ಫೆ.12ಕ್ಕೆ ಬಾದಾಮಿಯಲ್ಲಿ ಮತ್ತೆ ಸಿದ್ದರಾಮಯ್ಯ- ಶ್ರೀರಾಮುಲು ಮುಖಾಮುಖಿ; ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

ಬಾದಾಮಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಚಾಲನೆಗೆ ಸಚಿವತ್ರಯರನ್ನು ಸಿದ್ದರಾಮಯ್ಯ ಸ್ವಕ್ಷೇತ್ರಕ್ಕೆ ಆಹ್ವಾನಿಸಿದ್ದು, ಅದರಲ್ಲೂ ಬಾದಾಮಿ ಕ್ಷೇತ್ರದಲ್ಲಿ ಎದುರಾಳಿಯಾಗಿದ್ದ ಸಚಿವ ಶ್ರೀರಾಮುಲು ಅವರನ್ನು ಕರೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ 
 ಸಿದ್ದರಾಮಯ್ಯ

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬಾಗಲಕೋಟೆ (ಫೆ.10): ಫೆ. 12ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಬಿ. ಶ್ರೀರಾಮುಲು ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಮತ್ತೆ ಮುಖಾಮುಖಿ ಆಗಲಿದ್ದಾರೆ. ಬಾದಾಮಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಚಾಲನೆಗೆ ಸಚಿವತ್ರಯರನ್ನು ಸಿದ್ದರಾಮಯ್ಯ ಸ್ವಕ್ಷೇತ್ರಕ್ಕೆ ಆಹ್ವಾನಿಸಿದ್ದು, ಅದರಲ್ಲೂ ಬಾದಾಮಿ ಕ್ಷೇತ್ರದಲ್ಲಿ ಎದುರಾಳಿಯಾಗಿದ್ದ ಸಚಿವ ಶ್ರೀರಾಮುಲು ಅವರನ್ನು ಕರೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಾಳೆಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಸಂಜೆ ಬೆಂಗಳೂರಿನಿಂದ ವಿಮಾನ ಮೂಲಕ ಹುಬ್ಬಳ್ಳಿ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಿಗ್ಗೆ ರಸ್ತೆ ಮಾರ್ಗವಾಗಿ ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ,  ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ರಾಜಕೀಯ ಪುನರ್ಜನ್ಮ ನೀಡಿರುವ ಕ್ಷೇತ್ರ ಬಾದಾಮಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೇಳೆ ಬಿಜೆಪಿಯಿಂದ ಬಿ. ಶ್ರೀರಾಮುಲು ಕಣಕ್ಕಿಳಿದಾಗ ಬಾದಾಮಿ ಕ್ಷೇತ್ರ ದೇಶದಲ್ಲೇ ಗಮನಸೆಳೆದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿತ್ತು. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸೋಲು ಅನುಭವಿಸಿದರೆ, ಬಾದಾಮಿ ಜನತೆ ಕೈಹಿಡಿದಿದ್ದರು. ಇನ್ನೂ ವಿಶೇಷವೆಂದರೆ ಸಿದ್ದರಾಮಯ್ಯ ,ಬಿ. ಶ್ರೀರಾಮುಲು ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಮತದಾರರು ಇಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಆಶೀರ್ವಾದ ಮಾಡಿದ್ದರು.  ಬಾದಾಮಿ ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಸೋತ ಬಳಿಕ ಬಾದಾಮಿ ಕ್ಷೇತ್ರಕ್ಕೆ ಆಗಮಿಸಿದ್ದು ಕಡಿಮೆ. ಇದೀಗ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಸಚಿವ  ಬಿ.  ಶ್ರೀರಾಮುಲು ಅವರನ್ನು ಆಹ್ವಾನಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಮೈತ್ರಿ ಸರ್ಕಾರವಿದ್ದಾಗಲೂ ಸಚಿವರನ್ನು ಸ್ವಕ್ಷೇತ್ರ ಬಾದಾಮಿಗೆ ಆಹ್ವಾನಿಸಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದರು. ಇದೀಗ ಬಿಜೆಪಿ ಸರ್ಕಾರದಲ್ಲೂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿ, ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕ. ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸ್ನೇಹ, ಜೊತೆಗೆ ಹಲವು ಸಚಿವರೊಂದಿಗೆ ವೈಯಕ್ತಿಕ ಸ್ನೇಹ ಸಿದ್ದರಾಮಯ್ಯ ಹೊಂದಿದ್ದಾರೆ. ಬಾದಾಮಿ ಕ್ಷೇತ್ರಕ್ಕೆ ಬಂದಾಗ ಈ ಬಗ್ಗೆ ಉಲ್ಲೇಖಿಸಿದ್ದುಂಟು. ಫೆ. 12ರಂದು ಬಾದಾಮಿ ಕ್ಷೇತ್ರಕ್ಕೆ ಡಿಸಿಎಂ, ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ  ಆಗಮಿಸಲಿದ್ದು, ಸಿದ್ದರಾಮಯ್ಯ ಸಾರಥ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜೀವಜಲ ಮಿಷನ್ ಯೋಜನೆಯಡಿ ಬಾದಾಮಿ ಕ್ಷೇತ್ರದ  16 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರಿಂದ ಇಂದು ಮತ್ತೆ ಪ್ರತಿಭಟನೆ; ಬಸ್​ ಸಂಚಾರದಲ್ಲಿ ವ್ಯತ್ಯಯವಿಲ್ಲ

ಐತಿಹಾಸಿಕ ಪಟ್ಟದಕಲ್ಲು ಉದ್ದೇಶಿತ ಸಮಗ್ರ  ಮೂಲಭೂತ ಸೌಕರ್ಯ ಕಾರ್ಯಕ್ಕೆ ಅಡಿಗಲ್ಲು.ಹೆಸ್ಕಾಂ ನೂತನ ಉಪವಿಭಾಗ ಕಚೇರಿ ಉದ್ಘಾಟನೆ.ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ, ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ಉದ್ಘಾಟನೆ ಸೇರಿದಂತೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಿದ್ದು ವೇಳೆ ಸಿದ್ದರಾಮಯ್ಯಗೆ  ಸಚಿವತ್ರಯರು ಸಾಥ್ ನೀಡಲಿದ್ದಾರೆ.

ಸಭೆ ವಿಚಾರವಾಗಿ ರಾಜಕಾರಣ?:

ಬಾಗಲಕೋಟೆ ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ ವಿಚಾರದಲ್ಲಿ ಜನವರಿ 22ರಂದು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಡಿಸಿಎಂ ಗೋವಿಂದ ಕಾರಜೋಳ ಮಧ್ಯೆ ಜಟಾಪಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ನಿರ್ಮಾಣಕ್ಕೆ ಅನುದಾನ ಕೊಟ್ಟಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ ನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತರಾತುರಿಯಲ್ಲಿ ನೂತನ ಸಭಾಂಗಣ ಉದ್ಘಾಟಿಸಿದ್ದರು. ಇದು ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿತ್ತು.

ಸಿದ್ದರಾಮಯ್ಯನವರನ್ನು ಕರೆಯಿಸಿ ನೂತನ ಸಭಾಂಗಣ ಉದ್ಘಾಟಿಸುವ ಕಾಂಗ್ರೆಸ್ಸಿಗರ ಯೋಚನೆಗೆ ತಣ್ಣೀರು ಎರೆಚಿದ್ದಕ್ಕೆ ಕೆಂಡಾಮಂಡಲರಾಗಿ ಉದ್ಘಾಟನೆ ವೇಳೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಬಹಿರಂಗವಾಗಿಯೇ ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಫೆಬ್ರುವರಿ 11ರ ನಾಳೆ  ಸಿದ್ದರಾಮಯ್ಯ ಕರೆಯಿಸಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ  ಮಾಡಲು ಮುಂದಾಗಿದ್ದರು. ಅದಕ್ಕೂ ಡಿಸಿಎಂ ಗೋವಿಂದ ಕಾರಜೋಳ ಅಂದೇ  ಸಭೆ ನಿಗದಿ ಮಾಡಿ, ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಕ್ಯಾನ್ಸಲ್ ಆಗುವಂತೆ ಮಾಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಾಗಲಕೋಟೆಗೆ ಆಗಮಿಸಿ, ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾಗಿಯಾಗುವುದು ರದ್ದಾಗಿದೆ. ಪ್ರವಾಸ ಪಟ್ಟಿಯೂ ಬದಲಾವಣೆಗೊಂಡಿದೆ. ಫೆಬ್ರವರಿ 12ರಂದು ಎರಡು ದಿನದ ಪ್ರವಾಸ ಮುಗಿಸಿಕೊಂಡು ಸಿದ್ದರಾಮಯ್ಯ ಬಾದಾಮಿಯಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ವಿಮಾನ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
Published by:Sushma Chakre
First published: