ಕನಕಪುರ ಚಲೋ ಮತೀಯ ಶಕ್ತಿಗಳ ಹುನ್ನಾರ; ಪ್ರಚೋದನೆಗೆ ಒಳಗಾಗದಂತೆ ಕ್ಷೇತ್ರದ ಜನರಲ್ಲಿ ಡಿಕೆಶಿ ಮನವಿ

ಕನಕಪುರ ಚಲೋ ಹೆಸರಿನಲ್ಲಿ ಮತೀಯ ಶಕ್ತಿಗಳು ನೀಡುವ ಯಾವುದೇ ಪ್ರಚೋದನೆಗೆ ಕನಕಪುರದ ಮಹಾಜನತೆ ಒಳಗಾಗಬೇಡಿ. ಅವರು ಎಷ್ಟೇ ಕೆರಳಿಸಿದರೂ ಸಹನೆ ಕಳೆದುಕೊಳ್ಳಬೇಡಿ. ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬೇಡಿ. ಶಾಂತಿಗೆ ಭಂಗ ತರಬೇಡಿ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ-ಡಿಕೆಶಿ

news18-kannada
Updated:January 12, 2020, 9:39 AM IST
ಕನಕಪುರ ಚಲೋ ಮತೀಯ ಶಕ್ತಿಗಳ ಹುನ್ನಾರ; ಪ್ರಚೋದನೆಗೆ ಒಳಗಾಗದಂತೆ ಕ್ಷೇತ್ರದ ಜನರಲ್ಲಿ ಡಿಕೆಶಿ ಮನವಿ
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು(ಜ.12): ನಾಳೆ ಅಂದರೆ ಜನವರಿ 13ರಂದು ಕನಕಪುರ ಚಲೋ ನಡೆಯಲಿದೆ. ಏಸು ಕ್ರಿಸ್ತನ ಪ್ರತಿಮೆ ವಿರೋಧಿಸುತ್ತಿರುವರು ಚಲೋ ನಡೆಸಿ, ಶಾಂತಿ ಪ್ರಿಯರನ್ನು ಕೆಣಕಲು ಹೊರಟಿದ್ದಾರೆ. ಕೋಮು ಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಈ ಮತೀಯ ಶಕ್ತಿಗಳ ಹುನ್ನಾರವಾಗಿದೆ.  ಹೀಗಾಗಿ ಇಂತಹ ಶಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಜಿ ಸಚಿವ ಡಿಕೆ ಶಿವಕುಮಾರ್​ ಕನಕಪುರ ಜನರಿಗೆ ಮನವಿ ಮಾಡಿದ್ದಾರೆ.

ಡಿಕೆಶಿಯವರು ಸಾಮಾಜಿಕ ಜಾಲತಾಣದಲ್ಲಿ ತನ್ನ ಕ್ಷೇತ್ರದ ಜನರಲ್ಲಿ ವಿನಮ್ರ ಮನವಿ ಮಾಡಿದ್ದಾರೆ. "ಕನಕಪುರದ ಮಹಾಜನರು ಶತ-ಶತಮಾನಗಳಿಂದಲೂ ಶಾಂತಿಪ್ರಿಯರು. ಮತೀಯ ಸಾಮರಸ್ಯಕ್ಕೆ ಹೆಸರಾದವರು. ಜಾತಿ, ಮತ, ಧರ್ಮದ ಬೇಧವಿಲ್ಲದೆ ಸಹೋದರ ಭಾವದಿಂದ ಬದುಕಿದವರು, ಬದುಕುತ್ತಿರುವವರು. ಕೋಮು ಸೌಹಾರ್ದತೆಯಲ್ಲಿ ಇಡೀ ನಾಡಿಗೇ ಮಾದರಿಯಾದವರು. ಅಂತಹ ಶಾಂತಿ ಮತ್ತು ಸ್ನೇಹ ಪ್ರಿಯರನ್ನು ಕೆಣಕಲು ಕಪಾಲಬೆಟ್ಟದ ಯೇಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿವೆ. ಸುಳ್ಳು ಕಾರಣ, ಕಟ್ಟುಕತೆಗಳನ್ನು ಸೃಷ್ಟಿಸುತ್ತಿವೆ. ವದಂತಿಗಳನ್ನು ಹರಡುತ್ತಿವೆ. ಇದೇ ಜನವರಿ 13 ರಂದು ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಈ ಮತೀಯ ಶಕ್ತಿಗಳ ಹುನ್ನಾರವಾಗಿದೆ".

ಬೆಂಗಳೂರಲ್ಲಿ ಸಿಎಎ ಗಲಾಟೆ ವೇಳೆ ಉಗ್ರರ ನೇಮಕಕ್ಕೆ ಪ್ಲಾನ್; ರಾಜ್ಯದಲ್ಲಿ ದಾಳಿ ಮಾಡಲು ರೆಡಿಯಾಗಿತ್ತು ಸ್ಕೆಚ್

"ಆದರೆ ಅವರಿಗೆ ಗೊತ್ತಿಲ್ಲ, ಕನಕಪುರದ ಮಹಾಜನತೆ ಅದೆಷ್ಟು ಪ್ರಬುದ್ಧರು, ಇಲ್ಲಿ ನೂರಾರು ವರ್ಷಗಳಿಂದ ಎಲ್ಲ ಕೋಮು ಮತ್ತು ಧರ್ಮದ ಜನರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ ಎಂಬುದು. ಹೀಗಾಗಿ ಕನಕಪುರ ಚಲೋ ಹೆಸರಿನಲ್ಲಿ ಮತೀಯ ಶಕ್ತಿಗಳು ನೀಡುವ ಯಾವುದೇ ಪ್ರಚೋದನೆಗೆ ಕನಕಪುರದ ಮಹಾಜನತೆ ಒಳಗಾಗಬೇಡಿ. ಅವರು ಎಷ್ಟೇ ಕೆರಳಿಸಿದರೂ ಸಹನೆ ಕಳೆದುಕೊಳ್ಳಬೇಡಿ. ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬೇಡಿ. ಶಾಂತಿಗೆ ಭಂಗ ತರಬೇಡಿ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ".

"ಕನಕಪುರದ ಜನತೆ ಮತೀಯ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುತ್ತಾರೆ, ಕೋಮುಶಕ್ತಿಗಳ ಯಾವುದೇ ಪ್ರೇರಣೆ, ಹುನ್ನಾರಗಳಿಗೂ ಬಲಿಯಾಗುವುದಿಲ್ಲ. ಭ್ರಾತೃತ್ವವನ್ನು ಎತ್ತಿ ಹಿಡಿಯುತ್ತಾರೆ, ಸಾಮರಸ್ಯ, ಸೌಹಾರ್ದತೆ ಕಾಪಾಡುತ್ತಾರೆಂಬ ಅದಮ್ಯ ವಿಶ್ವಾಸ, ನಂಬಿಕೆ ನನ್ನದು. ನಾವೆಲ್ಲರೂ ಶಾಂತಿಯಿಂದಲೇ ವಿಕೃತ ಮನಸ್ಸಿನ ಕೋಮು ಶಕ್ತಿಗಳ ಸಂಚನ್ನು ಹಿಮ್ಮೆಟ್ಟಿಸೋಣ," ಎಂದು ಡಿಕೆಶಿ ಜನರಿಗೆ ಕರೆ ಕೊಟ್ಟಿದ್ದಾರೆ.

ಮಹಾರಾಷ್ಟ್ರದ ಪಲ್ಗಾರ್​ನಲ್ಲಿ ಕಾರ್ಖಾನೆ ಸ್ಪೋಟ; ಎಂಟು ಸಾವು, ಹಲವು ಮಂದಿಗೆ ಗಾಯ

 
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ