Siddaramaiah| ಹೌದು..ನಾನು ಜಾತಿವಾದಿಯೇ ಏನೀಗ?; ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ!

Twitter War: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾತಿವಾದಿಯೇ? ಜಾತ್ಯತೀತವಾದಿಯೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಬೆಂಗಳೂರು (ಅಕ್ಟೋಬರ್​ 25); ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ವಿರುದ್ಧ ಬಿಜೆಪಿ ನಾಯಕರು ಪ್ರತಿದಿನ ತರಹೇವಾರಿ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ(BJP Leaders) ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ (Srinivas Prasad) ಸಿದ್ದರಾಮಯ್ಯ ಬಾದಾಮಿಗೆ (Badami) ಪಲಾಯನ ಮಾಡಿದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದರೆ, ಬಿಜೆಪಿ ರಾಜ್ಯ ಘಟಕದಿಂದ  (State BJP Party) ಟ್ವೀಟ್​ ಮೂಲಕ ಸಿದ್ದರಾಮಯ್ಯ ಓರ್ವ ಜಾತೀವಾದಿ ಎಂದು ಹೀಯಾಳಿಸಲಾಗಿತ್ತು. "ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ" ಎಂದು ಆರೋಪಿಸಲಾಗಿತ್ತು. ಆದರೆ, ಬಿಜೆಪಿ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, "ಹೌದು..ನಾನು ಜಾತಿವಾದಿಯೇ ಏನೀಗ?" ಎಂದು ತಿರುಗೇಟು ನೀಡಿದ್ದಾರೆ.  ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, "ಶೋಷಿತ ಜಾತಿಗಳು ತಮಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಂಘಟಿತರಾಗಿವುದು‌ ತಪ್ಪಲ್ಲ, ಅದು ಜಾತಿವಾದವೂ ಅಲ್ಲ. ಅಂತಹ ಜಾತಿ ಸಮಾವೇಶಗಳಲ್ಲಿ ಭಾಗವಹಿಸುವುದು ಜಾತಿವಾದವಾದರೆ..ಹೌದು, ನಾನು ಜಾತಿವಾದಿ.. ಏನೀಗ" ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.  ಇದೇ ಸಂದರ್ಭದಲ್ಲಿ ಜಾತಿವಾರು ಸಮಾವೇಶ ಮಾಡಿದ್ದ ಮತ್ತು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳ ಮೊರೆ ಹೋಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರ ವಿರುದ್ಧ "ನೀವೇ ಜಾತಿವಾದಿಗಳು" ಎಂದು ಆರೋಪ ಮಾಡಿರುವ ಸಿದ್ದರಾಮಯ್ಯ, "ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ,
  ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ‌ ಪಾಲ್ಗೊಂಡ ಜೋಷಿ, ಕಾಗೇರಿ, ಸುರೇಶ್ ಕುಮಾರ್,
  ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.‌ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ?.  ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ‌ ಜಾತ್ಯತೀತರಾ? ಜಾತಿ ಸಮಾವೇಶದಲ್ಲಿ‌ ಭಾಗವಹಿಸುವುದಿಲ್ಲ ಎಂದು ಕರ್ನಾಟಕದ ಬಿಜೆಪಿ ನಾಯಕರು ಪ್ರಮಾಣ ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ" ಎಂದು ಕಿಡಿಕಾರಿದ್ದಾರೆ.  ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, "ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾತಿವಾದಿಯೇ? ಜಾತ್ಯತೀತವಾದಿಯೇ?" ಎಂದು ಪ್ರಶ್ನೆ ಮಾಡಿದ್ದಾರೆ.  "ಬಾಯಲ್ಲಿ ನಾವೆಲ್ಲ ಒಂದು, ನಾವೆಲ್ಲ ಹಿಂದು ಎನ್ನುವ ಮಂತ್ರ.‌ ಅಂತರಂಗದಲ್ಲಿ‌ ಜಾತಿಗಳನ್ನು ಒಡೆದು ಆಳುವ ಕುತಂತ್ರ. ಮಂಡಲ ವಿರುದ್ದ ಕಮಂಡಲ‌ ಹಿಡಿದ ಬಿಜೆಪಿ ನಾಯಕರ ಜಾತಿ‌ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ ಅದೊಂದು‌ ಕೊನೆಯಿಲ್ಲದ ಧಾರವಾಹಿ ಆದೀತು" ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.  ಕುರಿಗಾಹಿಗಳ ಮತ ಸೆಳೆಯಲು ಬಿಜೆಪಿ ಬಳಸಿದ್ದ ಕುತಂತ್ರವನ್ನು ಬಯಲು ಮಾಡಿರುವ ಸಿದ್ದರಾಮಯ್ಯ, " ಕುರಿಗಾಯಿಗಳ ಓಟಿನ ಬೇಟೆಗಾಗಿ‌ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ. ನಿಮಗೆ ಕುರಿಗಾಯಿಗಳ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ 'ಅನುಗ್ರಹ' ಯೋಜನೆಗೆ ಹಣ ಒದಗಿಸಿ ಪಶುಗಳನ್ನು‌‌ ಕಳೆದುಕೊಂಡ ರೈತರಿಗೆ
  ಪರಿಹಾರ ನೀಡಿ.  ತಾಂಡಾಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ "ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆ" ಯನ್ನು ಜಾರಿಗೊಳಿಸಿ, ಲಕ್ಷಾಂತರ ಬಡ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ.
  ಇದು ಜಾತಿವಾದವೇ  ನಮ್ಮ ಸರ್ಕಾರ ಬಂಜಾರ ಸಮಾಜದ ಅಭಿವೃದ್ಧಿಗೆ ವಾರ್ಷಿಕ 200 ಕೋಟಿ ರೂಪಾಯಿಗಳನ್ನು ನೀಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಈ ಅನುದಾನವನ್ನು ಬರೀ 10 ಕೋಟಿಗೆ ಇಳಿಸಿದೆ. ಸರ್ಕಾರವೇ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿದವನು ನಾನೆ. ಇದು ಜಾತಿವಾದವೇ?  ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ.
  ಇದು ಜಾತಿವಾದವೇ" ಎಂದು ಬಿಜೆಪಿ ನಾಯಕರ ಎದುರು ಸಿದ್ದರಾಮಯ್ಯ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.  ಅಲ್ಲದೆ, "ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಬಂಜಾರ ಸಮುದಾಯದ ಕುಲಕಸುಬಾದ ಕಸೂತಿ ವೃತ್ತಿಯನ್ನು ಅಭಿವೃದ್ಧಿ ಪಡಿಸಲು ರೂ.100 ಕೋಟಿ ಅನುದಾನ ನೀಡುತ್ತೇವೆ ಮತ್ತು ಕಸೂತಿ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುತ್ತೇವೆ. ಬಿಜೆಪಿ ಪಕ್ಷಕ್ಕೆ ತಾಕತ್ತಿದ್ದರೆ ವಿರೋಧಿಸಲಿ" ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
  Published by:MAshok Kumar
  First published: