ಮಾಜಿ ಸಚಿವ ವರ್ತೂರು ಪ್ರಕಾಶ್ರನ್ನು ಅಪಹರಿಸಿ 30 ಕೋಟಿ ಹಣಕ್ಕಾಗಿ ಬೇಡಿಕೆ; ಪ್ರಕರಣ ದಾಖಲು
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಂದು ಬೆಳ್ಳಂದೂರು ಸ್ನಶಾನದ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ಪತ್ತೆ ಮಾಡಿದ್ದಾರೆ. ಆದರೆ, ಆ ಕಾರು ನನ್ನದೇ ಎಂದು ವರ್ತೂರು ಪ್ರಕಾಶ್ ದೃಢಪಡಿಸಿದ್ದಾರೆ. ಹೀಗಾಗಿ ಇದೇ ಕಾರಿನಲ್ಲಿ ಮಾಜಿ ಸಚಿವರ ಅಪಹರಣವಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು (ನವೆಂಬರ್ 01); ಮಾಜಿ ಸಚಿವ ವರ್ತೂರು ಪ್ರಕಾಶ ಅವರನ್ನು ಅಪಹರಿಸಿ 30 ಕೋಟಿಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತೆ? ಹೀಗೊಂದು ಪ್ರಶ್ನೆ ಇದೀಗ ರಾಜ್ಯ ರಾಜಕೀಯ ವಠಾರದಲ್ಲಿ ಸದ್ದು ಮಾಡುತ್ತಿದೆ. ಆದರೆ, ಇಂದು ಸ್ವತಃ ಬೆಳ್ಳಂದೂರು ಪೊಲೀಸ್ ಠಾಣೆಗೆ ಆಗಮಿಸಿರುವ ವರ್ತೂರು ಪ್ರಕಾಶ್ ತಾವು ತಮ್ಮ ಡ್ರೈವರ್ ಜೊತೆಗೆ ಇದ್ದಾಗ ಕೆಲವರು ನಮ್ಮ ಕಾರಿನಲ್ಲೇ ನಮ್ಮನ್ನು ಒಂದು ವಾರದ ಹಿಂದೆಯೇ ಅಪಹರಿಸಲಾಗಿತ್ತು. ಅಲ್ಲದೆ, ಅಪಹರಣಕಾರರು ನಮ್ಮ ಮೇಲೆ ಹಲ್ಲೆ ನಡೆಸಿ 30 ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದರು. ಆದರೆ, ನಾನು ಹೇಗೋ ಅವರಿಂದ ತಪ್ಪಿಸಿಕೊಂಡೆ ಎಂದು ದೂರು ನೀಡಿದ್ದಾರೆ. ಅವರ ದೂರಿನ ಅನ್ವಯ ಬೆಳ್ಳಂದೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ನೀಡಿರುವ ದೂರಿನಲ್ಲಿ "ನವೆಂಬರ್ 25 ರಂದು 7 ರಿಂದ 8 ಜನ ಅಪಹರಿಸಿದ್ದಾರೆ. ಅಪಹರಣದ ನಂತರ ಮೂರು ದಿನ ನನ್ನನ್ನು ಕೂಡಿ ಹಾಕಲಾಗಿತ್ತು. ಆದರೆ, ಎಲ್ಲಿ ಕೂಡಿಹಾಕಿದ್ದರು ಎಂಬುದು ಗೊತ್ತಿಲ್ಲ. ಹಲ್ಲೆ ಮಾಡೋ ಸಂದರ್ಭದಲ್ಲಿ ಹಣ ಕೊಡಲಿಲ್ಲ ಅಂದ್ರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿತ್ತು. ನನ್ನ ಡ್ರೈವರ್ಗೂ ತುಂಬಾ ಗಾಯಗಳಾಗಿವೆ. 28ನೇ ತಾರೀಖು ನಾನು ಹಾಗೂ ಡ್ರೈವರ್ ತಪ್ಪಿಸಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಕಾರನ್ನು ಕಿಡ್ನಾಪರ್ಸ್ ಇದ್ದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದೀವಿ" ಎಂದು ಉಲ್ಲೇಖಿಸಲಾಗಿದೆ.
ಅಪಹರಣದ ನಂತರ ವರ್ತೂರು ಪ್ರಕಾಶ ಅಪಹರಣಕಾರರಿಗೆ 48 ಲಕ್ಷ ಹಣವನ್ನೂ ನೀಡಿದ್ದಾರೆ. ನಯಾಜ್ ಎಂಬ ಹುಡುಗನ ಮೂಲಕ ಹಣ ತರಿಸಿಕೊಟ್ಟಿದ್ದಾರೆ. ಆದರೆ, ಹಣ ಪಡೆದ ನಂತರವೂ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟು ವರ್ತೂರು ಪ್ರಕಾಶ್ ಮೇಲೆ ಅಪಹರಣಕಾರರು ಹಲ್ಲೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಂದು ಬೆಳ್ಳಂದೂರು ಸ್ನಶಾನದ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ಪತ್ತೆ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ಕಾರನ್ನು ಟೋಲ್ ಮಾಡಿ ಪೊಲೀಸ್ ಠಾಣೆಯ ಬಳಿ ಹಾಕಿದ್ದಾರೆ. ಆದರೆ, ಆ ಕಾರು ನನ್ನದೇ ಎಂದು ವರ್ತೂರು ಪ್ರಕಾಶ್ ದೃಢಪಡಿಸಿದ್ದಾರೆ. ಹೀಗಾಗಿ ಇದೇ ಕಾರಿನಲ್ಲಿ ಮಾಜಿ ಸಚಿವರ ಅಪಹರಣವಾಗಿದೆ ಎನ್ನಲಾಗುತ್ತಿದೆ.
ವರ್ತೂರು ಪ್ರಕಾಶ್ ಕೊಟ್ಟ ದೂರಿನನ್ವಯ ಬೆಳ್ಳಂದೂರು ಪೊಲೀಸರು ಇದೀಗ ಐಪಿಸಿ ಸೆಕ್ಷನ್ 341 ಅಕ್ರಮ ತಡೆ , 342 ಅಕ್ರಮ ಬಂಧನ, 307 ಕೊಲೆ ಯತ್ನ, 364 ಅಪಹರಣ, 364(A) ಅಪಹರಿಸಿ ಹಣಕ್ಕಾಗಿ ಬೇಡಿಕೆ ಮತ್ತು 324 ಹಲ್ಲೆ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡು ಅಪರಣಕಾರರನ್ನು ಬಂಧಿಸಲು ಮುಂದಾಗಿದೆ. ಆದರೆ, ಮಾಜಿ ಸಚಿವರೊಬ್ಬರ ಅಪಹರಣದ ಸುದ್ದಿ ಇದೀಗ ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ