಂದವರು. ನಮಗೆ 14ತಿಂಗಳಲ್ಲಿ ಸಾಕಷ್ಟು ನೋವು ಕೊಟ್ಟಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದಾರೆ. ಸ್ವಾಭಿಮಾನ ಇಲ್ಲದೇ ಇದ್ದರೆ ಅಧಿಕಾರ ಇದ್ದರೆಷ್ಟು ಬಿಟ್ಟರೆಷ್ಟು? ಹಾಗಾಗಿ ನಾವು ರಾಜೀನಾಮೆ ಕೊಟ್ಟು ಬಂದಿದ್ದೇವೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಉಪಚುನಾವಣೆ; ಇಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿರುವ ಎಚ್.ಡಿ. ಕುಮಾರಸ್ವಾಮಿ
ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬರುವುದು ಸುಲಭವಲ್ಲ. ಈಗ ಎರಡೂ ಪಕ್ಷಗಳವರು ಹೇಗೆ ಬೀದಿ ಜಗಳ ಮಾಡುತ್ತಿದ್ದಾರೆ ಎಂದು ನೋಡಿದ್ದೀರಿ. ನಾವು ಪೂರ್ಣ ಮನಸಿನಿಂದ ಬಿಜೆಪಿಗೆ ಬಂದಿದ್ದೇವೆ. ನಮ್ಮ ಮೇಲೆ ಜವಾಬ್ದಾರಿ ಇದೆ. ಇಂತಹ ಕ್ರೂರ, ವಿಕೃತ ಮನಸ್ಸಿನಿಂದ ಆದೇಶ ಕೊಟ್ಟ ರಮೇಶ್ ಕುಮಾರ್ ಅವರಂತಹ ಸ್ಪೀಕರ್ ಈ ರಾಜ್ಯದ ರಾಜಕಾರಣದಲ್ಲಿ ಮತ್ತೊಮ್ಮೆ ಬರಬಾರದು. ನಮ್ಮ ರಾಜಕೀಯ ಬದುಕನ್ನೇ ಮುಗಿಸಲು ಹೊರಟಿದ್ದ ಅವರಿಗೆ ಸುಪ್ರಿಂಕೋರ್ಟ್ ತಕ್ಕ ಉತ್ತರ ಕೊಟ್ಟಿದೆ ಎಂದಿದ್ದಾರೆ.
ಸಮ ಸಮಾಜ ನಿರ್ಮಾಣ ಮಾಡಬೇಕಾದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಉಳಿಯಬೇಕು. ಹಾಗಾಗಬೇಕಾದರೆ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕು. ಎಲ್ಲರ ಪ್ರಾರ್ಥನೆ ಫಲಿಸಿದೆ. ನಮಗೆ ನ್ಯಾಯ ಸಿಕ್ಕಿದೆ. ನಾವು ರಾಜ್ಯದ ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇವೆ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂದು ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
(ವರದಿ: ರಮೇಶ್ ಹಿರೇಜಂಬೂರು)
First published:
November 14, 2019, 12:54 PM IST