ಸಾಗರ(ಜ.17): ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ವಿಧಾನಸಭಾ ಕ್ಷೇತ್ರದ (Sagar Assembly Constituency) ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ (LT Thimmappa Hegde) ನಿಧನರಾಗಿದ್ದಾರೆ. 94 ವರ್ಷದ ಸಾಗರ ತಾಲೂಕಿನ ಲಿಂಗದಹಳ್ಳಿ ಬಳಿಯ ಮಡಸೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ತಿಮ್ಮಪ್ಪ ಹೆಗಡೆ ಎರಡು ಬಾರಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಸಹಕಾರು ಧುರೀಣರಾಗಿದ್ದ ತಿಮ್ಮಪ್ಪ ಹೆಗಡೆಯವರು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಸ್ಥಾಪನೆ ಸೇರಿದಂತೆ ಅಂತರರಾಜ್ಯ ಸಂಸ್ಥೆ ಕ್ಯಾಂಪ್ಕೋ, ಸಾಗರದ ಆಪ್ಸ್ಕೋಸ್ನಂತಹ ಸಂಸ್ಥೆ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕೂಡು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ, ಅದರಂತೆ ಬದುಕಿದ್ದ ಎಲ್.ಟಿ. ತಿಮ್ಮಪ್ಪ ಹೆಗಡೆ ಪತ್ನಿ ಸಾವಿತ್ರಮ್ಮ, ಪುತ್ರರಾದ ತಿಮ್ಮಪ್ಪ ಹಾಗೂ ಅಶೋಕ, ಸೊಸೆ, ಮೊಮ್ಮಕ್ಕಳು ಮತ್ತು ತಮ್ಮ ಜೊತೆಗಿದ್ದ ಸಹೋದರ ಗಣಪತಿ ಹೆಗಡೆ ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಕಾಂಗ್ರೆಸ್ನಿಂದ ಸಾಗರ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಗೆಲುವು ಕಂಡಿದ್ದ ಹೆಗಡೆಯವರು 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.
ಅಲ್ಲದೇ ಸಾಗರದ ಶಿಕ್ಷಣ ಸಂಸ್ಥೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್ಬಿ ಕಾಲೇಜು, ಪ್ರಗತಿ ಸಂಯುಕ್ತ ಶಾಲೆ ಮೊದಲಾದವುಗಳ ಸ್ಥಾಪನೆಯಲ್ಲಿ ಭಾಗವಹಿಸಿ ಸಂಸ್ಥೆಯ ಉಪಾಧ್ಯಕ್ಷ ಹುದ್ದೆಯನ್ನು ಬಹುಕಾಲ ನಿರ್ವಹಿಸಿದ್ದರು. ಹೊಸನಗರದ ರಾಮಚಂದ್ರಾಪುರ ಮಠದ ಚಟುವಟಿಕೆಯಲ್ಲಿ ಮುಂಚೂಣಿಯ ನಾಯಕತ್ವ ವಹಿಸಿದ್ದರು. ಇದರೊಂದಿಗೆ ಕೇಂದ್ರ ಸಾಂಬಾರು ಮಂಡಳಿಯ ನಿರ್ದೇಶಕರಾಗಿ, ಭೂ ನ್ಯಾಯ ಮಂಡಳಿ, ಲ್ಯಾಂಡ್ ಗ್ರಾಂಟ್ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ