ಬೆಂಗಳೂರು: ಮೇ 1 ರಿಂದ ಲಸಿಕೆ ಉಚಿತ ವಿತರಣೆ ಅಂದ್ರು. 18 ರಿಂದ 45 ವರ್ಷದವರಿಗೆ ಕೊಡ್ತೇವೆ ಅಂದ್ರು. ಆದರೆ ಈಗ ಏನು ಮಾಡ್ತಿದ್ದಾರೆ. ಹೇಳಿಕೆ ಕೊಡುವ ಮುನ್ನ ಜವಾಬ್ದಾರಿಯಿಂದ ಕೊಡಬೇಕು. 1 ಕೋಟಿ ವ್ಯಾಕ್ಸಿನ್ನ್ನು ಸರ್ಕಾರ ಖರೀದಿ ಮಾಡಿದೆ. ಆದರೆ ರಾಜ್ಯದಲ್ಲಿ ಆರೂವರೆ ಕೋಟಿ ಜನರಿದ್ದಾರೆ. ಈಗ ಒಂದು ಕೋಟಿ ಕೊಡ್ತೇವೆ ಅಂತಾರೆ. ಆದರೆ ಇನ್ನೂ ಲಸಿಕೆಯೇ ಬಂದಿಲ್ಲ. ನನಗೆ ತಿಳಿದಂತೆ ಮಾಸಾಂತ್ಯಕ್ಕೆ ಲಸಿಕೆ ಸಿಗಬಹುದು. ಲಸಿಕೆ ಕೊಡುವ ಮುನ್ನ ಪ್ರಚಾರ ಗಿಟ್ಟಿಸಿಕೊಳ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಸಿಎಂ ಲಸಿಕೆ ಇಲ್ಲದೇ ಇಂದು ಅಭಿಯಾನ ಆರಂಭಿಸಿದ್ದಾರೆ. ಸುಮ್ನೆ ಫೋಟೋಗೋಸ್ಕರ ಮಾಡಿದ್ದಾರೆ. ಮಾಧ್ಯಮದವರು ತೋರಿಸಿದ್ದಾರೆ. ಲಸಿಕೆಯೆ ಇಲ್ಲ.. ಮೇ ಅಂತ್ಯದವರೆಗೂ ಲಸಿಕೆ ಇಲ್ಲ. ನಾನು ಹೇಳ್ತಾ ಇರುವುದು ಸತ್ಯ. ನಾನು ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ನಿನ್ನೆ ಸುಧಾಕರ್ ಲಸಿಕೆ ಇಲ್ಲ ಅಂತಾ ಹೇಳಿದ್ದಾನೆ. ಪ್ರಧಾನಿ ಹೆಸರು ಎಳೆದು ತರಬೇಡಿ ಅಂತಾ ಸಿಎಂ ಹೇಳ್ತಾರೆ. ಪಿಎಂ ಏನಾಗಿದ್ದಾರೆ? ಅವರನ್ನ ಕೇಳದೆ ಇನ್ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.
ಮುಂದುವರೆದು, ಸರ್ಕಾರ ಬಡವರಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು. 1.5 ಕೋಟಿ ಸಂಘಟಿತ, ಅಸಂಘಟಿತ ಕೆಲಸಗಾರರು ಇದ್ದಾರೆ. ಅವರೆಲ್ಲಾ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾ? ಎಂಥೆಂಥ ಮಂತ್ರಿಗಳು ಇದಾರೆ. ಕತ್ತಿ ಏನ್ ಹೇಳಿದಾ ಅಂತ ಗೊತ್ತಲ್ಲ ಎಂದು ಕುಟುಕಿದರು.
Corona Vaccine: ಮೊದಲನೇ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ಕೊರೋನಾ ಪಾಸಿಟಿವ್ ಬಂದರೆ, 2ನೇ ಡೋಸ್ ಯಾವಾಗ ತೆಗೆದುಕೊಳ್ಳಬೇಕು?
ಜನರಿಗೆ ನಾನು ಮನವಿ ಮಾಡುತ್ತೇನೆ. ಗುಂಪಿನಿಂದ ದೂರ ಇರಿ. ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ. ಲಾಕ್ಡೌನ್ ಗೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.
ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಅದನ್ನು ತಡೆಯೋಕೆ ಸರ್ಕಾರಕ್ಕೆ ಆಗ್ತಿಲ್ಲ. ಒಟ್ಟಾರೆ ಸರ್ಕಾರ ಸತ್ತುಹೋಗಿದೆ. ಹೆಲ್ತ್ ಮಿನಿಸ್ಟರ್ ಫೋನಿಗೆ ಸಿಗ್ತಿಲ್ಲ, ಡ್ರಗ್ ಕಂಟ್ರೋಲ್ಗೆ ಫೋನ್ ಮಾಡ್ತಿದ್ರೂ ಎತ್ತಲ್ಲ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಇದು ಅರಾಜಕತೆಯ ಸರ್ಕಾರ. ಲಾಕ್ ಡೌನ್ ಮಾಡಿ ನಾಲ್ಕು ದಿನ ಆಗಿದೆ. ಲಾಕ್ ಡೌನ್ ಎಫೆಕ್ಟ್ ಏನು ಅನ್ನೋದೇ ಗೊತ್ತಾಗುತ್ತಿಲ್ಲ. ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣ ಒತ್ತು ನೀಡಬೇಕು. ಆಗೋದಿಲ್ವೇ ಬಿಟ್ಟು ಹೊರಟು ಹೋಗಬೇಕು ಎಂದು ಗುಡುಗಿದರು.
ನಾವು ಸರ್ಕಾರಕ್ಕೆ ಎಲ್ಲ ಸಹಕಾರ ಕೊಡ್ತೇವೆ. ಇವತ್ತು ಬಡವರಿಗೆ ಆ್ಯಂಬುಲೆನ್ಸ್ ಸೇವೆ ನೀಡ್ತಿದ್ದೇವೆ. ವಾರ್ ರೂಂ ಕೂಡ ಓಪನ್ ಮಾಡಿದ್ದೇವೆ. ಜನರ ಜೊತೆ ಇರಬೇಕೆಂದು ನಿರ್ಧರಿಸಿದ್ದೇವೆ ಎಂದರು.
ಮೂರುವರೆ ಕೋಟಿ ಯುವ ಜನರಿದ್ದಾರೆ. 18 ರಿಂದ 45 ವರ್ಷದವರಿದ್ದಾರೆ. ಇವರೆಲ್ಲರಿಗೂ ಉಚಿತವಾಗಿ ಲಸಿಕೆ ಕೊಡಬೇಕು. 1 ರಿಂದ 18ರವರೆಗಿನವರಿಗೂ ಲಸಿಕೆ ಹಾಕಬೇಕು. ಪ್ರಧಾನಿಯವರು ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. 162 ಯುನಿಟ್ ಗಳಿಗೆ ಟೆಂಡರ್ ಕರೆದಿದ್ದಾರೆ. ವ್ಯಾಕ್ಸಿನ್ ಉತ್ಪಾದನೆಗೆ ಕರೆದಿದ್ದಾರೆ. 30 ಯುನಿಟ್ಗಳು ಮಾತ್ರ ಉತ್ಪಾದನೆ ಮಾಡುತ್ತಿವೆ. ಹೀಗಾದರೆ ಎಲ್ಲಿ ಎಲ್ಲರಿಗೂ ಸಿಗುತ್ತೆ?. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರವೇ ಲಸಿಕೆ ನೀಡುತ್ತಿದೆ. ಆದರೆ ಲಸಿಕೆ ಹಾಕಿರುವುದೇ ಇನ್ನೂ ಶೇ 20 ರಷ್ಟು ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಕೊರೋನಾ ಮಹಾಮಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಾವುದೇ ತಯಾರಿ ಮಾಡಿಕೊಂಡಿಲ್ಲ. ಒಂದು ಕೋಟಿಗೆ ಆರ್ಡರ್ ಮಾಡಿದ್ದೇವೆ ಎಂದು ಹೇಳ್ತಿದ್ದಾರೆ. ಆದರೆ ಆರೂವರೆ ಕೋಟಿ ವ್ಯಾಕ್ಸಿನ್ ಬೇಕು. ಅದು ಕೂಡ ಈ ತಿಂಗಳ ಕೊನೆಯಲ್ಲಿ ವ್ಯಾಕ್ಸಿನ್ ಸಿಗುತ್ತದೆ. ಇದು ನನಗೆ ಇರುವ ಮಾಹಿತಿ. ಪೋಲಿಯೊ ಅಭಿಯಾನದ ರೀತಿಯಲ್ಲಿ ವ್ಯಾಕ್ಸಿನ್ ಅಭಿಯಾನ ಆಗಬೇಕು. ದೇಶಾದ್ಯಂತ ಅಭಿಯಾನ ಆಗಬೇಕು. ಎರಡು ಡೋಸ್ ಪ್ರತಿಯೊಬ್ಬರಿಗೂ ಹಾಕಲೇಬೇಕು. ಯಾರಿಗೆ ಅಗತ್ಯವಿದೆ ಅವರಿಗೆಲ್ಲ ವ್ಯಾಕ್ಸಿನ್ ಹಾಕಬೇಕು. ಇದನ್ನು ಸರ್ಕಾರ ಮಾಡಲೇಬೇಕು ಎಂದು ಒತ್ತಾಯಿಸಿದರು.
ಪಿಎಂ ಆರು ಕೋಟಿ ವ್ಯಾಕ್ಸಿನ್ನ್ನು ಬೇರೆ ದೇಶಕ್ಕೆ ಕಳಿಸಿದ್ದಾರೆ. ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ. ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ. ಸಂಸದ ಬಂದು ರೆಮಿಡಿಸಿವರ್ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತಾರೆ. ನಾನು ಕೂಡ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತೇನೆ ನನಗೂ ಅನುಮತಿ ಕೊಡಿ. ಯಾರು ಎಂಪಿಗೆ ಅನುಮತಿ ಕೊಟ್ಟಿದ್ದು ? ಡ್ರಗ್ ಕಂಟ್ರೋಲ್ ಅನುಮತಿ ಹೇಗೆ ಅನುಮತಿ ನೀಡಿದ್ರು ಎಂದು ಪ್ರಶ್ನೆಗಳ ಸುರಿಮಳೆಗೈದರು.
ಸತ್ತವರ ಅಂಕಿ ಅಂಶಗಳು ಸಹ ಸುಳ್ಳು ಹೇಳ್ತಾರೆ. ಎಚ್ಚರ ತೆಗೆದುಕೊಳ್ಳಲಿ ಎಂದು ನಾವು ಹೇಳ್ತೇವೆ. ಸರ್ಕಾರದ ಜೊತೆ ನಾವು ಫೈಟ್ ಮಾಡ್ತಿಲ್ಲ. ನಿನ್ನೆ ಹೆಲ್ತ್ ಮಿನಿಸ್ಟರ್(ಸುಧಾಕರ್) ಗೆ ಫೋನ್ ಮಾಡಿದ್ದೇನೆ. ಪೋನ್ ಗೆ ಸಿಗಲ್ಲ ಹೆಲ್ತ್ ಮಿನಿಸ್ಟರ್ ಎಂದು ಆರೋಗ್ಯ ಸಚಿವ ಸುಧಾಕರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ