HOME » NEWS » State » FORMER KARNATAKA CHIEF MINISTER SIDDARAMAIAH COUNTERED HD DEVE GOWDA GNR

ಕರ್ನಾಟಕ ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಅಂತ್ಯ?; ಗೌಡರ ಕುಟುಂಬದ ಮೇಲೆ ಸಿದ್ದರಾಮಯ್ಯ ಭಾರೀ ಪ್ರಹಾರ

Siddaramaiah Press Meet: ಮೈಸೂರಿನಲ್ಲಿ ಜಿಟಿ ದೇವೇಗೌಡರೇ ಜೆಡಿಎಸ್ ವೋಟ್ ಕಾಂಗ್ರೆಸ್‌ಗೆ ಹಾಕಿಲ್ಲ ಎಂದು ಹೇಳಿದ್ರು. ಇವರು ಕ್ರಮ ಕೈಗೊಂಡ್ರಾ, ನಾವು ಕ್ರಮ ಕೈಗೊಂಡಿದ್ವಿ. ತುಮಕೂರು, ಮಂಡ್ಯದಲ್ಲಿ ಕ್ರಮ ಕೈಗೊಂಡ್ವಿ- ಸಿದ್ದರಾಮಯ್ಯ

Ganesh Nachikethu | news18
Updated:August 23, 2019, 3:51 PM IST
ಕರ್ನಾಟಕ ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಅಂತ್ಯ?; ಗೌಡರ ಕುಟುಂಬದ ಮೇಲೆ ಸಿದ್ದರಾಮಯ್ಯ ಭಾರೀ ಪ್ರಹಾರ
ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಅಂತ್ಯ
  • News18
  • Last Updated: August 23, 2019, 3:51 PM IST
  • Share this:
ಬೆಂಗಳೂರು(ಆಗಸ್ಟ್​​.23): "ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ಪತನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೆರೆಮರೆಯಲ್ಲಿ ಸಹಕರಿಸಿದ್ದರು," ಎಂದು ಮಾಜಿ ಪ್ರಧಾನಿ ದೇವೇಗೌಡರು ಗಂಭೀರ ಆರೋಪ ಎಸಗಿದ್ದಾರೆ. ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್​​ ವರಿಷ್ಠರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನಲ್ಲ; ದೇವೇಗೌಡರ ಮಕ್ಕಳೇ ಕಾರಣ ಎಂದು ತಿರುಗೇಟು ನೀಡಿದ್ದಾರೆ.

ಇಂದು ನಗರದ ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ "ಸಮ್ಮಿಶ್ರ ಸರ್ಕಾರದ ಪತನಕ್ಕೆ ಎಚ್​​.ಡಿ ಕುಮಾರಸ್ವಾಮಿ ಮತ್ತು ರೇವಣ್ಣನವರೇ ಕಾರಣ. ಇದನ್ನು ನಾನು ಹೇಳುತ್ತಿಲ್ಲ, ಎಲ್ಲಾ ಶಾಸಕರೂ ಹೇಳೋ ಮಾತು. ಕಾಂಗ್ರೆಸ್​​, ಜೆಡಿಎಸ್ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಾರೂ ಸರ್ಕಾರದ ವಿರುದ್ಧ ಅಸಮಾಧಾನ ಆಗುತ್ತಿರಲಿಲ್ಲ. ಸರ್ಕಾರ ಪತನವೂ ಆಗ್ತಿರಲಿಲ್ಲ. ಮಂತ್ರಿ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದದ್ದೇ ಸರ್ಕಾರದ ಪತನಕ್ಕೆ ಕಾರಣ. ಇವರ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸ್ತಿದ್ದಾರೆ" ಎಂದು ಕುಟುಕಿದರು.

ಇನ್ನು ದೇವೇಗೌಡರು ನನ್ನ ಮೇಲೆ ಕೆಲವು ಆರೋಪಗಳನ್ನ ಮಾಡಿದ್ದಾರೆ. ಜನರಿಗೆ ಬೇರೆ ಸಂದೇಶ ರವಾನೆ ಅನ್ನೋ ಕಾರಣಕ್ಕೆ ನಾನು ಸ್ಪಷ್ಟನೆ ಕೊಡ್ತಿದ್ದೇನೆ. ಇವತ್ತು ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಕಳೆದ 5 ವರ್ಷಗಳಿಂದ ಬಿಜೆಪಿ, ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡ್ತಿದೆ. ಇಂಥ ರಾಜಕೀಯ ಸನ್ನಿವೇಶದಲ್ಲಿ ಎಲ್ಲಾ ಜ್ಯಾತ್ಯತೀತ ಪಕ್ಷಗಳು ಒಗ್ಗಟ್ಟಾಗಬೇಕು. ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ ಮಾಡಲು ಎಲ್ಲರೂ ಒಗ್ಗೂಡಬೇಕು, ಇದು ಅನಿವಾರ್ಯ ಎಂದರು.

ಹೀಗೆ ಮಾತು ಮುಂದುವರೆಸಿದ ಅವರು, ಕೋಮುವಾದಿ ಪಕ್ಷವನ್ನು ಎದುರಿಸಬೇಕು ಅನ್ನೋ ನಂಬಿಕೆ ಇಟ್ಟವನು ನಾನು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ. ಇದನ್ನು ಪ್ರಜಾಪ್ರಭುತ್ವ, ಜಾತ್ಯತೀತದಲ್ಲಿ ನಂಬಿಕೆ ನಾವು ವಿರೋಧಿಸಬೇಕಿದೆ. ಇದರ ವಿರುದ್ಧ ಹೋರಾಟ ಮಾಡಬೇಕು. ಇಂತಹ ಸನ್ನಿವೇಶದಲ್ಲಿ ಶ್ರೀಮಾನ್ ದೇವೇಗೌಡರು ನನ್ನ ಮೇಲೆ ಗುರುತರ ಆರೋಪ ಮಾಡಿದ್ದಾರೆ.  ಈ ಎಲ್ಲಾ ಆರೋಪಗಳು ಆಧಾರರಹಿತ, ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Rafale Deal: ಸೆ.20ಕ್ಕೆ ಫ್ರಾನ್ಸ್​ನಿಂದ ಭಾರತಕ್ಕೆ ರಫೇಲ್​​​ ಯುದ್ದ ವಿಮಾನ ಹಸ್ತಾಂತರ

ಸಮ್ಮಿಶ್ರ ಸರ್ಕಾರ ಪತನಕ್ಕೆ ನಾನು ಕಾರಣ ಎಂದಿದ್ದಾರೆ. ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸಿಎಂ ಆಗಿದ್ದನ್ನು ನೋಡಲು ಆಗಲಿಲ್ಲ ಅಂದ್ರು. ಅವರಿಗೂ ನಮಗೂ ವೈರತ್ವ ಇದೆ ಅನ್ನೋದನ್ನ ಅವರೇ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನ ಕೇಳದೆ ಜೆಡಿಎಸ್‌ಗೆ ಬೆಂಬಲಿಸಿತು ಅಂದರು. ಆದರೆ, ಇದೆಲ್ಲವೂ ನಿರಾಧಾರ. 80 ಜನರಿದ್ದ ನಾವು 37 ಶಾಸಕರಿದ್ದ ಜೆಡಿಎಸ್‌ಗೆ ಬೆಂಬಲಿಸಿದ್ವಿ. ಹೈಕಮಾಂಡ್ ತೀರ್ಮಾನಕ್ಕೆ ಮರು ಮಾತಾಡದೆ ತಲೆಬಾಗಿದ್ದೇನೆ. 14 ತಿಂಗಳು ಸಂಪೂರ್ಣ ಸಹಕಾರ ನೀಡಿದ್ದೇನೆ, ನಾನು ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ನನ್ನನ್ನು ಹೈಕಮಾಂಡ್ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ರು. ಸಮಿತಿಯಲ್ಲಿ ನಾನು ಪರಮೇಶ್ವರ್, ವೇಣುಗೋಪಾಲ್ ಇದ್ವಿ. ಅವರ ಪಕ್ಷದಿಂದ ಎಚ್​​.ಡಿ ಕುಮಾರಸ್ವಾಮಿ, ಡ್ಯಾನಿಷ್ ಅಲಿ ಇದ್ದರು. ಐದಾರು ಬಾರಿ ಸಮನ್ವಯ ಸಮಿತಿ ಸಭೆ ಸೇರಿದ್ವಿ. ಸಭೆಯ ನಿರ್ಧಾರ ಕೇಳಿಸಿಕೊಳ್ತಿದ್ರು ಆದ್ರೆ ಜಾರಿಗೆ ತರಲಿಲ್ಲ. ಸರ್ಕಾರ ಉಳಿಯಲು ನಮ್ಮ ಕಡೆಯಿಂದ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಇವರ ಉದ್ದೇಶ ನನಗೆ ಗೊತ್ತಿರಲಿಲ್ಲ. ಯಾವ ಪಕ್ಷವನ್ನು ಖುಷಿ ಮಾಡಲು ಹೇಳಿದ್ದಾರೋ ಗೊತ್ತಿಲ್ಲ ಎಂದು ಗುಡುಗಿದರು.ನಾನು ವಿಪಕ್ಷ ನಾಯಕ ಆಗ್ಬೇಕು ಅಂತ ಹೀಗೆ ಮಾಡಿದ್ದೇನೆ ಅಂದಿದ್ದಾರೆ. ಇಲ್ಲಿಯವರೆಗೂ ಯಾರು ವಿರೋಧ ಪಕ್ಷದ ನಾಯಕನಾಗಲು ಸರ್ಕಾರ ಬೀಳಿಸಿದ್ದು ನಾನು ನೋಡಿಲ್ಲ. ದೇವೇಗೌಡರು ನೋಡಿದ್ದಾರೋ ಏನೋ ನನಗೆ ಗೊತ್ತಿಲ್ಲ. ಈ ಎಲ್ಲಾ ಹೇಳಿಕೆಗಳೂ ಕಪೋಲ ಕಲ್ಪಿತ, ರಾಜಕೀಯ ದುರುದ್ದೇಶ. ನಾನು ಎಂದೂ ಅಧಿಕಾರದ ಹಿಂದೆ ಬಿದ್ದವನಲ್ಲ. ಮಂತ್ರಿಯಿಂದ ಒಮ್ಮೆ, ಡಿಸಿಎಂ ಸ್ಥಾನದಿಂದ ಒಮ್ಮೆ ತೆಗೆದರು. ಕೊನೆಗೆ ಪಕ್ಷದಿಂದಲೇ ನನ್ನನ್ನು ಹೊರ ಹಾಕಿದ್ರು. ನಮ್ಮ ಪಕ್ಷವೂ ಸರ್ಕಾರದಲ್ಲಿ ಭಾಗಿ ಆಗಿತ್ತು. ಸಮ್ಮಿಶ್ರ ಸರ್ಕಾರ ಬೀಳಿಸುವಂತ ನೀಚ ರಾಜಕಾರಣ ಮಾಡಲ್ಲ. ಅದೇನಿದ್ರು ದೇವೇಗೌಡರು, ಅವ್ರ ಮಕ್ಕಳ ಹುಟ್ಟುಗುಣ ಎಂದು ಆರೋಪಿಸಿದರು.

ಧರಂಸಿಂಗ್ ಅವರಿಗೆ ಬೆಂಬಲ ಕೊಟ್ಟಿದ್ರು, ವಾಪಸ್ ಪಡೆದ್ರು. ಬೊಮ್ಮಾಯಿ ಸರ್ಕಾರ ಬೀಳಿಸಿದ್ರು. ಬಿಜೆಪಿ ಅಧಿಕಾರಕ್ಕೆ ಬರಲು ದೇವೇಗೌಡ, ಕುಮಾರಸ್ವಾಮಿ ಕಾರಣಕರ್ತರು. ನಮ್ಮ ಜೊತೆ ಇದ್ದು ರಾತ್ರೋರಾತ್ರಿ ಬಿಜೆಪಿ ಕ್ಯಾಂಪ್ ಸೇರಿದ್ರು. ದೇವೇಗೌಡ್ರದ್ದು ದೊಡ್ಡ ನಾಟಕ. ದೇವೇಗೌಡರ ಅನುಮತಿ ಇಲ್ಲದೆ, ಏನೂ ಆಗೋದಿಲ್ಲ. ಅವರ ಅನುಮತಿ ಪಡೆದೇ ಅಂದು ಹೆಚ್‌ಡಿಕೆ ಬಿಎಸ್‌ವೈಗೆ ಬೆಂಬಲಿಸಿದ್ದು. ಇವರಿಂದಲೇ ಬಿಜೆಪಿ ಮೊದಲಿಗೆ ಅಧಿಕಾರಕ್ಕೆ ಬಂದಿದ್ದು. ನಂತರ ಬಿಜೆಪಿ ಬೆಂಬಲನೂ ವಾಪಸ್ ಪಡೆದ್ರು. ಈ ಸಂದರ್ಭದಲ್ಲಿ ವಚನಭ್ರಷ್ಟರು ಯಾರು? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇವ್ರ ಎಡವಟ್ಟಿಂದ ಎಂದು ಸಿಡಿಮಿಡಿಗೊಂಡರು.

ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ: ತನಿಖೆ ತೀವ್ರಗೊಳಿಸಿದ ಸಿಬಿಐ; ಮನ್ಸೂರ್​​ ಸ್ನೇಹಿತ ಅಬ್ಬಾಸ್​​ಗೆ ನೋಟಿಸ್​​​

ಮುಖ್ಯಮಂತ್ರಿ ಆಗಲು ಸರ್ಕಾರ ಬೀಳಿಸ್ತಾರೆ. ವಿಪಕ್ಷ ನಾಯಕನಾಗಲು ಸರ್ಕಾರ ಯಾರು ಬೀಳಿಸೋದಿಲ್ಲ. ಈ ಹೇಳಿಕೆ ಎಷ್ಟು ಅಸಂಬದ್ಧ. ನನ್ನ ಮೇಲೆ ಅವರಿಗೆ ಎಷ್ಟು ಆಕ್ರೋಶ ಇದೆ ಅಂತ ಗೊತ್ತಾಗುತ್ತೆ. ಜಾಣ ಕುರುಡು ಅನುಸರಿಸುತ್ತಿದ್ದಾರೆ. ನಾನು ಜೆಡಿಎಸ್‌ನಲ್ಲೇ ಇದ್ದವನು, ಇವ್ರ ಹುನ್ನಾರ ನನಗೆ ಗೊತ್ತಿಲ್ವಾ. 2004ರಲ್ಲಿ ಮುಖ್ಯಮಂತ್ರಿ ಮಾಡಿಲ್ಲ ಅಂತ ಸಿದ್ದರಾಮಯ್ಯ ಸಿಟ್ಟಿದೆ ಅಂದ್ರು. ನಾನೇನಾದ್ರು ಇದನ್ನು ಪ್ರಚಾರ ಮಾಡಿದ್ನಾ? ಕುಮಾರಸ್ವಾಮಿಯೇ ಇದನ್ನು ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಶರದ್ ಪವಾರ್ ಮನೆಯಲ್ಲಿ ಸಭೆ ಆಯ್ತು. 2004ರಲ್ಲಿ ಚುನಾವಣೆ ಬಳಿಕ ನಡೆದ ಈ ಮೀಟಿಂಗ್ ನಡೆದದ್ದು.  ಪವಾರ್ ನೀವು ಮುಖ್ಯಮಂತ್ರಿ ಸ್ಥಾನ ಕೇಳಿ ಅಂತಂದ್ರು. ಆದರೆ,  ಸಿಎಂ ಬೇಡ, ಡಿಸಿಎಂ ಸ್ಥಾನ ಸಾಕು ಅಂದ್ರು. ದೇವೇಗೌಡರು ನನ್ನ ಎದುರೇ ಸಿಎಂ ಸ್ಥಾನ ಬೇಡ ಅಂದ್ರು. ಎಸ್ ಎಂ ಕೃಷ್ಣ ಮೇಲೆ ಚಾರ್ಜ್‌ಶೀಟ್ ಹಾಕಿಲ್ವಾ? ಸಿಎಂ ನಮ್ಮ ಪಕ್ಷದವರು ಆದ್ರೆ ಅದಕ್ಕೆ ಉತ್ತರ ನೀಡಬೇಕು ಎಂದು ತಪ್ಪಿಸಿಕೊಂಡರು ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.

ಲೋಕಸಭೆಯಲ್ಲಿ ಮೈತ್ರಿ ಬೇಡ ಅಂದಿದ್ದು ನಿಜ. ಹಳೇ ಮೈಸೂರು ಭಾಗದಲ್ಲಿ ತುಂಬಾ ಕಿತ್ತಾಟ ಇತ್ತು. ಹೈಕಮಾಂಡ್ ಒಪ್ಪಿಕೊಂಡ ಬಳಿಕ ಮೈತ್ರಿ ಆಯ್ತು. ಹಳೆಯದೆಲ್ಲಾ ಮರೆತು ಪ್ರಚಾರ ಮಾಡೋಣ ಎಂದ್ವಿ. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ಜಂಟಿ ಪ್ರಚಾರ ಮಾಡಿದ್ವಿ. ಆದ್ರೆ, ನಾನು, ನಿಖಿಲ್ ಸೋಲಿಗೆ ಸಿದ್ದರಾಮಯ್ಯ ಕಾರಣ ಅಂದ್ರು. ಹಾಗಾದರೇ ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್​​ಗೆ ಸೋಲಿಗೆ ಯಾರು ಕಾರಣ? ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಜಿಟಿ ದೇವೇಗೌಡರೇ ಜೆಡಿಎಸ್ ವೋಟ್ ಕಾಂಗ್ರೆಸ್‌ಗೆ ಹಾಕಿಲ್ಲ ಎಂದು ಹೇಳಿದ್ರು. ಇವರು ಕ್ರಮ ಕೈಗೊಂಡ್ರಾ, ನಾವು ಕ್ರಮ ಕೈಗೊಂಡಿದ್ವಿ. ತುಮಕೂರು, ಮಂಡ್ಯದಲ್ಲಿ ಕ್ರಮ ಕೈಗೊಂಡ್ವಿ. ತಾತ, ಮೊಮ್ಮಕ್ಕಳು ಎಲ್ರೂ ಚುನಾವಣೆಗೆ ನಿಂತ್ರು. ನಾನು ಮನುಷ್ಯತ್ವದ ಮೇಲೆ ನಂಬಿಕೆ ಇಟ್ಟವನು. ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟವನು. ನನ್ನ 5 ವರ್ಷದ ಅವಧಿಯಲ್ಲಿ ಎಲ್ಲಾ ಜಾತಿಯವರಿಗೆ ಆದ್ಯತೆ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಅನ್ನಭಾಗ್ಯ ಮೂಲಕ ಬಡವರು ಹೊಟ್ಟೆ ತುಂಬಾ ಊಟ ಮಾಡ್ತಿದ್ದಾರೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ಸರ್ಟಿಫಿಕೇಟ್ ಕೊಡೋದು ಜನರು, ಗೌಡರಲ್ಲ. ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ ಅಲ್ಲ ಅದಕ್ಕೆ 80ಕ್ಕೆ ಕುಸೀತು ಅಂದ್ರು. ಹಾಗಾದ್ರೆ ಜೆಡಿಎಸ್ 59ರಿಂದ 30ಕ್ಕೆ ಕುಸಿದಿದ್ದು ಯಾಕೆ? ಕುಮಾರಸ್ವಾಮಿ ಒಳ್ಳೆ ಮುಖ್ಯಮಂತ್ರಿ ಆಗಿರ್ಲಿಲ್ವಾ? ಎಂದು ಕೆಂಡಕಾರಿದರು.

ದೇವೇಗೌಡರು ಯಾರನ್ನೂ ಬೆಳೆಸಲ್ಲ, ಅವ್ರ ಮಕ್ಕಳು, ಮೊಮ್ಮಕ್ಕಳಷ್ಟೇ. ಅವರ ಜಾತಿಯವ್ರನ್ನೇ ಬೆಳೆಸಲ್ಲ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ಇದರಿಂದ ರಾಜಕೀಯ ಲಾಭ, ಅನುಕಂಪ ಬರುತ್ತೆ ಅಂತ ಅನ್ಕೊಂಡಿದ್ರೆ ತಪ್ಪು. ನಮ್ಮ ಜಾತಿಯವನ್ನು ವಿರೋಧ ಮಾಡಿದ್ರು ಅನ್ನೋದು ಸರಿಯಲ್ಲ. ದೇವೇಗೌಡರನ್ನು ವಿರೋಧಿಸಿದ್ರೆ ಜಾತಿ ವಿರೋಧ ಮಾಡಿದಂಗ. ನನ್ನ ಮೇಲಿನ ಆರೋಪಗಳು ಕೇವಲ ರಾಜಕೀಯ ಪ್ರೇರಿತ. ನನ್ನ ರಾಜಕೀಯ ನಡವಳಿಕೆಗಳನ್ನ ಜನ ನೋಡಿದ್ದಾರೆ. ಜನರಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಅನ್ಕೊಂಡಿದ್ದೇನೆ ಎಂದು ದೇವೇಗೌಡರ ಆರೋಪಕ್ಕೆ ತೆರೆ ಎಳೆದರು.

ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನೇರವಾಗಿ ಆರೋಪಿಸಿದ್ದರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಮೊದಲಿಂದಲೂ ತಿಕ್ಕಾಟ ಇತ್ತು. ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದ್ದರು. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ ಎಂದು ಆರೋಪ ಮಾಡಿದ್ರು. ಇದಕ್ಕೀಗ ಸಿದ್ದರಾಮಯ್ಯನವರೇ ಖುದ್ದು ಉತ್ತರ ನೀಡಿ ಎಲ್ಲಾ ಆರೋಪಗಳಿಗೂ ಸುಳ್ಳು ಎಂದಿದ್ಧಾರೆ.
-----------
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
------------
First published: August 23, 2019, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories