ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ 10 ಸಾವಿರ ರೂ. ಆರ್ಥಿಕ ನೆರವು ಘೋಷಿಸಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಇವತ್ತು ರೆಮ್ಡಿಸಿವಿರ್‌ ಜನರಿಗೆ ಸಿಕ್ತಿಲ್ಲ, ಆಕ್ಸಿಜನ್ ಕೊಡೋಕೆ ಆಗ್ತಿಲ್ಲ, ತಜ್ಞರ ಸಲಹೆಯನ್ನು ಸರ್ಕಾರ ಕಡೆಗಣಿಸಿದೆ. ಕೊವೀಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು(ಏ.27): ಕೊರೋನಾ ವೈರಸ್​ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು 14 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಿದೆ. ಸರ್ಕಾರವು ಕೇವಲ ಲಾಕ್​ಡೌನ್​ ಘೋಷಣೆ ಮಾಡಿದರೆ ಸಾಕಾಗಲ್ಲ. ವಲಸಿಗರಿಗೆ, ಕಾರ್ಮಿಕರಿಗೆ ಯಾವುದೇ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಸರ್ಕಾರದ ವಿರುದ್ದ ಕಿಡಿಕಾರಿದ ಅವರು, 14 ದಿನಗಳ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ 10 ಕೆ.ಜಿ ಆಹಾರ ಧಾನ್ಯ ಹಾಗೂ 10 ಸಾವಿರ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ. 

  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಯಾವುದೇ ನೆರವು ಘೋಷಣೆ ಮಾಡಿಲ್ಲ. ಇವತ್ತಿನವರೆಗೂ ಕೇಂದ್ರ ಆಗಲಿ, ರಾಜ್ಯ ಸರ್ಕಾರ ಆಗಲಿ ಯಾವುದೇ ಆರ್ಥಿಕ ಸಹಾಯ ಘೋಷಣೆ ಮಾಡಿಲ್ಲ. ಈ ಸರ್ಕಾರ ನಿಜವಾಗಿಯೂ ಜನರ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ.  ಇದನ್ನು ನಾವು ಹೇಳಿದ್ರೆ, ನೋಡಿ ಈ ಸಮಯದಲ್ಲಿ ಟೀಕೆ ಮಾಡ್ತಾರೆ ಅಂತಾರೆ ಎಂದು ಕುಟುಕಿದರು.

  ವಲಸಿಗ ಕಾರ್ಮಿಕರು ಊರಿಗೆ ಹೋಗಲಿಕ್ಕೆ ವ್ಯವಸ್ಥೆ ಮಾಡಿಕೊಡಬೇಕು.  ಯಾರಿಗೆ ಬದುಕಲು ತೊಂದರೆ ಇದೆಯೋ ಅವರಿಗೆ ಆರ್ಥಿಕ ಸಹಾಯ ಹಾಗೂ ಆಹಾರ ಧಾನ್ಯ ಕೊಡಬೇಕು. ವಲಸೆ ಕಾರ್ಮಿಕರನ್ನು ಉಚಿತವಾಗಿ ಊರಿಗೆ ಕರೆದುಕೊಂಡು ಹೋಗಬೇಕು. ಊರಿಗೆ ಹೋದವರಿಗೆ ನರೇಗಾ ಯೋಜನೆಯಡಿ ಕೆಲಸ ಮಾಡಿಕೊಡಬೇಕು. ಕೂಡಲೇ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

  ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ಧ

  ಕೊವೀಡ್ ನಿರ್ವಹಣೆಗೆ ನಾವು ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ಧರಿದ್ದೇವೆ. ‌ ಎಲ್ಲರಿಗೂ ಲಸಿಕೆ ಕೊಡಬೇಕು ಈಗ ಸತ್ತಿರೋರಲ್ಲಿ ಎಲ್ಲರೂ 40-50 ವರ್ಷದ ಒಳಗಿನವರೇ.  ಇವಾಗ 45 ವರ್ಷ ಮೇಲ್ಪಟ್ಟ ವರಿಗೆ ಕೊಡಿ ಅಂತಾರೆ. ನನ್ನ ಪ್ರಕಾರ ಎಲ್ಲ ವಯಸ್ಸಿನವರಿಗೂ ಲಸಿಕೆ ಕೊಡಬೇಕು ಎಂದು ತಾಕೀತು ಮಾಡಿದರು.

  ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ

  ಸರ್ಕಾರ ಆಕ್ಸಿಜನ್ ಸಿದ್ದತೆ, ವ್ಯಾಕ್ಸಿನೇಷನ್‌ ಪ್ರಿಪರೇಷನ್ ಯಾಕೆ ಮಾಡಿಲ್ಲ..? ಇವತ್ತು ಕರ್ನಾಟಕದಲ್ಲಿ ಬೆಡ್‌ಗಳು ಇಲ್ಲ. ನನ್ನ ಭಾಮೈದನಿಗೆ ಇನ್​ಪ್ಲುಯೆನ್ಸ್​ ಮಾಡಿ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿದ್ದೇನೆ.  ಇದು ಸರ್ಕಾರದ ಬೇಜವಾಬ್ದಾರಿ ನಿರ್ಲಕ್ಷ್ಯ ತಾನೇ..? ಇವತ್ತು ರೆಮ್ಡಿಸಿವಿರ್‌ ಜನರಿಗೆ ಸಿಕ್ತಿಲ್ಲ, ಆಕ್ಸಿಜನ್ ಕೊಡೋಕೆ ಆಗ್ತಿಲ್ಲ, ತಜ್ಞರ ಸಲಹೆಯನ್ನು ಸರ್ಕಾರ ಕಡೆಗಣಿಸಿದೆ. ಕೊವೀಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

  ಕೋವಿಡ್​ ಬಿಕ್ಕಟ್ಟು: ಮೇ 15ರವರೆಗೆ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಆಸ್ಟ್ರೇಲಿಯಾ ಸರ್ಕಾರ

  ಮದ್ರಾಸ್ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ಛೀಮಾರಿ ಹಾಕಿದೆ. ಚುನಾವಣಾ ಪ್ರಚಾರಕ್ಕೆ ಅವಕಾಶ ಕೊಟ್ಟಿದ್ದು ಯಾಕೆ? ಪ್ರಚಾರಕ್ಕೆ ಅವಕಾಶ ಕೊಟ್ಟು ಚುನಾವಣಾ ಆಯೋಗ ಜನರನ್ನು ಸಾಯಿಸಿದೆ ಎಂದು. ಇವ್ರು ಚುನಾವಣೆ ಮಾಡಿಲ್ಲ ಅಂದಿದ್ದರೆ ನಾವು ಯಾಕೆ ಚುನಾವಣೆಗೆ ಹೋಗ್ತಿದ್ವಿ ಎಂದು ಪ್ರಶ್ನಿಸಿದ್ದಾರೆ.

  ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಕೂಡ ಎಡವಿದ್ದಾವೆ.  ಕೇಂದ್ರಕ್ಕೆ ಪ್ರತಿದಿನ ತಜ್ಞರು ಸಲಹೆ ಕೊಡ್ತಾನೆ ಇರ್ತಾರೆ. ಅದಾದ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಂಭೀರವಾದ ಕ್ರಮ ತೆಗೆದುಕೊಳ್ಳೋದನ್ನೇ ಬಿಟ್ಬಿಟ್ರು.  ರಾಜ್ಯದಲ್ಲಿ ಕಳೆದ ನವೆಂಬರ್ 30ರಂದೇ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ ಬರುತ್ತೆ. ಅವಾಗ ಮುಂಜಾಗ್ರತಾ ಕ್ರಮ ವಹಿಸಲು ಶಿಫಾರಸ್ಸು ಕೊಟ್ಟಿದ್ದರು. ಆದರೆ ಅದರ ಶಿಫಾರಸ್ಸಿನ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ.  ಕೇಂದ್ರ ಸರ್ಕಾರ ಕೂಡ ಆಕ್ಸಿಜನ್ ಕೂಡ ಸಪ್ಲೈ ಮಾಡಿಲ್ಲ ಎಂದು ಆರೋಪಿಸಿದರು.

  ಎರಡನೇ ಅಲೆಯ ತೀವ್ರತೆಗೆ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಜನವರಿ, ಫೆಬ್ರವರಿ, ಮಾರ್ಚ್ ನಲ್ಲಿ ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಐದು ರಾಜ್ಯಗಳು ಹಾಗೂ ರಾಜ್ಯದ ಎರಡು ಉಪ ಚುನಾವಣೆ ಗಳನ್ನು ಮುಂದಕ್ಕೆ ಹಾಕಬೇಕಿತ್ತು. ಪ್ರಧಾನ ಮಂತ್ರಿಗಳೇ ಅತ್ಯಂತ ಖುಷಿಯಿಂದ ಪ್ರಚಾರ ಮಾಡಿ ಬಂದಿದ್ದಾರೆ.  ಇವ್ರು ಒಂದು ರೀತಿ ಜನರ ಜೀವನದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

  ನಾನು ಲಾಕ್ ಡೌನ್ ಮಾಡಿ ಅಂತನೂ ಹೇಳಿಲ್ಲ, ಲಾಕ್ ಡೌನ್ ಮಾಡಬೇಡಿ ಅಂತನೂ ಹೇಳಿಲ್ಲ. ತಾಂತ್ರಿಕ ತಜ್ಞರು ಏನು ಹೇಳ್ತಾರೋ ಆ ರೀತಿ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

  ಜನರು ಎಚ್ಚರಿಕೆಯಿಂದಿರಿ ಎಂದು ಸಿದ್ದರಾಮಯ್ಯ ಮನವಿ

  ಸರ್ಕಾರ ಏನು ಮಾಡ್ತಿಲ್ಲ ಅಂದ್ರು, ಜನರು ಮಾತ್ರ ಎಚ್ಚರಿಕೆಯಿಂದ ಇರಬೇಕು.  ಜನರು ತಮ್ಮ ತಮ್ಮ ಕೆಲಸ ತಾವು ಮಾಡಬೇಕು. ಸರ್ಕಾರ ನಂಬಿಕೊಂಡು ಕೂರಬಾರದು.ಸರ್ಕಾರ ಮಾಡುತ್ತೆ ಅಂತಾ ನಾವು ಕಾಯ್ಕೊಂಡು ಕುಳಿತು ಕೊಳ್ಳಬಾರದು. ಕೋವಿಡ್ ಮಾರ್ಗಸೂಚಿಯಂತೆ ಎಲ್ಲರೂ ಮಾಸ್ಕ್ ಧರಿಸಬೇಕು. ಗುಂಪು ಸೇರದೇ, ಹೊರಗೆ ಹೋಗದೇ, ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಜನರಲ್ಲಿ ಕೈ ಮುಗಿದು ಮನವಿ ಮಾಡಿದರು.

  ಯಡಿಯೂರಪ್ಪ-ಸುಧಾಕರ್ ವಿರುದ್ಧ ಸಿದ್ದು ಕಿಡಿ

  ಅವ್ರು ಬಂಡರು, ಅವರೆಲ್ಲಿ ರಾಜೀನಾಮೆ ಕೊಡ್ತಾರೆ ಎಂದು  ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದರು. ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ಯಡಿಯೂರಪ್ಪ ಹಾಗೂ ಸುಧಾಕರ್‌ ರಾಜೀನಾಮೆ ಕೇಳ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವ್ರು ಬಂಡ್ರು, ಅವರೆಲ್ಲಿ ರಾಜೀನಾಮೆ ಕೊಡ್ತಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಾನು ಯಾರ ವಿಷಯದಲ್ಲೂ ಸಾಫ್ಟ್ ಕಾರ್ನರ್ ಇಲ್ಲ. ಆರೋಗ್ಯ ಸಚಿವ ಸೇರಿದಂತೆ ಇಡೀ ಸರ್ಕಾರ ವೈಫಲ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

  ಸರ್ಕಾರ ಸಾವಿನ ಅಂಕಿ ಅಂಶದ ಲೆಕ್ಕದ ಬಗ್ಗೆ ಮುಚ್ಚಿಡ್ತಿದೆ. ಕೊರೋನಾ ಬಂದವರ ಬಗ್ಗೆಯೂ ಲೆಕ್ಕ ಕೊಡ್ತಿಲ್ಲ ಸಾವಿನ ಬಗ್ಗೆಯೂ ಸರಿಯಾಗಿ ಲೆಕ್ಕ ಕೊಡ್ತಿಲ್ಲ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದರು.

  ನಾನು ಮನೇಲಿದ್ರು ಮಾಸ್ಕ್ ಹಾಕೊಳ್ಳಿ ಅಂತೀನಿ. ನಮ್ಮ ಅಡುಗೆ ಮನೆಯವರಿಗೆಲ್ಲಾ ಒಂದು ಸಲ ಕೊರೋನಾ ಬಂದ್ಬಿಟ್ಟಿತ್ತು. ಇವಾಗ ಅವರಿಗೆ ಮಾಸ್ಕ್ ಕೊಟ್ಟು, ಲಸಿಕೆ ಕೊಡಿಸುತ್ತಿದ್ದೇನೆ. ಮನೆಯಲ್ಲಿದ್ರು ಮಾಸ್ಕ್ ಧರಿಸಬೇಕು. ಜನರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು  ರಾಜ್ಯದ ಜನರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
  Published by:Latha CG
  First published: