• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ದೇವರ ಅವಹೇಳನಕಾರಿ ಪೋಸ್ಟ್ ವಿಷಯವಾಗಿ ವಿವಾದಕ್ಕೆ ಸಿಲುಕಿ ಮತ್ತೆ ಸುದ್ದಿಯಾದ ಮಾಜಿ ಸಚಿವ ಮುರುಗೇಶ್ ನಿರಾಣಿ

ದೇವರ ಅವಹೇಳನಕಾರಿ ಪೋಸ್ಟ್ ವಿಷಯವಾಗಿ ವಿವಾದಕ್ಕೆ ಸಿಲುಕಿ ಮತ್ತೆ ಸುದ್ದಿಯಾದ ಮಾಜಿ ಸಚಿವ ಮುರುಗೇಶ್ ನಿರಾಣಿ

ಶಾಸಕ ಮುರುಗೇಶ​ ನಿರಾಣಿ

ಶಾಸಕ ಮುರುಗೇಶ​ ನಿರಾಣಿ

ಮಾಜಿ ಸಚಿವ ಮುರುಗೇಶ್ ನಿರಾಣಿ ಸಚಿವ ಸ್ಥಾನ ಕೈತಪ್ಪಿದ ಬಳಿಕ ಆಗಾಗ ಸದಾ ಸುದ್ದಿಯಲ್ಲಿದ್ದಾರೆ. ಸುದ್ದಿ ಮುರುಗೇಶ್ ನಿರಾಣಿಯನ್ನು ಸುತ್ತಿಕೊಳ್ಳುತ್ತಿದೆಯೇ ಅಥವಾ ಅವರೇ ಸುದ್ದಿಯಲ್ಲಿ ಇರಲು ಇಂತಹ ತಂತ್ರ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ಈಗ ಹಿಂದೂ ದೇವರುಗಳ ಹಾಗೂ ಧರ್ಮದ ಬಗ್ಗೆ ಅವಹೇಳನದ ಪೋಸ್ಟ್ ವಿಷಯವಾಗಿ ವಿವಾದಕ್ಕೆ ಸಿಲುಕಿದ್ದಾರೆ.

ಮುಂದೆ ಓದಿ ...
  • Share this:

ಬಾಗಲಕೋಟೆ (ಜು.21): ಬಿಜೆಪಿ ಮಾಜಿ ಸಚಿವ, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಒಂದಿಲ್ಲೊಂದು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಮೈತ್ರಿ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಬಿಎಸ್ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನಲಾಗಿತ್ತು. ಆದರೆ ಮುರುಗೇಶ್ ನಿರಾಣಿ ಸಚಿವ ಸ್ಥಾನ ಸಿಗಲಿಲ್ಲ. ಆ ಬಳಿಕ ಮುರುಗೇಶ್ ನಿರಾಣಿ ಸಚಿವ ಸ್ಥಾನ ಕೈ ತಪ್ಪಿದ್ದರೂ ಒಂದಿಲ್ಲೊಂದು ಚರ್ಚೆ, ವಿವಾದದ ಮೂಲಕ ರಾಜ್ಯ ರಾಜಕಾರಣದ ಮುನ್ನೆಲೆಯಲ್ಲಿದ್ದಾರೆ.


ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಒಂದು ಗುಂಪು ತೆರೆಮರೆಯಲ್ಲಿ ಭಿನ್ನಮತ ನಡೆಸಿದ್ದಾಗಲೂ ಮುರುಗೇಶ್ ನಿರಾಣಿ ಹೆಸರು ಮುಂಚೂಣಿಯಲ್ಲಿತ್ತು. ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಹರ ಜಾತ್ರೆಯ ವೇದಿಕೆ ಮೇಲೆಯೇ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಬೇಕೆಂದು ಸಿಎಂ ಯಡಿಯೂರಪ್ಪನವರಿಗೆ ಒತ್ತಡ ಹಾಕಿ,  ಮುಜುಗರ ತಂದಿದ್ದರು. ಆ ಬಳಿಕ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್- ಮುರುಗೇಶ್ ನಿರಾಣಿ ಮಧ್ಯೆ ಟಾಕ್ ವಾರ್ ನಡೆದಿತ್ತು. ಬಣ್ಣ ಬಯಲು ಮಾಡ್ತೀನಿ ಎಂದು ನೇರವಾಗಿ ಮುರುಗೇಶ್ ನಿರಾಣಿ, ಕುಟುಂಬದ ಮೇಲೆ  ಯತ್ನಾಳ್ ವಾಗ್ದಾಳಿ ನಡೆಸಿದ್ದರು. ಮುರುಗೇಶ್ ನಿರಾಣಿ ಪರ ಸಹೋದರ ಸಂಗಮೇಶ್ ನಿರಾಣಿ ಯತ್ನಾಳ್​ ತಿರುಗೇಟು ನೀಡಿದ್ದರು.


ಸಂಪುಟ ವಿಸ್ತರಣೆ, ಪುನರ್ ರಚನೆ ವಿಚಾರ ಬಂದಾಗಲೆಲ್ಲ ಪಂಚಮಸಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕೆಂದು ಪಂಚಮಸಾಲಿ ಹರಿಹರ ಪೀಠ ವಚನಾನಂದ ಸ್ವಾಮೀಜಿ, ಹಾಗೂ ಕೂಡಲಸಂಗಮ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳುವ ಮೂಲಕ ಬಿ ಎಸ್ ಯಡಿಯೂರಪ್ಪರಿಗೆ ಒತ್ತಡ ಹಾಕುತ್ತಾ ಬಂದಿದ್ದಾರೆ. ಆದರೆ ಸಚಿವ ಸ್ಥಾನ ಮಾತ್ರ ಸಿಗುತ್ತಿಲ್ಲ‌. ಇನ್ನು ಶಾಸಕ ಮುರುಗೇಶ್ ನಿರಾಣಿ ತಮ್ಮ ಕೈಗಾರಿಕೋದ್ಯಮಿ ಕಡೆಗೆ ಗಮನ ಹರಿ‌ಸುತ್ತಾ ಆಗಾಗ ಗಮನ ಸೆಳೆಯುತ್ತಾ ಬಂದಿದ್ದಾರೆ. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಭಿನ್ನಮತದ ಸಭೆ  ವಿಚಾರ ಬಂದಾಗಲೂ ಶಾಸಕ ಮುರುಗೇಶ್ ನಿರಾಣಿ ನಮ್ಮ ಕೈಗಾರಿಕೆ, ಜೊತೆಗೆ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಭೆ ಸೇರಿದ್ದೀವಿ ಎಂದಿದ್ದರು‌.


ಕೊರೋನಾ ಮಧ್ಯೆಯೂ ಈಚೆಗೆ ಬಿಜೆಪಿ ಅತೃಪ್ತ ಶಾಸಕರು ಬೆಂಗಳೂರಲ್ಲಿ ಸಭೆ ಸೇರಿದ್ದರು. ಮುರುಗೇಶ್ ನಿರಾಣಿ ಕೂಡ ಸಭೆಯಲ್ಲಿದ್ದರು ಎನ್ನಲಾಗಿತ್ತು. ಇದನ್ನು ಮುರುಗೇಶ್ ನಿರಾಣಿ ಅಲ್ಲಗಳೆದಿದ್ದರು. ಅತೃಪ್ತ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದ ಬಳಿಕ ಭಿನ್ನಮತ ತಣ್ಣಗಾಗಿತ್ತು. ಆ ಬಳಿಕ ಮುರುಗೇಶ್ ನಿರಾಣಿ ಶುಗರ್ಸ್​ಗೆ ಸಿಎಂ ಬಿಎಸ್​ವೈ ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು 40 ವರ್ಷದವರೆಗೆ ಲೀಜ್​ಗೆ ಕೊಡುವ ಮೂಲಕ ಬಂಪರ್​ ಕೊಡುಗೆ ನೀಡಿದ್ದರು. ಇದಕ್ಕೆ ವಿರೋಧ ಪಕ್ಷ, ರೈತರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆಯೂ ಮಂಡ್ಯ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ದತೆ ನಡೆದಿದೆ. ಈ ವಿಚಾರ ತಣ್ಣಗಾಗುವ ಹೊತ್ತಲ್ಲೇ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೈದ್ಯಕೀಯ  ಉಪಕರಣ ಖರೀದಿ ವೇಳೆ ಭಾರಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು. ಈ ವೇಳೆ ರಾಜ್ಯ ಸರ್ಕಾರ ಲೆಕ್ಕ ಕೊಡಬೇಕೆನ್ನುವ ಅಭಿಯಾನ ಕೂಡ ಕಾಂಗ್ರೆಸ್ ಆರಂಭಿಸಿತ್ತು. ಇದನ್ನು ಬಿಜೆಪಿ ಶಾಸಕರು, ಸಚಿವರು ಆಧಾರರಹಿತ ಆರೋಪವೆಂದಾಗ ಸಿದ್ದರಾಮಯ್ಯ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಪೆನ್ ಡ್ರೈವ್ ನಲ್ಲಿದೆ ಪಡೆಯಿರಿ ಎಂದು ತಿರುಗೇಟು ನೀಡಿದಾಗ ಮುರುಗೇಶ್ ನಿರಾಣಿ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದ್ದರು. ಆಗ ಮುರುಗೇಶ್ ನಿರಾಣಿ ನನ್ನ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ ಎಂದು ಸ್ಪಷ್ಟಪಡಿಸಿದರು.


ಆಪ್ತ ಸಹಾಯಕನ ಅಚಾತುರ್ಯವೆಂದ ಮುರುಗೇಶ್ ನಿರಾಣಿ...!


ಹಿಂದೂ ದೇವತೆಗಳ ಅವಹೇಳನ ಪೋಸ್ಟ್​ವೊಂದು ಮುರುಗೇಶ್ ನಿರಾಣಿ ಮೀಡಿಯಾ ವಾಟ್ಸಾಪ್​ ಗ್ರೂಪ್​ನಲ್ಲಿ ಫಾರ್ವರ್ಡ್ ಆಗಿದ್ದು, ಅದು ಈಗ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದ ಶಾ‌ಸಕರೊಬ್ಬರು ಹಿಂದೂ ಧರ್ಮ, ದೇವತೆ ಬಗ್ಗೆ ಅವಹೇಳನ ಪೋಸ್ಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟ್​ ಬಂದ ಬಳಿಕ ವಾಟ್ಸಾಪ್​ ಗ್ರೂಪ್​ನಲ್ಲಿ ಇದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗ್ರೂಪ್ ನಿಂದ ಲೆಫ್ಟ್ ಆಗಿದ್ದರು. ವಿವಾದ ಗಂಭೀರತೆ ಪಡೆದುಕೊಳ್ಳುತ್ತಿದ್ದಂತೆ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿ, ರಾಜ್ಯದ ಜನತೆ ಬಳಿ ಕ್ಷಮೆ ಕೋರಿದ್ದಾರೆ.


ನನ್ನ ಮೊಬೈಲ್ ನಂಬರ್ ಸಾರ್ವಜನಿಕ ಸಂಪರ್ಕಕ್ಕಾಗಿ ಆಪ್ತಸಹಾಯಕ ಗನ್ ಮ್ಯಾನ್ ಉಪಯೋಗಿಸುತ್ತಿದ್ದಾರೆ. ಇವತ್ತು ಬೆಳಿಗ್ಗೆ ನನ್ನ ಆಪ್ತ ಸಹಾಯಕ ಅಚಾತುರ್ಯದಿಂದ ಬಂದಿದ್ದ ಮೆಸೇಜ್ ಫಾರ್ವರ್ಡ್ ಆಗಿದೆ. ನಾನು ಸರ್ವಧರ್ಮ ಸಹಿಷ್ಣು, ಧರ್ಮದ ಬಗ್ಗೆ ಎಂದೂ ಹಗುರವಾಗಿ ಮಾತನಾಡಿಲ್ಲ. ಎಲ್ಲ ಧರ್ಮವನ್ನು ಸಮಾನವಾಗಿ ಗೌರವಿಸುತ್ತೇನೆ. ಹಿಂದೂ ಧರ್ಮದ ಬಗ್ಗೆಯಂತೂ ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತೇನೆ. ಹಿಂದೂ ಆಗಿ ನನ್ನ ಧರ್ಮದ ಬಗ್ಗೆ ಅಭಿಮಾನವಿದೆ. ನನ್ನ ಆಪ್ತ ಸಹಾಯಕನ ಅಚಾತುರ್ಯದಿಂದ ತಪ್ಪಾಗಿದೆ. ನನ್ನ ಬಗ್ಗೆ ರಾಜ್ಯದ ಜನತೆ ತಪ್ಪಾಗಿ ಭಾವಿಸಬೇಡಿ, ಕ್ಷಮೆ ಇರಲಿ ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.


ಇದನ್ನು ಓದಿ: ‘ಕರ್ನಾಟಕ ಇನ್ನು ಸಂಪೂರ್ಣ ಲಾಕ್​ಡೌನ್​ ಫ್ರೀ ರಾಜ್ಯ: ಇನ್ಮುಂದೆ ಎಲ್ಲೂ, ಎಂದೂ ಲಾಕ್​ಡೌನ್​ ಇಲ್ಲ: ಯಡಿಯೂರಪ್ಪ


ಒಟ್ಟಿನಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಸಚಿವ ಸ್ಥಾನ ಕೈತಪ್ಪಿದ ಬಳಿಕ ಆಗಾಗ ಸದಾ ಸುದ್ದಿಯಲ್ಲಿದ್ದಾರೆ. ಸುದ್ದಿ ಮುರುಗೇಶ್ ನಿರಾಣಿಯನ್ನು ಸುತ್ತಿಕೊಳ್ಳುತ್ತಿದೆಯೇ ಅಥವಾ ಅವರೇ ಸುದ್ದಿಯಲ್ಲಿ ಇರಲು ಇಂತಹ ತಂತ್ರ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ಈಗ ಹಿಂದೂ ದೇವರುಗಳ ಹಾಗೂ ಧರ್ಮದ ಬಗ್ಗೆ ಅವಹೇಳನದ ಪೋಸ್ಟ್ ವಿಷಯವಾಗಿ ವಿವಾದಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

Published by:HR Ramesh
First published: