Vinay Kulkarni: ಮಾಜಿ ಸಚಿವ ವಿನಯ್ ಕುಲಕರ್ಣಿಗೆ 14 ದಿನ ನ್ಯಾಯಾಂಗ ಬಂಧನ
ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಜೆಎಂಎಫ್ ಸಿ 3ನೇ ನ್ಯಾಯಾಲಯವು ಇಂದು ವಿನಯ್ ಕುಲಕರ್ಣಿ ಅವರನ್ನ ವಿಚಾರಣೆ ನಡೆಸಿ, ಸಿಬಿಐ ವಶದಿಂದ ವಿನಯ್ ಕುಲಕರ್ಣಿ ಅವರನ್ನು ನವೆಂಬರ್ 23 ರವರೆಗೆ(14 ದಿನಗಳ ಕಾಲ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ
ಹುಬ್ಬಳ್ಳಿ(ನವೆಂಬರ್. 09): ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಧಾರವಾಡ ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಜೆಎಂಎಫ್ ಸಿ 3ನೇ ನ್ಯಾಯಾಲಯವು ಇಂದು ವಿನಯ್ ಕುಲಕರ್ಣಿ ಅವರನ್ನ ವಿಚಾರಣೆ ನಡೆಸಿ, ಸಿಬಿಐ ವಶದಿಂದ ವಿನಯ್ ಕುಲಕರ್ಣಿ ಅವರನ್ನು ನವೆಂಬರ್ 23 ರವರೆಗೆ(14 ದಿನಗಳ ಕಾಲ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನವೆಂಬರ್ 9 ರವರೆಗೂ ಸಿಬಿಐ ಕಸ್ಟಡಿಗೆ ನೀಡಿದ್ದ ಇಲ್ಲಿನ ನ್ಯಾಯಾಲಯವು ಸೋಮವಾರ ಬೆಳಿಗ್ಗೆ ಖುದ್ದು ಹಾಜರಾಗಲು ಸೂಚಿಸಿತ್ತು. ಇದರಂತೆ ಅವರನ್ನ ನ್ಯಾಯಲಯಕ್ಕೆ ಕರೆತರಲು ಸಿದ್ಧತೆಯನ್ನು ಕೂಡ ಮಾಡಿಕೊಂಡಿತ್ತು.
ಆದರೆ, ಅವರ ಬೆಂಬಲಿಗರು ಅಪಾರ ಪ್ರಮಾಣದಲ್ಲಿ ಸೇರುವುದರಿಂದ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂಬ ದೃಷ್ಟಿಯಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯ ಸಿಎಆರ್ ಮೈದಾನದ ಕಚೇರಿ ಮೂಲಕವೇ ವಿಡಿಯೋ ಕಾನ್ಫರೆನ್ಸ್ ನಡೆಸಲಾಯಿತು.
ಏನಿದು ಪ್ರಕರಣ?
ಧಾರವಾಡ ಜಿ.ಪಂ. ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಯೋಗೇಶ್ ಗೌಡ ಅವರನ್ನು 2016, ಜೂನ್ 15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಜಿಮ್ನ ಹೊರಗೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿ ಕೊಲೆ ಮಾಡಲಾಗಿತ್ತು. ಬೈಕ್ನಲ್ಲಿ ಬಂದಿದ್ದ ಸುಪಾರಿ ಹಂತಕರು ಈ ಕೃತ್ಯ ಎಸಗಿದ್ದರು.
ಆ ಘಟನೆ ಬಳಿಕ ಪೊಲೀಸರು ಧಾರವಾಡದ ಆರು ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. 2019, ಸೆಪ್ಟೆಂಬರ್ನಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಸವರಾಜ ಉತ್ತಿಗೆ ಅವರು ಸಿಬಿಐ ತನಿಖೆಗೆ ತಡೆಯಾಜ್ಞೆ ತಂದಿದ್ದರು.
ಆದರೆ, ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತೆರವು ಮಾಡಿಸಿಕೊಂಡಿತ್ತು. ಕೋವಿಡ್ ಸಂಕಷ್ಟದ ಮಧ್ಯೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಎಂಟು ಮಂದಿ ಆರೋಪಿಗಳನ್ನ ಈವರೆಗೆ ಬಂಧಿಸಿದೆ. ಯೋಗೇಶ್ ಗೌಡ ಅವರನ್ನು ರಾಜಕೀಯ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಸಿಬಿಐ ಆರೋಪ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ