news18-kannada Updated:February 12, 2021, 8:19 AM IST
ಸಿದ್ದರಾಮಯ್ಯ.
ಬಾಗಲಕೋಟೆ (ಫೆ. 12): ಒಂದು ಕಡೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರವಾದ ಬಾದಾಮಿಗೆ ಭಾರೀ ಅನುದಾನ ಹರಿದುಬರುತ್ತಿದೆ. ಹೀಗಾಗಿ, ಸರ್ಕಾರದ ವಿರುದ್ಧ ಸಿದ್ದರಾಮಯ್ಯನವರ ಟೀಕೆ ನಿಜವಾ? ಸುಳ್ಳಾ? ಅಥವಾ ಅಡ್ಜಸ್ಟ್ಮೆಂಟ್ ರಾಜಕೀಯ ನಡೆಯುತ್ತಿದೆಯಾ? ಎಂಬು ಅನುಮಾನ ಕಾಡಲಾರಂಭಿಸಿದೆ. ಇಂದು ಮತ್ತೆ ಬಾದಾಮಿ ಕ್ಷೇತ್ರದಲ್ಲಿ ಅಂದಾಜು 50 ಕೋಟಿ ರೂ. ಕಾಮಗಾರಿಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರ ರಾಜಕೀಯ ಎದುರಾಳಿ ಬಿ. ಶ್ರೀರಾಮುಲು ಸೇರಿದಂತೆ ಸರ್ಕಾರದ ಮೂವರು ಸಚಿವರನ್ನು ಆಹ್ವಾನಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.
ನಿನ್ನೆ ಮತ್ತು ಇಂದು ಸೇರಿ ಬಾದಾಮಿ ಕ್ಷೇತ್ರದಲ್ಲಿ ಅಂದಾಜು 58 ಕೋಟಿ ರೂ.ಗೂ ಹೆಚ್ಚು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಾಗಾದರೆ, ಸರ್ಕಾರದ ಬಳಿ ದುಡ್ಡಿಲ್ಲ ಅನ್ನೋದಾದರೆ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಎಲ್ಲಿಂದ ದುಡ್ಡು ಬರುತ್ತಿದೆ? ಎಂಬ ಪ್ರಶ್ನೆಯೊಂದು ಎದ್ದಿದೆ. ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಭಾರೀ ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯ ಬಾದಾಮಿ ಶಾಸಕರಾದ ಮೇಲೆ 1,800 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ.
ಹೀಗಾಗಿ, ಸಿದ್ದರಾಮಯ್ಯ, ಯಡಿಯೂರಪ್ಪನವರ ಮಧ್ಯೆ ಹೊಂದಾಣಿಕೆಯಿಂದಲೇ ಬಾದಾಮಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಬಿ. ಶ್ರೀರಾಮುಲು ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಮತ್ತೆ ಮುಖಾಮುಖಿ ಆಗಲಿದ್ದಾರೆ. ನಿನ್ನೆಯಿಂದ ಬಾದಾಮಿ ಕ್ಷೇತ್ರದ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ರಾಜಕೀಯ ಪುನರ್ಜನ್ಮ ನೀಡಿರುವ ಕ್ಷೇತ್ರ ಬಾದಾಮಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೇಳೆ ಬಿಜೆಪಿಯಿಂದ ಬಿ. ಶ್ರೀರಾಮುಲು ಕಣಕ್ಕಿಳಿದಾಗ ಬಾದಾಮಿ ಕ್ಷೇತ್ರ ದೇಶದಲ್ಲೇ ಗಮನಸೆಳೆದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿತ್ತು.
ಇದನ್ನೂ ಓದಿ: ಸಾಲ ತೀರಿಸದೆ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಮಾಲೀಕ ಪರಾರಿ; ಬ್ಯಾಂಕ್ನಿಂದ 200 ಎಕರೆ ಕಾಫಿ ತೋಟ ಮುಟ್ಟುಗೋಲು
ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸೋಲು ಅನುಭವಿಸಿದರೆ, ಬಾದಾಮಿ ಜನತೆ ಕೈಹಿಡಿದಿದ್ದರು. ಇನ್ನೂ ವಿಶೇಷವೆಂದರೆ ಸಿದ್ದರಾಮಯ್ಯ , ಬಿ. ಶ್ರೀರಾಮುಲು ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಮತದಾರರು ಇಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಆಶೀರ್ವಾದ ಮಾಡಿದ್ದರು. ಬಾದಾಮಿ ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಸೋತ ಬಳಿಕ ಬಾದಾಮಿ ಕ್ಷೇತ್ರಕ್ಕೆ ಆಗಮಿಸಿದ್ದು ಕಡಿಮೆ. ಇದೀಗ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಸಚಿವ ಬಿ. ಶ್ರೀರಾಮುಲು ಅವರನ್ನು ಆಹ್ವಾನಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಮೈತ್ರಿ ಸರ್ಕಾರವಿದ್ದಾಗಲೂ ಸಚಿವರನ್ನು ಸ್ವಕ್ಷೇತ್ರ ಬಾದಾಮಿಗೆ ಆಹ್ವಾನಿಸಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದರು. ಇದೀಗ ಬಿಜೆಪಿ ಸರ್ಕಾರದಲ್ಲೂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿ, ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕ. ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸ್ನೇಹ, ಜೊತೆಗೆ ಹಲವು ಸಚಿವರೊಂದಿಗೆ ವೈಯಕ್ತಿಕ ಸ್ನೇಹ ಸಿದ್ದರಾಮಯ್ಯ ಹೊಂದಿದ್ದಾರೆ. ಬಾದಾಮಿ ಕ್ಷೇತ್ರಕ್ಕೆ ಬಂದಾಗ ಈ ಬಗ್ಗೆ ಉಲ್ಲೇಖಿಸಿದ್ದುಂಟು. ಇಂದು ಬಾದಾಮಿ ಕ್ಷೇತ್ರಕ್ಕೆ ಡಿಸಿಎಂ, ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಆಗಮಿಸಲಿದ್ದು, ಸಿದ್ದರಾಮಯ್ಯ ಸಾರಥ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜೀವಜಲ ಮಿಷನ್ ಯೋಜನೆಯಡಿ ಬಾದಾಮಿ ಕ್ಷೇತ್ರದ 16 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಐತಿಹಾಸಿಕ ಪಟ್ಟದಕಲ್ಲು ಉದ್ದೇಶಿತ ಸಮಗ್ರ ಮೂಲಭೂತ ಸೌಕರ್ಯ ಕಾರ್ಯಕ್ಕೆ ಅಡಿಗಲ್ಲು, ಹೆಸ್ಕಾಂ ನೂತನ ಉಪವಿಭಾಗ ಕಚೇರಿ ಉದ್ಘಾಟನೆ, ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ, ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ಉದ್ಘಾಟನೆ ಸೇರಿದಂತೆ ರಸ್ತೆ ಕಾಮಗಾರಿಗೆ ಸಿದ್ದರಾಮಯ್ಯ ಇಂದು ಚಾಲನೆ ನೀಡಲಿದ್ದು ವೇಳೆ ಸಿದ್ದರಾಮಯ್ಯಗೆ ಸಚಿವತ್ರಯರು ಸಾಥ್ ನೀಡಲಿದ್ದಾರೆ.
(ವರದಿ: ರಾಚಪ್ಪ ಬನ್ನಿದಿನ್ನಿ)
Published by:
Sushma Chakre
First published:
February 12, 2021, 8:19 AM IST