ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ರಾಜಕೀಯ ಬಣ್ಣ ಸರಿಯಲ್ಲ: ಡಿಸಿಎಂ ಅಶ್ವತ್ಥನಾರಾಯಣ
ಪ್ರತಿಸಲವೂ ಯಾರ ಮೇಲೆಯಾದರೂ ಇ.ಡಿ ಅಥವಾ ಸಿಬಿಐ ದಾಳಿ ನಡೆದರೆ ಇಲ್ಲವೇ ಯಾರನ್ನಾದರೂ ಬಂಧಿಸಿದರೆ ಅದೆಲ್ಲಕ್ಕೂ ರಾಜಕೀಯ ದ್ವೇಷ ಎಂದು ಬಣ್ಣಕಟ್ಟಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕಾನೂನು ತನ್ನ ಕೆಲಸವನ್ನು ತಾನೇ ಮಾಡುತ್ತಿದೆ
ಬೆಂಗಳೂರು(ನವೆಂಬರ್. 05): ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ವಿಕಾಸ ಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರ ಮೇಲೆ ಆರೋಪವಿತ್ತು. ಆ ಕೊಲೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಆ ಹೋರಾಟಗಳಿಗೆ ಮಣಿದು ಕಾಂಗ್ರೆಸ್ ಸರಕಾರವೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಇದರಲ್ಲಿ ಬಿಜೆಪಿ ಸರಕಾರದ ಪಾತ್ರವೇನಿದೆ ಎಂದು ಪ್ರಶ್ನಿಸಿದರು. ಪ್ರತಿಸಲವೂ ಯಾರ ಮೇಲೆಯಾದರೂ ಆದಾಯ ತೆರಿಗೆ, ಇ.ಡಿ ಅಥವಾ ಸಿಬಿಐ ದಾಳಿ ನಡೆದರೆ ಇಲ್ಲವೇ ಯಾರನ್ನಾದರೂ ಬಂಧಿಸಿದರೆ ಅದೆಲ್ಲಕ್ಕೂ ರಾಜಕೀಯ ದ್ವೇಷ ಎಂದು ಬಣ್ಣಕಟ್ಟಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕಾನೂನು ತನ್ನ ಕೆಲಸವನ್ನು ತಾನೇ ಮಾಡುತ್ತಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ರಾಜರಾಜೇಶ್ವರಿ ನಗರ ಮತ್ತೂ ಶಿರಾದಲ್ಲಿ ಈ ಬಾರಿ ಕಮಲವೇ ಅರಳಲಿದೆ ಎಂದ ಡಿಸಿಎಂ ಅಶ್ವತ್ಥನಾರಾಯಣ ಮತದಾರರು ಸರಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ತಮ್ಮ ತೀರ್ಪು ನೀಡಿದ್ದಾರೆ. ಆ ತೀರ್ಪು ಏನೆಂಬುದು ನವೆಂಬರ್ ಹತ್ತರಂದು ಗೊತ್ತಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಗುರುವಾರ ಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನ ವಶಕ್ಕೆ ಪಡೆದಿದ್ದಾರೆ. ಧಾರವಾಡದ ಬರಾಕೂಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಧಾರವಾಡ ಜಿ.ಪಂ. ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಯೋಗೇಶ್ ಗೌಡ ಅವರನ್ನು 2016, ಜೂನ್ 15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಜಿಮ್ನ ಹೊರಗೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿ ಕೊಲೆ ಮಾಡಲಾಗಿತ್ತು. ಬೈಕ್ನಲ್ಲಿ ಬಂದಿದ್ದ ಸುಪಾರಿ ಹಂತಕರು ಈ ಕೃತ್ಯ ಎಸಗಿದ್ದರು.
ಆ ಘಟನೆ ಬಳಿಕ ಪೊಲೀಸರು ಧಾರವಾಡದ ಆರು ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. 2019, ಸೆಪ್ಟೆಂಬರ್ನಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಸವರಾಜ ಉತ್ತಿಗೆ ಅವರು ಸಿಬಿಐ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಆದರೆ, ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತೆರವು ಮಾಡಿಸಿಕೊಂಡಿತ್ತು.
ಕೋವಿಡ್ ಸಂಕಷ್ಟದ ಮಧ್ಯೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಎಂಟು ಮಂದಿ ಆರೋಪಿಗಳನ್ನ ಈವರೆಗೆ ಬಂಧಿಸಿದೆ. ಯೋಗೇಶ್ ಗೌಡ ಅವರನ್ನು ರಾಜಕೀಯ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಸಿಬಿಐ ಆರೋಪ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ