ರಾಜ್ಯಸಭೆ ಚುನಾವಣೆ ಅಖಾಡಕ್ಕೆ ದೇವೇಗೌಡ; ಮೋದಿ ಸರ್ಕಾರ ಹಣಿಯಲು ಗೌಡರಿಗೆ ಕೈ ಬೆಂಬಲ

ಬಿಜೆಪಿಯಿಂದ 3ನೇ ಅಭ್ಯರ್ಥಿ ಕಣಕ್ಕಿಳಿಯದೇ ಇದ್ದಲ್ಲಿ ದೇವೇಗೌಡರ ವಿಜಯ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಅವರು ಗೆಲುವು ಸಾಧಿಸಿದರೆ ರಾಜ್ಯಸಭೆಯಲ್ಲಿ ಇಬ್ಬರು ಮಾಜಿ ಪ್ರಧಾನಿಗಳ ಉಪಸ್ಥಿತಿ ಇದ್ದಂತಾಗುತ್ತದೆ.

ಸೋನಿಯಾ ಗಾಂಧಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಎಚ್.ಡಿ.ದೇವೇಗೌಡ. (ಸಂಗ್ರಹ ಚಿತ್ರ)

ಸೋನಿಯಾ ಗಾಂಧಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಎಚ್.ಡಿ.ದೇವೇಗೌಡ. (ಸಂಗ್ರಹ ಚಿತ್ರ)

 • News18
 • Last Updated :
 • Share this:
  ಬೆಂಗಳೂರು(ಜೂನ್ 08): “ರಾಜಕಾರಣಿಗಳು ಯಾವತ್ತೂ ನಿವೃತ್ತಿ ಹೊಂದುವುದಿಲ್ಲ, ಅವರು ಅಪ್ರಸ್ತುತರಾಗಿ ಮರೆಯಾಗುತ್ತಾರೆ” ಎಂದು ರಾಜಕೀಯ ವಲಯದಲ್ಲಿ ಮಾತಾಡಿಕೊಳ್ಳುವುದುಂಟು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೂ ಇದೇ ಸಾಲಿಗೆ ಬರುವವರು. 87 ವರ್ಷದ ಗೌಡರು ರಾಜಕೀಯದಿಂದ ಹಿಂಸರಿಯುವ ಯೋಚನೆ ಯಾವತ್ತೂ ಮಾಡಿದವರಲ್ಲ. ಈಗ ಮತ್ತೊಮ್ಮೆ ಹಿಂಬಾಗಿಲ ಮೂಲಕ ಸಂಸತ್ತು ಪ್ರವೇಶಿಸಲಿದ್ಧಾರೆ. ಇಲ್ಲಿ ಗಮನಾರ್ಹ ಸಂಗತಿ ಎಂದರೆ ದೇವೇಗೌಡರು ಯಾವತ್ತೂ ಹಿಂಬಾಗಿಲ ಪ್ರವೇಶ ಇಚ್ಛಿಸಿದವರಲ್ಲ. ಚುನಾವಣೆಯ ಅಖಾಡದಲ್ಲಿ ಸೆಣಸಾಡಿ ಗೆದ್ದು ನೇರವಾಗಿ ಸದನ ಪ್ರವೇಶಿಸಬೇಕೆನ್ನುವುದು ಇಚ್ಛೆ. ಆದರೆ, ಬದಲಾದ ಸಂದರ್ಭದಲ್ಲಿ ಗೌಡರು ಅನಿವಾರ್ಯವಾಗಿ ಸಂಸತ್ತಿನ ಮೇಲ್ಮನೆಗೆ ಕಾಲಿಡುವಂತಾಗಿದೆ.

  1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಎರಡು ವರ್ಷ ರಾಜ್ಯಸಭಾ ಸದಸ್ಯರಾಗಿದ್ದರು. ಇದೊಂದು ಹೊರತುಪಡಿಸಿದರೆ ಉಳಿದಂತೆ ಅವರು ಎಂದಿಗೂ ಸಂಸತ್ ಹಾಗೂ ವಿಧಾನಸಭೆಯ ಮೇಲ್ಮನೆಗಳಿಗೆ ಅಡಿ ಇಟ್ಟವರಲ್ಲ. 1962ರಿಂದಲೂ ಅವರು 16 ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನ ಎದುರಿಸಿದ್ಧಾರೆ. ಅದರಲ್ಲಿ ಕಳೆದ ಬಾರಿಯ ತುಮಕೂರು ಲೋಕಸಭಾ ಕ್ಷೇತ್ರ ಸೇರಿ ಮೂರು ಬಾರಿ ಮಾತ್ರ ಸೋತಿದ್ಧಾರೆ. ಏಳು ಬಾರಿ ವಿಧಾನಸಭೆ ಹಾಗೂ ಆರು ಬಾರಿ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ.

  ನೇರ ಹಣಾಹಣಿಯನ್ನೇ ಬಯಸುವ ದೇವೇಗೌಡರು ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ತೋರಿದ್ದರು. ಆದರೆ, ಹಿಂಬಾಗಿಲ ಮೂಲಕವಾದರೂ ಸಂಸತ್ ಪ್ರವೇಶಿಸುವುದು ಪಕ್ಷಕ್ಕೆ ಒಳ್ಳೆಯದು ಎಂದು ಜೆಡಿಎಸ್ ಶಾಸಕರು ಮತ್ತು ನಾಯಕರು ನೀಡಿದ ಸಲಹೆಯನ್ನು ಗೌಡರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ದೇವೇಗೌಡರಿಗೆ ಬೆಂಬಲ ನೀಡಲು ಒಪ್ಪಿಕೊಂಡಿದೆ. ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆಯೊಬ್ಬರೇ ಸ್ಪರ್ಧಿಸಲಿದ್ಧಾರೆ. ಖರ್ಗೆ ಗೆಲುವು ಖಚಿತವಿದೆ. ಅದು ಬಿಟ್ಟು ಕಾಂಗ್ರೆಸ್ ಬಳಿ 16 ಹೆಚ್ಚುವರಿ ಮತಗಳಿವೆ. ಈ ವೋಟುಗಳು ದೇವೇಗೌಡರ ಗೆಲುವನ್ನು ಸುಗಮಗೊಳಿಸಲಿವೆ.

  ಇದನ್ನೂ ಓದಿ: ಖರ್ಗೆಯವರನ್ನು ಅಭ್ಯರ್ಥಿಯಾಗಿಸಿದ್ದೇವೆ, ಕಾಂಗ್ರೆಸ್​ನಿಂದ ಎರಡನೇ ಅಭ್ಯರ್ಥಿ ಹಾಕಲ್ಲ; ಸಿದ್ದರಾಮಯ್ಯ

  ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಗೌಡರನ್ನು ರಾಜ್ಯಸಭೆಗೆ ತರಲು ಆಸಕ್ತಿ ತೋರಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಪೂರ್ಣ ಬೆಂಬಲ ನೀಡುತ್ತೇವೆ. ಎಲ್ಲಾ ಹೆಚ್ಚುವರಿ ವೋಟುಗಳನ್ನೂ ಹಾಕಿಸುತ್ತೇವೆ ಎಂದು ದೇವೇಗೌಡರಿಗೆ ಸೋನಿಯಾ ಭರವಸೆ ನೀಡಿದ್ದಾರೆನ್ನಲಾಗಿದೆ.

  ಜೂನ್ 19ರಂದು ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿಗೆ 2 ಸ್ಥಾನ ಸುಲಭವಾಗಿ ದಕ್ಕಲಿದೆ. ಕಾಂಗ್ರೆಸ್​ಗೆ ಒಂದು ಸ್ಥಾನ ಖಚಿತವಾಗಿದೆ. ಇನ್ನುಳಿದ ಒಂದು ಸ್ಥಾನ ಪಡೆಯಲು ಜೆಡಿಎಸ್​ಗೆ ಕಾಂಗ್ರೆಸ್ ಬೆಂಬಲ ಅನಿವಾರ್ಯವಾಗಿದೆ. ಜೆಡಿಎಸ್​ನ 34 ಶಾಸಕರಿದ್ಧಾರೆ. ಗೆಲ್ಲಲು ಕನಿಷ್ಠ 48 ಮೊದಲ ಆದ್ಯತೆ ವೋಟುಗಳ ಅಗತ್ಯ ಇದೆ. ಜೆಡಿಎಸ್​ಗೆ ಇನ್ನೂ 14 ವೋಟುಗಳು ಬೇಕಾಗುತ್ತದೆ. ಕಾಂಗ್ರೆಸ್​ನಲ್ಲಿರುವ ಹೆಚ್ಚುವರಿ 16 ವೋಟುಗಳು ಜೆಡಿಎಸ್ ಗೆಲುವನ್ನು ಖಾತ್ರಿಗೊಳಿಸಲಿವೆ.

  ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೊಮ್ಮೆ ಒಂದಾಗುತ್ತಿರುವುದು ಕುತೂಹಲದ ಬೆಳವಣಿಗೆ ಎನಿಸಿದೆ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕಳೆದ ವರ್ಷ ಪತನವಾದ ನಂತರ ಎರಡೂ ಪಕ್ಷಗಳ ಸಂಬಂಧ ಹಳಸಿಹೋಗಿದೆ. ಸರ್ಕಾರ ಉರುಳಿಬೀಳಲು ರಾಜ್ಯದ ಕೆಲ ಕಾಂಗ್ರೆಸ್ ನಾಯಕರೇ ಕಾರಣ ಎಂದು ದೇವೇಗೌಡ ಮತ್ತವರ ಕುಟುಂಬದ ಸದಸ್ಯರು ನೇರ ಆರೋಪ ಮಾಡಿದ್ದರು. ಅದರಲ್ಲೂ ಸಿದ್ದರಾಮಯ್ಯನವರತ್ತಲೇ ಅವರು ನೇರ ಬೊಟ್ಟು ತೋರಿಸಿದ್ದರು.

  ಕೆಲ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಕಾಂಗ್ರೆಸ್​ನಲ್ಲಿರುವ ಸಿದ್ದರಾಮಯ್ಯನವರ ಬೆಂಬಲಿಗರು ರಾಜ್ಯಸಭಾ ಚುನಾವಣೆಯಲ್ಲಿ ಗೌಡರಿಗೆ ಬೆಂಬಲ ನೀಡಲು ವಿರೋಧಿಸಿದ್ದರಂತೆ. ಗೌಡರಿಗೆ ರಾಜ್ಯಸಭೆ ಪ್ರವೇಶಿಸಲು ಅವಕಾಶ ಕೊಟ್ಟರೆ ಅವರಿಗೆ ರಾಜಕೀಯ ಮರುಜನ್ಮ ಕೊಟ್ಟಂತಾಗುತ್ತದೆ. ದಿನೇ ದಿನೇ ದುರ್ಬಲಗೊಳ್ಳುತ್ತಿರುವ ಜೆಡಿಎಸ್ ಪಕ್ಷದ ಪುನಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ಕೆಲವರು ಎಚ್ಚರಿಸಿದ್ದಾರೆನ್ನಲಾಗಿದೆ. ಆದರೆ, ಸೋನಿಯಾ ಗಾಂಧಿ ಅವರಿಗೆ ಮೋದಿ ಸರ್ಕಾರವನ್ನು ಸಂಸತ್​ನಲ್ಲಿ ಎದುರಿಸುವಂಥ ಪ್ರಬಲ ಮುಖಂಡರು ಬರುವುದು ಮುಖ್ಯ. ಹಾಗಾಗಿ, ಕರ್ನಾಟಕದ ಕೆಲ ಕಾಂಗ್ರೆಸ್ಸಿಗರ ಆತಂಕಕ್ಕೆ ಅವರು ಕಿವಿಗೊಟ್ಟಿಲ್ಲ.

  ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ದೇವೇಗೌಡರಿಂದ ನಾಳೆ ನಾಮಪತ್ರ: ಹೆಚ್​ಡಿಕೆ ಟ್ವೀಟ್

  ಗೌಡರಿಗೆ ಬೆಂಬಲ ನೀಡಲು ಬೇರೆ ರಾಜಕೀಯ ಲೆಕ್ಕಾಚಾರವೂ ಅಡಗಿದೆ. ರಾಜ್ಯಸಭೆಯ ನಾಲ್ಕನೇ ಸ್ಥಾನ ಅನಿಶ್ಚಿತವಾಗಿರುವುದರಿಂದ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್ ವೋಟುಗಳನ್ನು ಇಬ್ಭಾಗ ಮಾಡುವ ಸಾಧ್ಯತೆ ಇತ್ತು. ಒಂದು ವೇಳೆ ದೇವೇಗೌಡರು ಬಿಟ್ಟು ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಜೆಡಿಎಸ್ ವೋಟುಗಳು ನಿಜವಾಗಿಯೂ ಛಿದ್ರಗೊಂಡು ಬಿಜೆಪಿಗೆ ಗೆಲುವು ದೊರಕುವ ಸಾಧ್ಯತೆ ಇಲ್ಲದಿಲ್ಲ. ದೇವೇಗೌಡರು ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿ ಹಾಕುವ ಸಾಧ್ಯತೆ ಇರುವುದಿಲ್ಲ. ಯಾಕೆಂದರೆ ಪ್ರಬಲ ಒಕ್ಕಲಿಗ ಸಮುದಾಯ ಮುನಿಸಿಕೊಂಡರೆ ಎಂಬ ಭಯ ಬಿಜೆಪಿಗೆ ಇದ್ದೇ ಇದೆ.

  ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೇ ಅವರದ್ದೇ ಲೆಕ್ಕಾಚಾರಗಳಿವೆ. ಒಕ್ಕಲಿಗ ನಾಯಕರಾಗಿರುವ ಅವರು ಗೌಡರಿಗೆ ಬೆಂಬಲ ನೀಡಿದರೆ ತಮ್ಮ ಸಮುದಾಯದ ಬೆಂಬಲವೂ ಸಿಗುತ್ತದೆ ಎಂಬುದು ಅವರ ಎಣಿಕೆ.

  ಬಿಜೆಪಿಯಿಂದ 3ನೇ ಅಭ್ಯರ್ಥಿ ಕಣಕ್ಕಿಳಿಯದೇ ಇದ್ದಲ್ಲಿ ದೇವೇಗೌಡರ ವಿಜಯ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಅವರು ಗೆಲುವು ಸಾಧಿಸಿದರೆ ರಾಜ್ಯಸಭೆಯಲ್ಲಿ ಇಬ್ಬರು ಮಾಜಿ ಪ್ರಧಾನಿಗಳ ಉಪಸ್ಥಿತಿ ಇದ್ದಂತಾಗುತ್ತದೆ. ಮನಮೋಹನ್ ಸಿಂಗ್ ಅವರು ಈಗಾಗಲೇ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈಗ ಸಂಸತ್​ಗೆ ಮಣ್ಣಿನ ಮಗನ ಪ್ರವೇಶದಿಂದ ರಾಜ್ಯ ರಾಜಕಾರಣದ ಸಮೀಕರಣ ಕೂಡ ಬದಲಾಗಬಹುದು.

  ವರದಿ: ಡಿ.ಪಿ. ಸತೀಶ್
  First published: