ಬೆಂಗಳೂರು: ಅಥಣಿ ವಿಧಾನಸಭಾ ಕ್ಷೇತ್ರದಿಂದ (Karnataka Assembly Election) ಟಿಕೆಟ್ ವಂಚಿತರಾಗಿ ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಲಕ್ಷ್ಮಣ ಸವದಿ (Laxman Savadi Quits BJP) ಅವರು ಇದೀಗ ಕಮಲ ಪಾಳಯಕ್ಕೆ ಗುಡ್‌ಬೈ ಎಂದಿದ್ದಾರೆ. ಪಕ್ಷ ತನಗೆ ಮೋಸ ಮಾಡಿದೆ. ಇದರಿಂದ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದಿರುವ ಲಕ್ಷ್ಮಣ ಸವದಿ ಈಗಾಗಲೇ ಪಕ್ಷದ ಎಲ್ಲಾ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿರುವ ಲಕ್ಷ್ಮಣ ಸವದಿ ಅವರು ಇಂದು ಸಂಜೆ ಕಾಂಗ್ರೆಸ್‌ಗೆ ಸೇರಲಿದ್ದು, ಈಗಾಗಲೇ ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಮಾತನಾಡಿ ನಿರ್ಧಾರ ಕೈಗೊಂಡಿದ್ದಾರೆ. ಇಂದು ಸಂಜೆ 4.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರಲಿದ್ದು, ಆ ಮೂಲಕ ಲಕ್ಷ್ಮಣ ಸವದಿ ಅವರು ಬಿಜೆಪಿ ಜೊತೆಗಿನ ಎಲ್ಲಾ ಸಂಬಂಧಗಳಿಗೆ ಗುಡ್‌ಬೈ ಹೇಳಲಿದ್ದಾರೆ. ಈಗಾಗಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಲಕ್ಷ್ಮಣ ಸವದಿ, ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Bhagirathi Murulya: ಹಾಲಿ ಸಚಿವ ಅಂಗಾರ ಜಾಗಕ್ಕೆ ಹೊಸ ಮುಖ ಎಂಟ್ರಿ! ಯಾರಿದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ?
ನನಗೆ ಪುತ್ರ ವ್ಯಾಮೋಹ ಇಲ್ಲ
ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ ಸವದಿ ಅವರು, ನಾನು ಕಾಂಗ್ರೆಸ್‌ನಿಂದ ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ನನಗೆ ಪುತ್ರ ವ್ಯಾಮೋಹ ಇಲ್ಲ. ನಾನು ಅಥಣಿಯಿಂದ ಟಿಕೆಟ್ ಕೇಳಿದ್ದೇನೆ. ಅದಕ್ಕೆ ಒಪ್ಪಿಗೆಯಾಗಿದೆ ಎಂದರು. ನಿಮಗೆ ಬಿಜೆಪಿಯಿಂದ ಯಾರಾದರೂ ಕರೆ ಮಾಡಿದ್ದಾರೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾರೂ ಕರೆ ಮಾಡಿಲ್ಲ. ಯಡಿಯೂರಪ್ಪರಿಂದಲೂ ಯಾವುದೇ ಕರೆ ಬಂದಿಲ್ಲ. ಯಾರು ನನ್ನ ಬಳಿ ಮಾತನಾಡಿಲ್ಲ ಎಂದು ಹೇಳಿದರು.
ಬಿಜೆಪಿ ಕೊಟ್ಟ ಮಾತನ್ನು ತಪ್ಪಿದ್ರು.
ಇನ್ನು, ಬಿಜೆಪಿಯವರು ಕೊಟ್ಟ ಮಾತನ್ನು ತಪ್ಪಿದ್ರು ಎಂದ ಲಕ್ಷ್ಮಣ ಸವದಿ, ನನಗೆ ಎಂಎಲ್‌ಸಿ ಮಾಡು ಅಂದವರು ಯಾರು? ಡಿಸಿಎಂ ಮಾಡಿ ಅಂದವರು ಯಾರು? ಡಿಸಿಎಂ ತೆಗಿ ಅಂದವರು ಯಾರು? ಸಾರ್ವತ್ರಿಕ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡ್ತಿವಿ ಅಂತ ಮಾತು ಕೊಟ್ಟಿದ್ರು. ಆದರೆ ಈಗ ಕೊಟ್ಟ ಮಾತನ್ನು ತಪ್ಪಿದ್ರು. ಯಾರು ಕೂಡಾ ಈ ಬಗ್ಗೆ ಮಾತನಾಡಿಲ್ಲ. ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Nisarga Narayana Swamy: ಶತಕೋಟಿ ಒಡೆಯ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಕುರಿತ ಫುಲ್ ಡೀಟೇಲ್ಸ್ ಇಲ್ಲಿದೆ
ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕ್ಷೇತ್ರದಲ್ಲಿ ಬಾಕಿಯಿರೋ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಎಂದ ಲಕ್ಷ್ಮಣ ಸವದಿ, ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಲ್ಲೂ ನನ್ನನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನನ್ನ ಶಕ್ತಿ ಮೀರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಡಿಕೆ ಶಿವ ಕುಮಾರ್, ಲಕ್ಷ್ಮಣ ಸವದಿ ಅವರ ಜೊತೆ ಮಾತುಕತೆ ಸೌಹಾರ್ದಯುತವಾಗಿ ನಡೆದಿದೆ. ಅವರು ನಮ್ಮ ಕುಟುಂಬ ಸೇರಲು ಒಪ್ಪಿದ್ದಾರೆ. ಇಂದು ಸಂಜೆ 4.30ಕ್ಕೆ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗ್ತಿದ್ದಾರೆ. ನಮ್ಮ ಪಕ್ಷ, ಸಿದ್ಧಾಂತ ಒಪ್ಪಿ ನಮ್ಮ ಜೊತೆ ಬರ್ತಿದ್ದಾರೆ. ಅವರ ಜೊತೆಗೆ ಇನ್ನೂ ತುಂಬಾ ನಾಯಕರು ಬರುತ್ತಾರೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ