• Home
 • »
 • News
 • »
 • state
 • »
 • Freedom Fighter Doreswamy: ಯಾವತ್ತೂ ಅಳಿಸಲಾಗದ ಜನಪರ ಹೆಜ್ಜೆಗುರುತುಗಳನ್ನು ಕನ್ನಡ ಮಣ್ಣಿನಲ್ಲಿ ಬಿತ್ತಿ ಹೋಗಿದ್ದಾರೆ; ದೊರೆಸ್ವಾಮಿ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

Freedom Fighter Doreswamy: ಯಾವತ್ತೂ ಅಳಿಸಲಾಗದ ಜನಪರ ಹೆಜ್ಜೆಗುರುತುಗಳನ್ನು ಕನ್ನಡ ಮಣ್ಣಿನಲ್ಲಿ ಬಿತ್ತಿ ಹೋಗಿದ್ದಾರೆ; ದೊರೆಸ್ವಾಮಿ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

ಎಚ್​​.ಎಸ್​​. ದೊರೆಸ್ವಾಮಿ

ಎಚ್​​.ಎಸ್​​. ದೊರೆಸ್ವಾಮಿ

ದೊರೆಸ್ವಾಮಿ ಅವರು ಈ ನೆಲದಲ್ಲಿ ಬಿತ್ತಿರುವ ಹೋರಾಟದ ಬೀಜಗಳು, ಮುನ್ನಡೆಸಿಕೊಂಡು ಬಂದ ಹೋರಾಟ ಪರಂಪರೆಯನ್ನು ಈ ನಾಡು ಮುನ್ನಡೆಸುತ್ತದೆ. ಅವರ ಸಾವು ಅತೀವ ದುಃಖದ ಸಂದರ್ಭ ನನಗೆ ಎಂದು ವಿರೋಧ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯ ಅವರು ಸಂತಾಪ ಸೂಚಕದಲ್ಲಿ ಸಂತಾಪ ಸೂಚಿಸಿದ್ದಾರೆ. 

 • Share this:

  ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​.ದೊರೆಸ್ವಾಮಿ (104) ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 15 ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ 1:35ರ ಸುಮಾರಿಗೆ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜಮುಖಿ ಹೋರಾಟಗಳಿಂದ ನಾಡನಲ್ಲಿ ಗುರುತಿಸಿಕೊಂಡಿದ್ದ ದೊರೆಸ್ವಾಮಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದೊರೆಸ್ವಾಮಿ ನಿಧನಕ್ಕೆ ಅತೀವ ದುಃಖ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ. 


  20ನೇ ಶತಮಾನವಿಡೀ ಬದುಕಿ, 21ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡಿದ್ದ ಹಾರೋಹಳ್ಳಿಯ ಶ್ರೀನಿವಾಸಯ್ಯ ದೊರೆಸ್ವಾಮಿಯವರು ನಮಗೆಲ್ಲರಿಗೂ ಸ್ಫೂರ್ತಿಯ ಕೇಂದ್ರವಾಗಿದ್ದವರು. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ ಭೂ ಕಬಳಿಕೆಯ ವಿರುದ್ಧದ ಅವರ ಚಟುವಟಿಕೆಗಳು ದೇಶ ವ್ಯಾಪ್ತಿ ಹಬ್ಬಿತ್ತು. ಪತ್ರಕರ್ತರಾಗಿಯೂ ಅವರು ಪ್ರಸಿದ್ಧರು. ನಮ್ಮನ್ನು ಅಗಲಿ ಹೋದ ದೊರೆಸ್ವಾಮಿ ಅವರು ನಮ್ಮೆಲ್ಲರ ಆತ್ಮಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಕುಗ್ಗದೆ, ಜಗ್ಗದೆ, ಅನ್ಯಾಯ, ಅಕ್ರಮ ಕಂಡಾಯ ಬೀದಿಗಿಳಿಯುತ್ತಿದ್ದ ಅವರು ಎಲ್ಲರಿಗೂ ಮಾದರಿಯಾಗಿದ್ದರು ಎಂದು ಸಿದ್ದರಾಮಯ್ಯ ಸಂತಾಪ ಸೂಚಕದಲ್ಲಿ ಹೇಳಿದ್ದಾರೆ.


  ಇದನ್ನು ಓದಿ: Freedom Fighter Doreswamy: ಸ್ವಾತಂತ್ರ್ಯ ಚಳುವಳಿಯಿಂದ ಸಮಾಜಮುಖಿ ಹೋರಾಟದವರೆಗೆ ಹೆಚ್​.ಎಸ್. ದೊರೆಸ್ವಾಮಿ ಅವರ ಮೈಲುಗಲ್ಲು!


  ಅವರ ನಿಧನ ನನಗೆ ಆಘಾತ ಉಂಟು ಮಾಡಿದೆ. ಮನೆ ಹಿರಿಯನನ್ನು ಕಳೆದುಕೊಂಡ ದುಃಖ ನನ್ನದಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಕರ್ನಾಟಕ ಏಕೀಕರಣಕ್ಕೂ ದೊರೆಸ್ವಾಮಿ ಅವರು ದುಡಿದಿದ್ದರು. ಇಂದಿರಾ ಗಾಂಧಿ ಕಾಲದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ್ದ ಅವರು, ಈಚೆಗೆ ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸಂನ ವಿರುದ್ಧವೂ ಧ್ವನಿ ಎತ್ತುತ್ತಿದ್ದರು. ʼಗಾಂಧೀ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ಹೊರತು ವೈರತ್ವ ಇರಲಿಲ್ಲʼ ಎಂಬ ಅವರ ಮಾತು ಹೆಚ್ಚು ಸಮರ್ಪಕವಾಗಿತ್ತು.
  ದೊರೆಸ್ವಾಮಿ ಅವರು ಕೊರೋನಾ ಗೆದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಅತೀವ ದುಃಖದ ಸಂಗತಿ. ಸ್ವಾತಂತ್ರ್ಯ ಹೋರಾಟಗಾರ ಶಾಮಣ್ಣ ಅವರ ಮೊಮ್ಮಗರಾಗಿದ್ದ ದೊರೆಸ್ವಾಮಿ ಅವರು ಹೋರಾಟದ ಸಂಸ್ಕಾರ ಮತ್ತು ಬದ್ಧತೆಯ ಕುಟುಂಬದಲ್ಲಿ ಸಮಾಜಮುಖಿಯಾಗಿ ಬಾಲ್ಯದಿಂದ ಬೆಳೆದು ಬಂದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯ ನಂತರದಲ್ಲೂ ಸರ್ಕಾರಗಳನ್ನು ಪ್ರಶ್ನಿಸುವ ಮತ್ತು ಅಗತ್ಯ ಬಿದ್ದಾಗ ನಿರಂತರ ಹೋರಾಟ ನಡೆಸುತ್ತಾ ಬಂದವರು. ಪವಿತ್ರವಾದ ಹೋರಾಟದ ಪರಂಪರೆಯನ್ನು ಕನ್ನಡ ನೆಲದಲ್ಲಿ ಮುನ್ನಡೆಸುತ್ತಾ ಹೋರಾಟವನ್ನು ಯಾವತ್ತೂ ದ್ವೇಷ ಆಗದಂತೆ ಆಚರಿಸಿಕೊಂಡು ಬಂದವರು. ಹೀಗಾಗಿ ಆಡಳಿತಗಾರರ ವಿರುದ್ಧ ಪ್ರತಿಭಟನೆ ಮತ್ತು ಸಲಹೆ ನೀಡುವ ಸಹೃದಯತೆಯನ್ನೂ ಪಾಲಿಸಿಕೊಂಡು ಬಂದವರು ಎಂದು ನೆನಪು ಮಾಡಿಕೊಂಡಿದ್ದಾರೆ.


  ಶಿಕ್ಷಕರಾಗಿ, ಪತ್ರಕರ್ತರಾಗಿಯೂ ಆದರ್ಶರಾಗಿದ್ದರಲ್ಲದೆ ನಾಡಿನ ವಿವೇಕವನ್ನು ನಿರಂತರವಾಗಿ ತಿದ್ದುತ್ತಾ, ವಿಸ್ತರಿಸುತ್ತಾ ಮಾರ್ಗದರ್ಶಕರಾಗಿದ್ದರು. ಇವರ ಸಾವು ನನಗೆ ಈ ಜೀವಮಾನದ ನೋವು. ಸಾರ್ಥಕ ಜೀವನ ನಡೆಸಿ ಯಾವತ್ತೂ ಅಳಿಸಲಾಗದ ಜನಪರ ಹೆಜ್ಜೆಗುರುತುಗಳನ್ನು ಕನ್ನಡ ಮಣ್ಣಿನಲ್ಲಿ ಬಿತ್ತಿ ಹೋಗಿದ್ದಾರೆ. ದೊರೆಸ್ವಾಮಿ ಅವರು ಈ ನೆಲದಲ್ಲಿ ಬಿತ್ತಿರುವ ಹೋರಾಟದ ಬೀಜಗಳು, ಮುನ್ನಡೆಸಿಕೊಂಡು ಬಂದ ಹೋರಾಟ ಪರಂಪರೆಯನ್ನು ಈ ನಾಡು ಮುನ್ನಡೆಸುತ್ತದೆ. ಅವರ ಸಾವು ಅತೀವ ದುಃಖದ ಸಂದರ್ಭ ನನಗೆ ಎಂದು ವಿರೋಧ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯ ಅವರು ಸಂತಾಪ ಸೂಚಕದಲ್ಲಿ ಸಂತಾಪ ಸೂಚಿಸಿದ್ದಾರೆ.


  ಸ್ವಾತಂತ್ರ್ಯ ಹೋರಾಟಗಾರ, ಜನಪರ ಹೋರಾಟಗಾರರಾದ ದೊರೆಸ್ವಾಮಿ ನಿಧನಕ್ಕೆ ನಾಡಿನ ಎಲ್ಲ ಗಣ್ಯರು ಸಂತಾಪ ಸೂಚಿಸಿದ್ದಾರೆ. 104 ಬದುಕಿದ್ದ ದೊರೆಸ್ವಾಮಿ ಅವರು ಇತ್ತೀಚೆಗಷ್ಟೇ ಕೊರೋನಾ ವೈರಸ್​ಗೆ ತುತ್ತಾಗಿ, ಅದರಿಂದ ಗುಣಮುಖರಾಗಿ ಮನೆಗೆ ಬಂದಿದ್ದರು.

  Published by:HR Ramesh
  First published: