ಕೋಲಾರ: ಅನರ್ಹಗೊಂಡ ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul Gandhi) ಏಪ್ರಿಲ್ 9ಕ್ಕೆ ಕೋಲಾರಕ್ಕೆ ಆಗಮಿಸುತ್ತಿದ್ದಾರೆ. ಏಪ್ರಿಲ್ 5ರಂದೇ ರಾಹುಲ್ ಗಾಂಧಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಆ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ ಅಂತ ಬೆಂಗಳೂರಿನಲ್ಲಿ (Bengaluru) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಕೋಲಾರದಲ್ಲಿ (Kolar) ಬೃಹತ್ ರ್ಯಾಲಿ ಏರ್ಪಡಿಸಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಸೇರ್ತಾರೆ ಅಂತ ಹೇಳಿದ್ದಾರೆ. ಇದರ ನಡುವೆ ಮಾಜಿ ಸಿಎಂ ಕ್ಷೇತ್ರ ಆಯ್ಕೆಯಲ್ಲಿ ಗೊಂದಲಕ್ಕೆ ಸಿಲುಕಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಕೋಲಾರ, ವರುಣಾ ಎರಡೂ ಕಡೆ ನಿಲ್ಲುತ್ತೇನೆ
ಕೋಲಾರದಲ್ಲಿ ಕಾಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೋಲಾರದಿಂದ ಸ್ಪರ್ಧೆಗೆ ಮಾನಸಿಕವಾಗಿ ಸಿದ್ದನಾಗಿದ್ದೇನೆ ಎಂದು ಹೇಳಿದರು. ಆದರೆ ಆ ಬಳಿಕ ಮಾಧ್ಯಮಗಳ ಎದುರು ಕೋಲಾರ, ವರುಣಾ ಎರಡೂ ಕಡೆ ನಿಲ್ಲುವುದಾಗಿ ಹೇಳಿದ್ದಾರೆ. ಅಲ್ಲದೆ 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿದರೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.
ಮನೆ ದೇವರು ಹೇಳಿದ್ದಕ್ಕೆ ಎರಡು ಕಡೆ ಚುನಾವಣೆಗೆ ನಿಲ್ಲುತ್ತಿಲ್ಲ
ಏಪ್ರಿಲ್ 4ರಂದು ಹೈಕಮಾಂಡ್ ಅವರು ಪಟ್ಟಿ ಬಿಡುಗಡೆ ಮಾಡುತ್ತಾರೆ. ಎರಡೂ ಕಡೆ ನಿಲ್ಲುತ್ತೇನೆ. ಕೋಲಾರ ಕ್ಷೇತ್ರದ ಜನರ ಪ್ರೀತಿಗೆ ಧನ್ಯವಾದ. ನಾನು ರಾಜಕೀಯ ಆರಂಭಿಸಿದ್ದು ವರುಣಾದಲ್ಲಿ, ನನ್ನ ಹಳ್ಳಿ ಸೇರುವುದು ವರುಣಾ ಕ್ಷೇತ್ರಕ್ಕೆ, ಮೊದಲು ತಾ.ಪಂ ಸದಸ್ಯನಾಗಿದ್ದು ಅಲ್ಲಿಂದಲೇ, ಕೊನೆ ಚುನಾವಣೆ ಆದ್ದರಿಂದ ವರುಣಾದಲ್ಲಿ ಸ್ಪರ್ಧೆ ಮಾಡುತ್ತೇನೆ.
ಮನೆ ದೇವರು ಹೇಳಿದ್ದಕ್ಕೆ ಎರಡು ಕಡೆ ಚುನಾವಣೆಗೆ ನಿಲ್ಲುತ್ತಿಲ್ಲ. ಕೋಲಾರ, ವರುಣಾ ಸೇರಿ 25 ಕಡೆ ಚುನಾವಣೆಗೆ ನಿಲ್ಲಲು ನನಗೆ ಆಹ್ವಾನವಿದೆ. ವರುಣಾದಲ್ಲಿ ವಿಜಯೇಂದ್ರ ಅಲ್ಲ, ಯಾರೇ ಬಂದರೂ ಚುನಾವಣೆ ಎದುರಿಸಲು ಸಿದ್ಧ ಎಂದರು.
ದೇಶ ಉಳಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ
ಸತ್ಯಮೇವ ಜಯತೆ ಕಾರ್ಯಕ್ರಮ ಪ್ರಜಾಪ್ರಭುತ್ವ ಉಳಿವಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗೆ, ಸಂವಿಧಾನ ಉಳಿವಿಗೆ ನಡೆಯುತ್ತಿರುವ ಹೋರಾಟ. ಇದು ರಾಜಕೀಯ ಇಲ್ಲ, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ.
ದೇಶ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ, ಬಿಜೆಪಿಯವರು ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವಂತವರಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕು, ಅಭಿಪ್ರಾಯ ವ್ಯಕ್ತ ಮಾಡಲಿಕ್ಕೆ ಸ್ವಾತಂತ್ರ್ಯ ಇದೆ. ರಾಹುಲ್ ಗಾಂಧಿಯವರು ಸ್ವಾರ್ಥಕ್ಕಾಗಿ ಹೋರಾಟ ಮಾಡಿಲ್ಲ. ದೇಶದ ಐಕ್ಯತೆಗಾಗಿ, ಬಡವರಿಗಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ