ಖಾಸಗಿ ಸಭೆಯ ವಿಡಿಯೋ ವೈರಲ್​ ವಿಚಾರ; ರಾಜಕೀಯ ವಿರೋಧಿಗಳಿಗೆ ಖಡಕ್​ ಉತ್ತರ ನೀಡಿದ ಸಿದ್ದರಾಮಯ್ಯ

ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ಶನಿವಾರ ರಾಜ್ಯದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದರು.

Rajesh Duggumane | news18-kannada
Updated:October 28, 2019, 2:56 PM IST
ಖಾಸಗಿ ಸಭೆಯ ವಿಡಿಯೋ ವೈರಲ್​ ವಿಚಾರ; ರಾಜಕೀಯ ವಿರೋಧಿಗಳಿಗೆ ಖಡಕ್​ ಉತ್ತರ ನೀಡಿದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು (ಅ.28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಭಾನುವಾರ ನಡೆದ ಖಾಸಗಿ ಸಭೆಯ ಮಾತುಕತೆ ಸೋರಿಕೆಯ ವಿಡಿಯೋ ಸೋರಿಕೆ ಆಗಿತ್ತು. ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದ ವಿಚಾರ ಪ್ರಮುಖವಾಗಿ ಹೈಲೈಟ್​ ಆಗಿತ್ತು. ಈ ವಿಚಾರವಾಗಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, “ನನ್ನ ಮನೆಯಲ್ಲಿ ನಡೆದ ಖಾಸಗಿ ಮಾತುಕತೆಯ ವಿಡಿಯೋದ ತಪ್ಪು ವ್ಯಾಖ್ಯಾನವನ್ನು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ ಮತ್ತು ಅದರಲ್ಲಿಯೇ ವಿಕೃತಾನಂದ ಪಡುತ್ತಿದ್ದಾರೆ. ಇದು ನನಗೆ ಹೊಸತಲ್ಲ. ಈ ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ. ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ,” ಎಂದಿದ್ದಾರೆ.ಮುಂದುವರಿದು, “ನಾನು ಜಾತಿವಾದಿ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್,ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು. ಇದು ನನ್ನ ಜಾ ತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ,” ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.“ನಾನು ಜಾತಿ ರಾಜಕೀಯ ಮಾಡುತ್ತಿದ್ದೇನೆ ಎಂದು ಆರೋಪಿಸುವವರು ಅವರ ಪಕ್ಷಗಳ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಗಾಂಧಿ ಅಂಬೇಡ್ಕರ್,ಬಸವಣ್ಣ ಮತ್ತು ಕುವೆಂಪು ವಿಚಾರಧಾರೆಗಳೆಷ್ಟು ಇವೆ ಎನ್ನುವುದನ್ನು ಬಹಿರಂಗಪಡಿಸಲಿ. ಇದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ,” ಎಂದು ಸವಾಲು ಹಾಕಿದ್ದಾರೆ ಸಿದ್ದರಾಮಯ್ಯ.“ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ. ಲಿಂಗಾಯತರು ಯಡಿಯೂರಪ್ಪನವರಿಂದ, ಒಕ್ಕಲಿಗರು ಜೆಡಿಎಸ್ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಗೆಳೆಯರ ಮಾತಿಗೆ ನಾನು ಸಹಮತ ಸೂಚಿಸಿದ್ದು ನಿಜ. ಜನ ಜಾತ್ಯತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ,” ಎಂದು ಅವರು ಪ್ರಶ್ನಿಸಿದರು.“ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಪಸವ್ಯಗಳು ಹುಟ್ಟಿಕೊಳ್ಳುತ್ತವೆ. ವೈಯುಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ದತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಜನರಿಗಾಗಿ ಹೋರಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ನನ್ನ ರಾಜಕೀಯ ವಿರೋಧಿಗಳಿಗೆ ಧನ್ಯವಾದಗಳು,”ಎಂದರು.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ಶನಿವಾರ ರಾಜ್ಯದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಮತ್ತಿತರರು ಅಸಮಾಧಾನ ತೋರ್ಪಡಿಸಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯಗೆ ನನ್ನ ಮೇಲೆ ಲವ್ ಜಾಸ್ತಿ; ಜೆಡಿಎಸ್ ಧ್ವಜ ಹಿಡಿದ ವಿಚಾರದಲ್ಲಿ ಮೌನ ಮುರಿದ ಡಿಕೆಶಿ

ವಿಡಿಯೋದಲ್ಲಿ, ಮಾತನಾಡಿದ್ದ ವೆಂಕಟೇಶ್, “ಡಿಕೆ ಶಿವಕುಮಾರ್ ಜೆಡಿಎಸ್ ಬಾವುಟ ಹಿಡೀತಾನೆ ಅಂದ್ರೆ ಏನ್ರೀ ಅರ್ಥ?” ಎಂದು ಆಕ್ಷೇಪಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಧ್ವನಿಗೂಡಿಸುತ್ತಾರೆ: “(ದೆಹಲಿಯಿಂದ) ಬರುವಾಗ ಜೆಡಿಎಸ್, ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬಂದರೆ ಏನ್ ಹೇಳೋದು? ನಾನು ನಿನ್ನೆ ತಾನೆ ಗದಗ್​ನಲ್ಲಿ ಹೇಳಿದ್ದೀನಿ, ಅವರ (ಜೆಡಿಎಸ್) ಸಹವಾಸ ಇಲ್ಲ ಅಂತ,” ಎಂದಿದ್ದರು.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಡಿಕೆ ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಾಪ್ತರಾಗಿದ್ದಾರೆ. ಡಿಕೆಶಿ ಜೈಲಿಗೆ ಹೋಗಿ ಬಂದ ಬಳಿಕವೂ ಅವರ ಆಪ್ತತೆ ಮುಂದುವರಿದಿದೆ. ಈ ಬಗ್ಗೆ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದರು.

First published:October 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading