news18-kannada Updated:December 17, 2020, 3:08 PM IST
ಪ್ರಿಯಾಂಕ್ ಖರ್ಗೆ
ಕಲಬುರ್ಗಿ(ಡಿಸೆಂಬರ್. 17): ಆರ್ಥಿಕತೆ ದಿವಾಳಿಯಿಂದಾಗಿ ರಾಜ್ಯ ಸರ್ಕಾರ ಐಸಿಯುನಲ್ಲಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋಮಾಕ್ಕೆ ಹೋಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಮೈನಸ್ ಶೇ.70 ರಷ್ಟಾಗಿದೆ. ಕೆಕೆಆರ್ಡಿಬಿಗೆ ಬರಬೇಕಾದ ಅನುದಾನವೂ ಬರುತ್ತಿಲ್ಲ. ಯಾವುದೇ ಕಾಮಗಾರಿಗಳೂ ನಡೆಯುತ್ತಿಲ್ಲ. ನೇರ ನೇಮಕಾತಿಯಂತಹ ಪ್ರಕ್ರಿಯೆಯನ್ನೂ ಕೈಬಿಡಲಾಗಿದೆ ಎಂದರು. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮಾಡಿದ ಕೂಡಲೇ ಕಲ್ಯಾಣ ಮಾಡಿದಂತಲ್ಲಾ. ಒಂದು ಕಡೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕೊಟ್ಟಿರುವುದೇ ಕಡಿಮೆ ಅನುದಾನ. ಮತ್ತೊಂದು ಕಡೆ ಕೊಟ್ಟ ಅನುದಾವನ್ನು ಬಳಕೆ ಮಾಡಿಲ್ಲ. ಈ ವರ್ಷದ ನವೆಂಬರ್ ತಿಂಗಳವರೆಗೆ 1500 ಕೋಟಿ ರೂಪಾಯಿಗಳ ಪೈಕಿ ರಾಜ್ಯ ಸರ್ಕಾರ ಕೇವಲ 533 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಪೈಕಿ ಖರ್ಚಾಗಿರುವುದು ಮಾತ್ರ ಕೇವಲ 48 ಕೋಟಿ ರೂಪಾಯಿ ಮಾತ್ರ ಎಂದರು.
ಇಷ್ಟೆಲ್ಲ ಇದ್ದರೂ ಕೆಕೆಆರ್ಡಿಬಿ ಅಧ್ಯಕ್ಷರು ಮಾತ್ರ ರಾಜ್ಯ ಸರ್ಕಾರದಿಂದ ಭರಪೂರ ಅನುದಾನ ಬಂದಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದಾರೆ. ಶೇ.78 ರಷ್ಟು ಖರ್ಚು ಮಾಡಿಲ್ಲ ಅಂದ್ರೆ ಮುಂದಿನ ಕಂತುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಇಷ್ಟಾದರೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೈ ಕೊಡವಿ ಮೇಲೇಳುತ್ತಿಲ್ಲ. ಕೆಕೆಆರ್ಡಿಬಿಗೆ ಕೇವಲ ಅಧ್ಯಕ್ಷರನ್ನಾ ಮಾತ್ರ ನೇಮಕ ಮಾಡಲಾಗಿದೆ. ಸಮಿತಿಯನ್ನೇ ನೇಮಕ ಮಾಡದೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ತಳೆದಿದೆ.
ಇದೆಲ್ಲದರ ಕಾರಣದಿಂದಾಗಿ ಕೆಕೆಆರ್ಡಿಬಿ ಕೋಮಾ ಸ್ಥಿತಿಗೆ ಹೋಗಿದೆ. ಇದನ್ನು ಸರಿಪಡಿಸಲು ವೈದ್ಯರಾಗಿರುವ ಸಿಎಂ ಬಳಿ ಹೋಗ ಅನಿವಾರ್ಯತೆ ಇದೆ. ವೈದ್ಯರ ಬಳಿ ಕರೆದೊಯ್ಯಲು ನಾವು ಪ್ರತಿಪಕ್ಷಗಳು ಸಿದ್ದರಿದ್ದೇವೆ. ಆದರೆ ಆಡಳಿತ ಪಕ್ಷದ ಶಾಸಕರೇ ಬರುವುದಕ್ಕೆ ಹೆದರುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮವಾಗಲಿದೆ ಎಂದರು.
ಅವಿರೋಧ ಆಯ್ಕೆಗೆ ಕೋಟಿ ಅನುದಾನಕ್ಕೆ ಖಂಡನೆ :
ಯಾವುದೇ ಗ್ರಾಮ ಪಂಚಾಯತ್ಗಳಲ್ಲಿ ಎಲ್ಲ ಸ್ಥಾನಗಳೂ ಅವಿರೋಧವಾಗಿ ಆಯ್ಕೆಗೊಂಡಲ್ಲಿ 1 ಕೋಟಿ ರೂಪಾಯಿ ಅನುದಾನ ಕೊಡುವುದಾಗಿ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಪ್ರಕಟಿಸಿದ್ದಾರೆ. ಆದರೆ ಈ ರೀತಿ ಆಮಿಷವೊಡ್ಡುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ.
ಇದನ್ನೂ ಓದಿ :
ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಶಾಸಕ, ಸಂಸದರ ಭಾವಚಿತ್ರ ಬಳಕೆ: ಅಭ್ಯರ್ಥಿಗಳಿಂದ ನೀತಿಸಂಹಿತೆ ಉಲ್ಲಂಘನೆ
ಅವಿರೋಧವಾಗಿ ಆಯ್ಕೆಯಾದ್ರೆ ಮಾತ್ರ ಒಂದು ಕೋಟಿ ಹಣ ನೀಡುವುದಾದ್ರೆ, ಉಳಿದವರಿಗೆ ಕೊಡಲ್ಲ ಎಂದೇ ಅರ್ಥ ಎಂದರು. ಇವರೇ ಹಣ ಕೊಡುವುದಾದ್ರೆ ಚುನಾವಣೆ ಯಾಕೆ ನಡೆಸಬೇಕು. ಸಂವಿಧಾನ ಏಕಿರಬೇಕೆಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕೆಕೆಆರ್ಡಿಬಿಗೆ ಅನುದಾನ ಕೊಡುತ್ತಿರುವುದು ಗ್ರಾಮ ಪಂಚಾಯತ್ಗಳಿಗೆ ಮನಸ್ಸಿಗೆ ಬಂದಂತೆ ಹಂಚಲು ಅಲ್ಲ. ಇದನ್ನು ಅರ್ಥ ಮಾಡಿಕೊಂಡು ರೇವೂರ ಹೇಳಿಕೆ ನೀಡಬೇಕು. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
Published by:
G Hareeshkumar
First published:
December 17, 2020, 2:50 PM IST