ಬೆಳಗಾವಿ: 2023ರ ವಿಧಾನಸಭೆ ಚುನಾವಣೆ (Assembly Election 2023) ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರಕ್ಕೆ ಮೊರೆ ಹೋಗಿವೆ. ತಮ್ಮ ಪಕ್ಷವನ್ನು ಹೊಗಳಿಕೊಂಡು, ಮತ್ತೊಂದು ಪಕ್ಷವನ್ನು ತೆಗಳಿಕೊಂಡು, ಭಾಷಣಗಳನ್ನು ಮಾಡಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಬಿಜೆಪಿ ಜನಸಂಕಲ್ಪ (Janasankalpa), ಜೆಡಿಎಸ್ ಪಂಚರತ್ನ ರಥಯಾತ್ರೆ (Pancharatna Rath Yatra) ಹಾಗೆಯೇ ಕಾಂಗ್ರೆಸ್ ಪ್ರಜಾಧ್ವನಿ (Prajadhwani) ಯಾತ್ರೆಗಳ ಮೂಲಕ ಮತದಾರರ ಪ್ರಭುಗಳನ್ನು ಸೆಳೆಯುವ ಪ್ರಯತ್ನದಲ್ಲಿವೆ. ಆದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮಾತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಗೆದ್ದರೂ ಗುದ್ದಾಡಿಯಾದರೂ ಸರ್ಕಾರವನ್ನು ರಚಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಮುಂದಿನ ಬಾರಿಯೂ ಬಹುಮತ ಸಾಬೀತಾಗದಿದ್ದರೆ ಆಪರೇಷನ್ ಕಮಲದ (Operation Lotus) ಮೂಲಕ ಮತ್ತೆ ಸರ್ಕಾರ ರಚಿಸುತ್ತೇವೆ ಎನ್ನುವ ಸೂಚನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ರಮೇಶ್ ಜಾರಕಿಹೊಳಿ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆದಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಆದರೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಕೆಲವು ಶಾಸಕರನ್ನು ಸೆಳೆದುಕೊಂಡು ಸರ್ಕಾರ ಬೀಳಿಸಿ ತಮ್ಮದೇ ಸರ್ಕಾರ ರಚನೆ ಮಾಡಿತ್ತು. ಇದೀಗ ರಮೇಶ್ ಜಾರಕಿಹೊಳಿ ಮತ್ತೆ ಆಪರೇಷನ್ ಕಮಲದ ಬಗ್ಗೆ ಸುಳಿವು ನೀಡಿದ್ದಾರೆ. ಬಹುಮತ ಬರದಿದ್ದರೂ ಗುದ್ದಾಡಿ ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಬಿಜೆಪಿ ಬಿಡಲಿದ್ದಾರೆ ಎಂಬ ಸುದ್ದಿಗಳೆಲ್ಲಾ ಊಹಾಪೋಹವಷ್ಟೆ, ಅವೆಲ್ಲಾ ಮಾಧ್ಯಮ ಸೃಷ್ಟಿ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇದ್ದೇನೆ, ಇಲ್ಲಿ ಒಂದು ಇತಿಹಾಸ ಮಾಡಿಯೇ ಹೋಗುತ್ತೇನೆ ಎಂದರು. ಕೆಲವು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರಲಿದ್ದಾರೆ, ಈ ಬಗ್ಗೆ ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Ramesh Jarkiholi: ಲಕ್ಷ್ಮೀ ಹೆಬ್ಬಾಳ್ಕರ್ 3 ಸಾವಿರ ಕೊಟ್ರೆ ನಾನು 6 ಸಾವಿರ ಕೊಡ್ತೀನಿ! ಜಾರಕಿಹೊಳಿ ಓಪನ್ ಆಫರ್!
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ
ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಕೇವಲ ಮುಸ್ಲಿಂ ವಿರೋಧಿ ಅಲ್ಲ, ಅದು ದಲಿತರ ವಿರೋಧಿ ಕೂಡಾ ಆಗಿದ್ದಾರೆ. ಇನ್ನು ಮುಂದೆ ಕೆಟ್ಟ ಹುಳಗಳು ಗೋಕಾಕದ ಬೀದಿಗಳಲ್ಲಿ ಬರುತ್ತವೆ. ಮೂರು ತಿಂಗಳಲ್ಲಿ ಗೋಕಾಕದಲ್ಲಿ ಕೆಟ್ಟ ಹುಳಗಳದ್ದೇ ಹವಾ. ಆಮೇಲೆ ನಾಲ್ಕು ವರ್ಷ ಆ ಹುಳುಗಳು ಇರುವುದಿಲ್ಲ, 3 ತಿಂಗಳು ಬಂದು ನಂತರ ಅವು ಮಲಗುತ್ತವೆ ಎಂದು ಹೆಸರೇಳದೇ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ದೇಶ, ರಾಷ್ಟ್ರಪ್ರೇಮದ ವಿಚಾರ ಬಂದಾಗ ಬಿಜೆಪಿ ಮುಸ್ಲಿಂ ತತ್ವಕ್ಕೆ ವಿರೋಧವಾಗಿ ನಡೆದುಕೊಂಡಿದೆ. ಆದರೆ ಮುಸ್ಲಿಮರ ಜೊತೆ ಯಾವುದೇ ವೈಯುಕ್ತಿಕ ದ್ವೇಷ ಸಾಧಿಸಿಲ್ಲ. ಆದರೆ ಕಾಂಗ್ರೆಸ್ನಲ್ಲಿ ಐದು ಬಾರಿ ಆಯ್ಕೆ ಆಗಿದ್ದೇನೆ, ಅವರ ನಡೆ ನನಗೆ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ ಕೇವಲ ಮುಸ್ಲಿಂ ವಿರೋಧಿ ಅಲ್ಲ, ಅದು ದಲಿತರ ವಿರೋಧಿ ಕೂಡಾ ಎಂದು ತಮ್ಮ ಮಾಜಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ