‘ಕೃಷಿ ಸಚಿವ ಬಿ.ಸಿ ಪಾಟೀಲ್ ನಿಜವಾದ ಉಸರವಳ್ಳಿ‘ - ಮಾಜಿ ಸಚಿವ ಸಾರಾ ಮಹೇಶ್

ಮಾಜಿ ಸಚಿವ ಸಾ.ರಾ. ಮಹೇಶ್​

ಮಾಜಿ ಸಚಿವ ಸಾ.ರಾ. ಮಹೇಶ್​

ಖಾವಿ ತೊಟ್ಟ ಮಾರ್ಜಾಲ ಸಂನ್ಯಾಸಿಯಂತೆ ಖಾಕಿ ಕಳಚಿ ಖಾದಿ ಧರಿಸಿದ ನಂತರ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಬೇಕಾಗಿಲ್ಲ ಎಂಬ ಉಡಾಫೆಯ ಪ್ರತಿಕ್ರಿಯೆ ನೀಡುತ್ತಿರುವ ಪಾಟೀಲರು ನಿಜವಾದ ಊಸರವಳ್ಳಿ ಎಂದು ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.

  • Share this:

    ಬೆಂಗಳೂರು(ಸೆ.08): ಡ್ರಗ್ಸ್ ಮಾಫಿಯಾ ಹಣದಿಂದಲೇ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಪತನವಾಯ್ತು ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಊಸರವಳ್ಳಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​​ ನಿಂದಿಸಿದ್ದರು. ಈ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಸಾರಾ ಮಹೇಶ್​​, ಕೃಷಿ ಸಚಿವ ಬಿ.ಸಿ. ಪಾಟೀಲ್ ನಿಜವಾದ ಉಸರವಳ್ಳಿ ಎಂದಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್​ ಮಾಡಿರುವ ಸಾರಾ ಮಹೇಶ್, ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ -ಬಹಿರಂಗ ಸಖ್ಯ ಉಳ್ಳವರೇ ಆಗಿರುವುದರಿಂದ ಕನಲಿ ಹೋಗಿರುವ ಕೃಷಿ ಸಚಿವ ಬಿ ಸಿ ಪಾಟೀಲರು ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ಕುಟುಕಿದ್ದಾರೆ.


    ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾ ಮಟ್ಟಹಾಕಲು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಸಿ ಮುಟ್ಟಿಸಿದ್ದರಿಂದಲೇ ದೇಶಾಂತರ ಓಡಿಹೋಗಿ ತಲೆಮರೆಸಿಕೊಂಡಿದ್ದವರು ಜಾಮೀನು ಪಡೆದು ಬಂದಿದ್ದು, ಇದಕ್ಕೆ ತೆರೆಮರೆಯಲ್ಲಿ ನಿಂತು ವ್ಯವಸ್ಥೆ ಮಾಡಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಮತ್ತೊಂದು ಟ್ವೀಟ್​​ನಲ್ಲಿ ಕಿಡಿಕಾರಿದ್ದಾರೆ.


    ಅಧಿಕಾರದ ಆಸೆಗಾಗಿ ಬಣ್ಣ ವೇಷ ಬದಲಿಸುವ ಜಾಯಮಾನ ಕೃಷಿ ಸಚಿವರಿಗೆ ಕರಗತವಾಗಿದೆ. ಉಸರವಳ್ಳಿಯನ್ನು ನಾಚಿಸುವಂತೆ ನಾಲಗೆಯ ಬಣ್ಣವನ್ನೂ ಬದಲಿಸುವ ಇಂತಹ ಬೃಹಸ್ಪತಿಗಳು ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ವಾರ್ನಿಂಗ್​ ನೀಡಿದರು.


    ಪೂರ್ವಾಶ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಇದ್ದ ಪಾಟೀಲರಿಗೆ ಇಂತಹ ಮಾಫಿಯಾಗಳ ಬಗ್ಗೆ ಅರಿವಿಲ್ಲ ಎಂದರೆ ಅವರು ಪಾಲಿಸಿದ ವೃತ್ತಿನಿಷ್ಠೆ ಏನೆಂಬುದು ನಗೆಪಾಟಲಿನ ಸಂಗತಿ ಅಷ್ಟೇ ಅಲ್ಲ. ಎಂತೆಂತಹ ಊಸರವಳ್ಳಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದರು ಎಂಬ ಬಗ್ಗೆ ಮರುಕವಿದೆ ಎಂದು ಸಾ.ರಾ ಮಹೇಶ್ ಮಾರ್ಮಿಕವಾಗಿ ನುಡಿದಿದ್ಧಾರೆ.


    ಖಾವಿ ತೊಟ್ಟ ಮಾರ್ಜಾಲ ಸಂನ್ಯಾಸಿಯಂತೆ ಖಾಕಿ ಕಳಚಿ ಖಾದಿ ಧರಿಸಿದ ನಂತರ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಬೇಕಾಗಿಲ್ಲ ಎಂಬ ಉಡಾಫೆಯ ಪ್ರತಿಕ್ರಿಯೆ ನೀಡುತ್ತಿರುವ ಪಾಟೀಲರು ನಿಜವಾದ ಊಸರವಳ್ಳಿ ಎಂದು ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.


    ಇದನ್ನೂ ಓದಿ: ‘ಡ್ರಗ್ಸ್​ ಮಾಫಿಯಾ ಪ್ರಕರಣದಿಂದ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು‘ - ಆರೋಗ್ಯ ಸಚಿವ ಬಿ. ಶ್ರೀರಾಮುಲು


    ರಾಜ್ಯದ ಕೃಷಿಕರು ಯೂರಿಯಾ ಸೇರಿದಂತೆ ರಸಗೊಬ್ಬರ ಕೊರತೆ ಎದುರಿಸುತ್ತಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬುದನ್ನು ತಮ್ಮ ಹೇಳಿಕೆಯಲ್ಲಿ ಒಪ್ಪಿಕೊಂಡಿರುವ ಪಾಟೀಲರು ಎಷ್ಟು ಮಂದಿ ವಿರುದ್ಧ ಕೇಸು ಜಡಿದಿದ್ದಾರೆ? ಎಂಬ ವಿವರವನ್ನು ಜನತೆಯ ಮುಂದಿಡಲಿ ಎಂದು ಆಗ್ರಹಿಸಿದ್ದಾರೆ.

    Published by:Ganesh Nachikethu
    First published: