HOME » NEWS » State » FORMER MINISTER APPU PATTANSHETTY PURCHASED CANDLE WITH HIS DAUGHTER SESR MVSV

ಆತಂಕದ ಮಧ್ಯೆ ಬೆಳಕಿನ ಹಬ್ಬಕ್ಕೆ ಸಿದ್ಧತೆ: ಮಗಳೊಂದಿಗೆ ರಸ್ತೆ ಬದಿ ಹಣತೆ ಖರೀದಿಸಿ ಗಮನ ಸೆಳೆದ ಮಾಜಿ ಸಚಿವ

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕರೆಗೆ ಬೆಂಬಲ ನೀಡಲು ರಸ್ತೆ ಬದಿಯ ವ್ಯಾಪಾರಿಗಳಿಂದ ಹಣತೆ ಖರೀದಿ ಮಾಡಿದ್ದೇನೆ-ಅಪ್ಪು ಪಟ್ಟಣಶೆಟ್ಟಿ

news18-kannada
Updated:November 12, 2020, 5:40 PM IST
ಆತಂಕದ ಮಧ್ಯೆ ಬೆಳಕಿನ ಹಬ್ಬಕ್ಕೆ ಸಿದ್ಧತೆ: ಮಗಳೊಂದಿಗೆ ರಸ್ತೆ ಬದಿ ಹಣತೆ ಖರೀದಿಸಿ ಗಮನ ಸೆಳೆದ ಮಾಜಿ ಸಚಿವ
ಮಗಳೊಂದಿಗೆ ಅಪ್ಪು ಪಟ್ಟಣಶೆಟ್ಟಿ
  • Share this:
ವಿಜಯಪುರ(ನ. 12): ಬಸವ ನಾಡಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ.  ಕೊರೊನಾ ಆತಂಕದ ಮಧ್ಯೆಯೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗಳಿಗೆ ತೆರಳಿ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ದೀಪಾವಳಿ ಲಕ್ಷ್ಮಿ ಪೂಜೆಗೆ ಬೇಕಾಗುವ ಪೂಜಾ ಸಾಮಗ್ರಿಗಳ ಮಾರಾಟ ನಡೆಯುತ್ತಿದೆ.  ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದಾರೆ.  ಆದರೆ, ಸಾಮಾನುಗಳನ್ನು ಖರೀದಿಸುವವರ ಸಂಖ್ಯೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವುದು ವ್ಯಾಪಾರಿಗಳ ತಲೆಬಿಸಿ ಮಾಡಿದೆ. ನಗರದ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ, ಸರಾಫ್ ಬಜಾರ್ ಸೇರಿದಂತೆ ನಾನಾ ಕಡೆಗಳಲ್ಲಿ ಜನರು ಮಾರುಕಟ್ಟೆಗಳಿಗೆ ಆಗಮಿಸಿದ್ದಾರೆ.  ಆದರೆ, ಜನರು ಕೊರೊನಾ ಬಗ್ಗೆ ಜಾಗೃತಿ ಮಾತ್ರ ವಹಿಸದಿರುವುದು ಕಂಡು ಬರುತ್ತಿದೆ.  ಮಾಸ್ಕ್ ಹಾಕದೆ ಜನ ತಿರುಗಾಡುತ್ತಿದ್ದು, ಸಾಮಾಜಿಕ ಅಂತರವೂ ಮಾಯವಾಗಿದೆ. ಅಲ್ಲಲ್ಲಿ ಜನರ ಗುಂಪುಗಳು ಕಂಡು ಬರುತ್ತಿವೆ.  ಕೆಲವರು ಮಾಸ್ಕ್ ಹಾಕಿದ್ದರೂ ಇನ್ನೂ ಕೆಲವರು ಅರ್ಧಂಬರ್ಧ ಮಾಸ್ಕ್ ಹಾಕಿರುವ ದೃಶ್ಯಗಳು ಸಾಮಾನ್ಯವಾಗಿವೆ. 

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ. 60ಕ್ಕಿಂತಲೂ ಹೆಚ್ಚು ವ್ಯಾಪಾರ ಕಡಿಮೆಯಾಗಿದೆ ಎಂದು ತಮ್ಮ ಅಜ್ಜನ ಕಾಲದಿಂದಲೂ ಪಟಾಕಿ ಮಾರಾಟ ಮಾಡುತ್ತ ಬಂದಿರುವ ರೇವಣಸಿದ್ಧಪ್ಪ ಹಳಕಟ್ಟಿ ನ್ಯೂಸ್ 18 ಕನ್ನಡದ ಎದುರು ಅಳಲು ತೋಡಿಕೊಂಡಿದ್ದಾರೆ.  ಸುಮಾರು ರೂ. 10 ಲಕ್ಷ ಖರ್ಚು ಮಾಡಿ ಪಟಾಕಿ ತಂದಿದ್ದೇವೆ.  ಸರಕಾರ ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ.  ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ಕಳೆದ ಎರಡು ವರ್ಷಗಳ ಹಿಂದೆಯೇ ಬಹುತೇಕ ಪಟಾಕಿ ಕಾರ್ಖಾನೆಗಳು ಹಸಿರು ಪಟಾಕಿಗಳನ್ನೇ ತಯಾರಿಸುತ್ತಿವೆ.  ಆದರೆ, ಜನರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.  ಈ ಹಿನ್ನೆಲೆಯಲ್ಲಿ ಅಂಗಡಿಗೆ ಬರುವ ಗ್ರಾಹಕರಿಗೆ ಹಸಿರು ಪಟಾಕಿಯ ಬಗ್ಗೆ ತಿಳಿ ಹೇಳಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

Former minister Appu Pattanshetty purchased candle with his daughter

ಹಬ್ಬದ ಸಂದರ್ಭದಲ್ಲಿ ಬಟ್ಟೆ ಅಂಗಡಿಗಳಲ್ಲಿಯೂ ಜನ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ.  ಇದು ಜವಳಿ ವರ್ತಕರನ್ನೂ ಕಂಗಾಲಾಗುವಂತೆ ಮಾಡಿದೆ.  ಹಿಂದೂಗಳ ಪಾಲಿಗೆ ಬೆಳಕಿನ ಹಬ್ಬ ದೀಪಾವಳಿ ಅಂದರೆ ದೊಡ್ಡ ಸಂಭ್ರಮಾಚರಣೆ ಇರುತ್ತದೆ.  ಆದರೆ, ಈ ಬಾರಿ ಕೊರೊನಾದಿಂದಾಗಿ ಅದು ಕಳೆಗುಂದುವಂತಾಗಿದೆ.

ಮಗಳೊಂದಿಗೆ ಬಂದು ರಸ್ತೆ ಬದಿ ಹಣತೆ ಖರೀದಿಸಿದ ಮಾಜಿ ಸಚಿವ

ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ, ತಮ್ಮ ಮಗಳು ಲಕ್ಷಿ ಜೊತೆ ಮಾರುಕಟ್ಟೆಗೆ ಬಂದು ರಸ್ತೆ ಬದಿಯ ವ್ಯಾಪಾರಿಗಳಿಂದ ದೀಪ ಹಚ್ಚುವ ಹಣತೆ ಖರೀದಿಸಿ ಸರಳತೆ ಮೆರೆದಿದ್ದಾರೆ.  ನಗರದ ಅಂಬೇಡ್ಕರ್ ಸರ್ಕಲ್ ಬಳಿ ಮಗಳ ಜೊತೆ ಆಗಮಿಸಿದ ಅವರು, ರಸ್ತೆ ಬದಿಯಲ್ಲಿ ಮಾರಾಟವಾಗುತ್ತಿದ್ದ ಹಣತೆ ಖರೀದಿಸಿದರು.

ಇದನ್ನು ಓದಿ: ನ.16ರಂದು ಆರನೇ ಬಾರಿ ಸಿಎಂ ಆಗಿ ನಿತೀಶ್​ ಕುಮಾರ್​ ಪ್ರಮಾಣವಚನಈ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕರೆಗೆ ಬೆಂಬಲ ನೀಡಲು ರಸ್ತೆ ಬದಿಯ ವ್ಯಾಪಾರಿಗಳಿಂದ ಹಣತೆ ಖರೀದಿ ಮಾಡಿದ್ದೇನೆ.  ಈ ಮೂಲಕ ಆತ್ಮನಿರ್ಭರ ಭಾರತ ಕರೆ ಬೆಂಬಲಿಸಿ ಸ್ಥಳೀಯರಿಂದ ದೀಪಾವಳಿ ಸಾಮಗ್ರಿ ಖರೀದಿಸುತ್ತಿದ್ದೇನೆ.  ಜನರೂ ಕೂಡ ಈ ಬಾರಿ ಸರಳವಾಗಿ ದೀಪಾವಳಿಯನ್ನು ಆಚರಿಸಬೇಕು.  ಅಲ್ಲದೇ, ಸ್ಥಳೀಯರಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಿ ರಸ್ತೆ ಬದಿಯ ಬಡ ವ್ಯಾಪಾರಿಗಳಿಗೆ ನೆರವಾಗಬೇಕು ಎಂದು ಕರೆ ನೀಡಿದರು.

ಈ ಬಾರಿ ಬೆಳಕಿನ ಹಬ್ಬ ದೀಪಾವಳಿ ಆಡಂಭರಕ್ಕಿಂತ ಹೆಚ್ಚಾಗಿ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ಆಚರಿಸಲು ಜನ ಒಲವು ತೋರುತ್ತಿರುವುದು ಪ್ರಸಕ್ತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
Published by: Seema R
First published: November 12, 2020, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories