ಹುಬ್ಬಳ್ಳಿ(ಜ.29) : ನಮ್ಮಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗರು ಎನ್ನುವ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದ ಮೇಲೆ ಎಲ್ಲರೂ ಕಾಂಗ್ರೆಸ್ಸಿಗರೇ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಬಿಜೆಪಿಯಲ್ಲಿ ಸರ್ವಾಧಿಕಾರವಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹೇಳಿದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು
ಹೈಕಮಾಂಡ್ ನಾಯಕರು ರಾಜ್ಯದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ವಿಷಯ ಮುಟ್ಟಿಸಿದ್ದಾರೆ. ಆದಷ್ಟು ಬೇಗ ನೂತನ ಅಧ್ಯಕ್ಷರ ಆಯ್ಕೆ ಆಗಲಿದೆ ಎಂದು ಹೇಳಿದರು.
ಬಿಜೆಪಿಯವರಿಗೆ ಮಂತ್ರಿ ಮಂಡಳ ವಿಸ್ತರಿಸಲು ಆಗುತ್ತಿಲ್ಲ. ಈ ತಿಂಗಳು, ಮುಂದಿನ ತಿಂಗಳು ಅನ್ನುತ್ತಿದ್ದಾರೆ. ಅರ್ಹರಾದವರನ್ನು ಯಾಕೆ ಮಂತ್ರಿ ಮಾಡಬಾರದು. ಜನರು ಅವರನ್ನು ಆಯ್ಕೆ ಮಾಡಿದ್ದು, ನಾವು ಸ್ವಾಗತಿಸಿದ್ದೇವೆ. ಸಿಎಂ ಎಲ್ಲಾ ಖಾತೆಗಳನ್ನು ತಾನೇ ಇಟ್ಟು ಕೊಂಡರೆ ಹೇಗೆ. ರಾಜ್ಯ ಹೇಗೆ ಅಭಿವೃದ್ಧಿ ಆಗುತ್ತೆ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಹೈಕಮಾಂಡ್ ಇವರ ಮಾತು ಯಾಕೆ ಕೇಳುತ್ತಿಲ್ಲ. ಅಧಿವೇಶನ ಬಂತು, ಇನ್ನೂ ಸಚಿವರಿಲ್ಲ. ಕೂಡಲೇ ಮಂತ್ರಿಗಳನ್ನು ಮಾಡಿ ಖಾತೆ ಹಂಚಲಿ. ಸಚಿವರಿಲ್ಲದೆ ರಾಜ್ಯದ ಜನರಿಗೆ ತೊಂದರೆ ಆಗುತ್ತಿದೆ. ಮಹದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಸಮಸ್ಯೆ ಬಗೆಹರಿಸಲಿ ಎಂದು ಅರ್ಹ ಶಾಸಕರ ಪರ ಎಸ್.ಆರ್. ಪಾಟೀಲ್ ಹೇಳಿಕೆ ನೀಡಿದರು.
ಇದನ್ನೂ ಓದಿ :
ನಾವೆಲ್ಲಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು - ಆದ್ರೆ ನಾನು ಡಿಸಿಎಂ ಆಗ್ಬೇಕಂತ ಜನರ ಅಪೇಕ್ಷೆ ; ಶ್ರೀರಾಮುಲು ಪುನರುಚ್ಚಾರ
ಇತ್ತ ಕಲಬುರ್ಗಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಿ ಕೆ ಶಿವಕುಮಾರ್ 'ರಾಜ್ಯ ಸರ್ಕಾರದ ವಿಸ್ತರಣೆಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೂ ಸಂಬಂಧವೇ ಇಲ್ಲ. ಅವರು ಯಾವಾಗ ಬೇಕಾದರೂ ಸಂಪುಟ ವಿಸ್ತರಣೆ ಮಾಡಲಿ, ಯಾರನ್ನು ಬೇಕಾದ್ರೂ ಸಿಎಂ ಇಲ್ಲವೆ ಡಿಸಿಎಂ ಮಾಡಲಿ. ಅವರ ಸಂಪುಟ ವಿಸ್ತರಣೆಗೂ ನಮ್ಮ ಪಕ್ಷಕ್ಕೂ ಏನೂ ಸಂಬಂಧವಿಲ್ಲ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿಯೇ ಇಲ್ಲದಿರುವಾಗ, ಹೊಸ ಅಧ್ಯಕ್ಷರ ಆಯ್ಕೆಯ ವಿಳಂಬದ ಪ್ರಶ್ನೆಯೇ ಇಲ್ಲ. ಸದ್ಯ ದಿನೇಶ್ ಗುಂಡೂರಾವ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಅವರಿಬ್ಬರ ಕೆಳಗೆ ನಾವೆಲ್ಲ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ' ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ