HOME » NEWS » State » FORMER MINISTER PRIYANK KHARGE SLAMS ON BJP GOVERNMENT SAK HK

ಕೇವಲ ಹೆಸರು ಬದಲಾವಣೆಯಿಂದ ಕಲ್ಯಾಣ ಕರ್ನಾಟಕದ ಭವಿಷ್ಯ ಬದಲಾಗುವುದಿಲ್ಲ; ಅನುದಾನ ನೀಡದ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಬಿಜೆಪಿ ಅಧಿಕಾರಕ್ಕೆ ಬಂದ ಈ 8 ತಿಂಗಳಲ್ಲಿ ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಪೆಟ್ರೋಲ್ ದರ, ಡೀಸೆಲ್ ದರ ಏರಿಕೆಯಾಗಿರುವುದು ಇವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಲೇವಡಿ ಮಾಡಿದ್ದಾರೆ

news18-kannada
Updated:March 5, 2020, 6:53 PM IST
ಕೇವಲ ಹೆಸರು ಬದಲಾವಣೆಯಿಂದ ಕಲ್ಯಾಣ ಕರ್ನಾಟಕದ ಭವಿಷ್ಯ ಬದಲಾಗುವುದಿಲ್ಲ; ಅನುದಾನ ನೀಡದ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಪ್ರಿಯಾಂಕ್​ ಖರ್ಗೆ
  • Share this:
ಕಲಬುರ್ಗಿ(ಮಾ.05) : ರಾಜ್ಯ ಸರಕಾರ ಈ ಬಾರಿಯ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ‌ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈ ಮೊದಲು 371 (ಜೆ) ತಿರಸ್ಕರಿಸುವ ಮೂಲಕ ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿತ್ತು. ಮತ್ತೆ ಈಗ ಬಜೆಟ್ ನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದೆ. ಕೇವಲ ಹೆಸರು‌ ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು, ನಮ್ಮ ಭಾಗದ ಕಲ್ಯಾಣವಾಗದು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಈಗೆಲ್ಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ, ಸಂಸದ ಉಮೇಶ್ ಜಾದವ್ ಕಾಲೆಳೆದಿದ್ದಾರೆ.

ಕ್ಷೇತ್ರದ ಅಭಿವೃದ್ದಿ ಕಡೆಗಣಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದುಳಿದ ಭಾಗವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ, ಉಮೇಶ್ ಜಾದವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಳಿಕ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿ, ಚಿಂಚೋಳಿ ಕ್ಷೇತ್ರದಿಂದ ತಮ್ಮ ಪುತ್ರ ಅವಿನಾಶ್ ಜಾದವ್ ವಿಧಾನಸಭೆ ಪ್ರವೇಶಿಸುವಂತೆ ನೋಡಿಕೊಂಡರು. ಈ ಹಿನ್ನೆಲೆಯಲ್ಲಿ ಉಮೇಶ್ ಜಾದವ್​ ಅವರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೇ, ಬಿಜೆಪಿ ನಾಯಕರ ವಿರುದ್ಧವೂ ಹರಿಹಾಯ್ದಿದ್ದಾರೆ.

ಮುಖ್ಯಮಂತ್ರಿಗಳಿಂದ ನಾಮಕಾವಸ್ಥೆಯ ಬಜೆಟ್ : 

ಕೇಂದ್ರದಿಂದ ಬರಬೇಕಿದ್ದ 11,000 ಕೋಟಿ ರೂಪಾಯಿ ಜಿಎಸ್‌ಟಿ ಪಾಲು ರಾಜ್ಯಕ್ಕೆ ಸಿಕ್ಕಿಲ್ಲ. ಅಲ್ಲದೇ, ಗಾಯದ ಮೇಲೆ ಬರೆ ಎಳೆದಂತೆ ಉದ್ಯೋಗ ಖಾತ್ರಿ, ಕೇಂದ್ರ ರಸ್ತೆ ನಿಧಿ ಹಾಗೂ ಕೇಂದ್ರ ಸಹಭಾಗಿತ್ವದ ಅನೇಕ ಯೋಜನೆಗಳ ಅನುದಾನದಲ್ಲಿಯೂ ಸುಮಾರು 8,000 ಕೋಟಿ ರೂಪಾಯಿ ಕಡಿತವಾಗಿರುವುದನ್ನು ಖುದ್ದು ಮುಖ್ಯಮಂತ್ರಿಗಳೇ ಇಂದಿನ ಬಜೆಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವು ಮೋದಿ ಸರ್ಕಾರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿದೂಗಿಸುವ ಸಲುವಾಗಿ ಪೆಟ್ರೋಲ್, ಡಿಸೇಲ್ ಹಾಗೂ ಇತರ ತೆರಿಗೆಗಳನ್ನು ಹೆಚ್ಚಿಸಿ ರಾಜ್ಯದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಈ 8 ತಿಂಗಳಲ್ಲಿ ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಪೆಟ್ರೋಲ್ ದರ, ಡೀಸೆಲ್ ದರ ಏರಿಕೆಯಾಗಿರುವುದು ಇವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಲೇವಡಿ ಮಾಡಿದ್ದಾರೆ.

ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗಲ್ಲ : 

ಹಿಂದಿನ ಸರ್ಕಾರಗಳು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದವು. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿರುವ ಯಡಿಯೂರಪ್ಪ ಅವರು ಈ ಬಾರಿ ಕನಿಷ್ಟ 2000 ಕೋಟಿ ರೂಪಾಯಿಗಳನ್ನು ಈ ಭಾಗಕ್ಕೆ ನೀಡುತ್ತಾರೆ ಎಂದುಕೊಂಡಿದ್ದೆವು. ಆದರೆ ಈ ಅನುದಾನದಲ್ಲಿ ನಯಾ ಪೈಸೆಯನ್ನೂ ‌ಹೆಚ್ಚಿಸಿಲ್ಲ. ಈ ಭಾಗಕ್ಕೆ ಯಾವುದೇ ಹೊಸ ಯೋಜನೆಗಳನ್ನೂ ಘೋಷಿಸದೇ ಬಿಜೆಪಿ ಸರ್ಕಾರವು ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದೆ ಎಂದು ಪ್ರಿಯಾಂಕ್ ಆರೋಪಿಸಿದ್ದಾರೆ.

ರೈತರ ಸಾಲಮನ್ನಾ ನನೆಗುದಿಗೆ : 

ಸಮ್ಮಿಶ್ರ ಸರ್ಕಾರವು ರೈತರ ಸಹಕಾರ ಬ್ಯಾಂಕ್‌ಗಳ ಸುಮಾರು 9 ಸಾವಿರ ಕೋಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸುಮಾರು 35 ಸಾವಿರ ಕೋಟಿ ಸೇರಿ ಸುಮಾರು 45 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿತ್ತು. ಇದು 5 ವರ್ಷಗಳ ದೀರ್ಘಾವಧಿ ಯೋಜನೆಯಾಗಿದ್ದು, ಪ್ರತಿ ವರ್ಷವೂ ಬಜೆಟ್‌ನಲ್ಲಿ ಇದಕ್ಕಾಗಿಯೇ ಅನುದಾನವನ್ನು ಮೀಸಲಿಡಲೇಬೇಕಿತ್ತು. ಆದರೆ, ಬಿಜೆಪಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಇದರ ಬಗ್ಗೆ ತುಟಿ ಬಿಚ್ಚಿಲ್ಲ. ಕೇವಲ ಹಸಿರು ಶಾಲು ಹೊದ್ದುಕೊಂಡು, ಬಜೆಟ್ ಮಂಡಿಸಿದ ಮಾತ್ರಕ್ಕೆ ಇದು ರೈತಪರ ಬಜೆಟ್‌ ಆಗುವುದಿಲ್ಲ ಎಂದು ಪ್ರಿಯಾಂಕ್ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ : ವಿ.ವಿ. ಮುಚ್ಚಿಸುವ ಬೆದರಿಕೆ: ಜನರನ್ನ ಆರೆಸ್ಸೆಸ್ ಶಾಖೆಗೆ ತಳ್ಳುವ ಬಯಕೆಯಾ?; ಜಾಧವ್ ಕಾಲೆಳೆದ ಪ್ರಿಯಾಂಕ್ ಖರ್ಗೆ

ಕಲ್ಯಾಣ ಕರ್ನಾಟಕದ ತೊಗರಿ ಬೆಳೆಗಾರರ ಸಂಕಷ್ಟು ರಾಜ್ಯ ಸರ್ಕಾರದ ಕಣ್ಣಿಗೆ ಬಿದ್ದಿಲ್ಲ ಎಂದು ಇದೇ ವೇಳೆ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಬಾರಿ ಬಿತ್ತನೆ ಬೀಜ ಖರೀದಿಯಿಂದ ಹಿಡಿದು ಮಾರಾಟದವರೆಗೂ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ತೊಗರಿ ಬೆಳೆಗಾರರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಯೋಜನೆಯನ್ನು ರೂಪಿಸಿಲ್ಲ. ಖರೀದಿ ಕೇಂದ್ರಗಳ ಸ್ಥಾಪನೆ, ಖರೀದಿ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಖರೀದಿ ಪ್ರಮಾಣ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಫಸಲು ಪಡೆದಿದ್ದರೂ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Youtube Video
First published: March 5, 2020, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories