ನವ ದೆಹಲಿ (ಜೂನ್ 30);ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ಇಡೀ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಿಗೆ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಪ್ರಕರಣ ವನ್ನು ಎಸ್ಐಟಿ (SIT) ತನಿಖೆಗೂ ವಹಿಸಲಾಗಿತ್ತು. ಆದರೆ, ಸೆಕ್ಷನ್ 377 ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ, ಆ ಸಿಡಿಯಲ್ಲಿರುವುದು ತಾನೇ ಎಂದು ಸ್ವತಃ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದರೂ ಸಹ ಎಸ್ಐಟಿ ಅಧಿಕಾರಗಳು ಈವರೆಗೆ ಅವರನ್ನು ಬಂಧಿಸಿಲ್ಲ. ಎಸ್ಐಟಿ ಪೊಲೀಸರ ಇಂತಹ ನಡೆಯಿಂದ ಈಗಾಗಲೇ ಪೊಲೀಸರು ಈ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಸಂಶಯಗಳು ಮೂಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮತ್ತೆ ಸಚಿವ ಸ್ಥಾನ ಪಡೆಯಲೇ ಬೇಕು ಎಂದು ಪಣತೊಟ್ಟಿರುವ ರಮೇಶ್ ಜಾರಕಿಹೊಳಿ ಇಂದು ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಬುಲಾವ್ ಮೇರೆಗೆ ಮೊನ್ನೆ ದೆಹಲಿಗೆ ಬಂದಿರುವ ರಮೇಶ್ ಜಾರಕಿಹೊಳಿ ನಿನ್ನೇಯೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದರು. ಅಲ್ಲದೆ, ದೇವೇಂದ್ರ ಫಡ್ನವಿಸ್ ಮೂಲಕವೇ ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸಿದ್ದರು. ಫಡ್ನವೀಸ್ ಭೇಟಿ ವೇಳೆ ರಾಜ್ಯದ ಮೂವರು ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಪುತ್ರ ಬಿ.ವೈ. ವಿಜಯೇಂದ್ರ, ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡಿದ್ದು, ಡಿ.ಕೆ. ಶಿವಕುಮಾರ್ ಜತೆ ಒಂದಾಗಿ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ರಮೇಶ್ ಜಾರಕಿಹೊಳಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ನಾಯಕರ ಭೇಟಿ ವೇಳೆಯೂ ಇದೇ ದೂರನ್ನು ಮುಂದಿಡಲಿದ್ದಾರೆ. ಅಲ್ಲದೆ, ಸಿಡಿ ಪ್ರಕರಣವನ್ನು ರ್ಶೀಘ್ರದಲ್ಲೇ ಮುಗಿಸಿ ತನಗೆ ಸಚಿವ ಸ್ಥಾನವನ್ನು ಮತ್ತೆ ನೀಡುವಂತೆ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.
ಮತ್ತೆ ಸಚಿವ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ಜೂನ್.22 ರಂದೇ ಮುಂಬೈಗೆ ತೆರಳಿದ್ದ ರಮೇಶ್ ಜಾರಕಿಹೊಳಿ ಅಲ್ಲಿನ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಸಿಡಿ ನ ಕೇಸ್ ಮುಗಿಸಿ ಮತ್ತೆ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಮನವಿಗೆ ಫಡ್ನವಿಸ್ ನಿರೀಕ್ಷಿತ ಉತ್ತರ ನೀಡಿಲ್ಲ. ಬದಲಾಗಿ "ನಾನು ಕರ್ನಾಟಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹೈಕಮಾಂಡ್ ಗೆ ಸಂದೇಶವನ್ನು ಮಾತ್ರ ತಲುಪಿಸಲು ಪ್ರಯತ್ನಿಸುತ್ತೇನೆ. ಉಳಿದದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ" ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ.
ದೇವೇಂದ್ರ ಫಡ್ನವಿಸ್ ಅವರ ಈ ಉತ್ತರ ಸಾಮಾನ್ಯವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಸಾಕಷ್ಟು ನಿರಾಸೆಯನ್ನು ಉಂಟು ಮಾಡಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಮತ್ತೆ ದೆಹಲಿಗೆ ತೆರಳಿರುವುದು ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ, ಮುಂದೆ ಏನಾಗಲಿದೆ? ಎಂಬುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ