HD Deve Gowda: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ 87ನೇ ಜನ್ಮದಿನ

HD Deve Gowda Birthday: ಸ್ವತಂತ್ರವಾಗಿ ಅದೆಷ್ಟೋ ಅಡೆತಡೆಗಳನ್ನ ಎದುರಿಸಿ ರಾಜಕೀಯವಾಗಿ ಬೆಳೆದ ದೇವೇಗೌಡರ ರಾಜಕೀಯ ಕುಶಲತೆ ನಿರ್ವಿವಾದವಾದುದು. 87ರ ಇಳಿ ವಯಸ್ಸಿನಲ್ಲೂ ಅವರು ಪಕ್ಷ ಸಂಘಟನೆಗಾಗಿ ಓಡಾಡುತ್ತಿರುವುದು ಇಲ್ಲಿ ಗಮನಾರ್ಹ.

ದೇವೇಗೌಡರನ್ನು ಭೇಟಿ ಮಾಡಿ ಜನ್ಮದಿನದ ಶುಭಕೋರಿದ ಡಿಕೆಶಿ

ದೇವೇಗೌಡರನ್ನು ಭೇಟಿ ಮಾಡಿ ಜನ್ಮದಿನದ ಶುಭಕೋರಿದ ಡಿಕೆಶಿ

  • Share this:
    ಬೆಂಗಳೂರು(ಮೇ 18): ಇವತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ 87ನೇ ಜನ್ಮದಿನ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಶುಭ ಕೋರಿದರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ 1933ರಲ್ಲಿ ಜನಿಸಿದ ದೇವೇಗೌಡರು 1953ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕಾರಣಕ್ಕೆ ಪ್ರವೇಶ ಕೊಟ್ಟರು. 1962ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಸತತ ಆರು ಬಾರಿ ಇದೇ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿ ತ್ರಿವಿಕ್ರಮ ಎನಿಸಿದರು.



    ಎರಡು ಬಾರಿ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಅವರು ವಿವಿಧ ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಜನತಾ ದಳ ಪಕ್ಷ ಸ್ಥಾಪನೆ ಮಾಡಿದರು. 1994ರಲ್ಲಿ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಭಾರತದ 11ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

    ಸ್ವತಂತ್ರವಾಗಿ ಅದೆಷ್ಟೋ ಅಡೆತಡೆಗಳನ್ನ ಎದುರಿಸಿ ರಾಜಕೀಯವಾಗಿ ಬೆಳೆದ ದೇವೇಗೌಡರ ರಾಜಕೀಯ ಕುಶಲತೆ ನಿರ್ವಿವಾದವಾದುದು. 87ರ ಇಳಿ ವಯಸ್ಸಿನಲ್ಲೂ ಅವರು ಪಕ್ಷ ಸಂಘಟನೆಗಾಗಿ ಓಡಾಡುತ್ತಿರುವುದು ಇಲ್ಲಿ ಗಮನಾರ್ಹ.
    First published: