ಮಾಜಿ ಪ್ರಧಾನಿ ದೇವೇಗೌಡ ಮತ್ತು ಪತ್ನಿಗೆ ಕೋವಿಡ್ ಸೋಂಕು; ಮಣಿಪಾಲ ಆಸ್ಪತ್ರೆಗೆ ದಾಖಲು

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಹೆಚ್ ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅವರ ಮಗಳ ಮನೆಯಲ್ಲಿರುವ ಎಲ್ಲರಿಗೂ ಇದೀಗ ಪರೀಕ್ಷೆ ನಡೆಸಲಾಗುತ್ತಿದೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  ಬೆಂಗಳೂರು(ಮಾ. 31): ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಇಬ್ಬರಿಗೂ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅವರಿಬ್ಬರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವೇಗೌಡರ ಜೊತೆ ಸಂಪರ್ಕ ಇದ್ದವರನ್ನ ಸೆಲ್ಫ್ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ. ದೇವೇಗೌಡರೊಂದಿಗೆ ಮನೆಯಲ್ಲಿದ್ದ ಮಗಳು ಶೈಲಜಾ, ಮನೆಗೆಲಸದವರು, ಗನ್ ಮ್ಯಾನ್​ಗಳು, ಆಪ್ತ ಸಹಾಯಕರು ಮೊದಲಾದವರು ಕ್ವಾರಂಟೈನ್​ಗೆ ಒಳಗಾಗುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ಇವರೆಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲು ವೈದ್ಯರ ತಂಡವೊಂದು ಸದ್ಯದಲ್ಲೇ ಪದ್ಮನಾಭನಗರದಲ್ಲಿರುವ ಪಿಎಂ ನಿವಾಸಕ್ಕೆ ಭೇಟಿ ನೀಡಲಿದೆ.

  ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಿಗಳು ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ಧಾರೆ. “ಹಿರಿಯರು, ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗವಡರು ಹಾಗೂ ಅವರ ಧರ್ಮಪತ್ನಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಸುದ್ದಿ ತಿಳಿಯಿತು. ವೈದ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಬಗ್ಗೆ ಖುದ್ದಾಗಿ ಮಾಹಿತಿ ಪಡೆಯಲಿದ್ದೇನೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರೂ ಕೂಡ ತಮಗೆ ಹಾಗೂ ಪತ್ನಿಗೆ ಕೋವಿಡ್ ಸೋಂಕು ಇರುವ ವಿಚಾರವನ್ನು ದೃಢಪಡಿಸಿ ಟ್ವೀಟ್ ಮಾಡಿದ್ಧಾರೆ. ಕೆಲ ದಿನಗಳ ಹಿಂದಿನಿಂದ ತಮ್ಮನ್ನು ಮುಖತಃ ಸಂಪರ್ಕಿಸಿದ ಎಲ್ಲರೂ ಪರೀಕ್ಷೆಗೆ ಒಳಪಡಬೇಕೆಂದು ಮನವಿ ಮಾಡಿರುವ ಅವರು ತಮ್ಮ ಅನಾರೋಗ್ಯದ ಬಗ್ಗೆ ಪಕ್ಷದ ಕಾರ್ಯಕರ್ತರು ಆತಂಕಗೊಳ್ಳಬಾರದೆಂದಿದ್ದಾರೆ.

  ಇದನ್ನೂ ಓದಿ: ಮೇಟಿ ಪ್ರಕರಣದಲ್ಲಿ ಏನಾಯಿತು ಆತ್ಮಾವಲೋಕನವಾಗಲಿ: ಕಾಂಗ್ರೆಸ್ಸಿಗರನ್ನು ಕುಟುಕಿದ ಬೊಮ್ಮಾಯಿ

  ದೇವೇಗೌಡ ದಂಪತಿಗೆ ಕೊರೋನಾ ಪಾಸಿಟಿವ್ ಬಂದ ವಿಚಾರ ಅವರ ಕುಟುಂಬವರ್ಗದವರನ್ನು ಆತಂಕಕ್ಕೆ ದೂಡಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಣಿಪಾಲ್ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ತಮ್ಮ ತಂದೆಗೆ ನೀಡಲಾಗುವ ಶುಶ್ರೂಷೆ ಬಗ್ಗೆ ಚರ್ಚೆ ನಡೆಸಿದ್ದಾರೆ. ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಅವರೂ ಕೂಡ ಮಣಿಪಾಲ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಅತ್ತೆ ಮಾವನ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವುದಷ್ಟೇ ಅಲ್ಲದೇ ಚಿಕಿತ್ಸೆ ಬಗ್ಗೆ ಕೆಲ ಸಲಹೆಗಳನ್ನೂ ಮಂಜುನಾಥ್ ಅವರು ನೀಡುತ್ತಿದ್ದಾರೆನ್ನಲಾಗಿದೆ.

  ವರದಿ: ಚಿದಾನಂದ ಪಟೇಲ್
  Published by:Vijayasarthy SN
  First published: