ಮೈಸೂರು (ಡಿ.5): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪೂರ್ವ ಯೋಜಿತವಾಗಿ ರೂಪಿಸಿದ ಬಲೆಯಲ್ಲಿ ಬಿದ್ದು ನಾನು ಹಾಳಾದೆ. ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ಈ ನನ್ನನ್ನು ಟ್ರ್ಯಾಪ್ ಮಾಡಿದರು. ಇದಕ್ಕಾಗಿ ಅವರು ದೇವೇಗೌಡ ಅವರನ್ನು ಭಾವನಾತ್ಮಕವಾಗಿ ಬಳಸಿ, ನಮ್ಮ ಶಕ್ತಿ ಕುಂದುವಂತೆ ಮಾಡಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ಚುನಾವಣೆಯಲ್ಲಿ ನಾವು ಯಾರ ಹಂಗು ಇಲ್ಲದೆ 40 ಸೀಟು ಪಡೆಯುತ್ತಿದ್ದೇವು. 12 ವರ್ಷ ರಾಜಕೀಯದಲ್ಲಿ ಪಡೆದ ಒಳ್ಳೆಯ ಹೆಸರನ್ನು ಹಾಳು ಮಾಡಿದರು. ತಂದೆ ಮಾತು ಕೇಳಿ ಅವರ ಮನಸ್ಸಿಗೆ ನೋಯಿಸಬಾರದು ಎಂದು ಕಾಂಗ್ರೆಸ್ ಜೊತೆ ಹೋದೆ. ಆದರೆ, ಸಿದ್ದರಾಮಯ್ಯ ಅವರು ಗುಂಪು ನನ್ನ ಸರ್ವನಾಶ ಮಾಡಿತು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದೇ ತಿಂಗಳಲ್ಲಿ ನಾನು ಕಣ್ಣೀರು ಹಾಕಿದ್ದೇನೆ. ಅವರು ಮಾಡುತ್ತಿದ್ದ ದ್ರೋಹ ಗೊತ್ತಾಗಿ ನಾನು ಕಣ್ಣೀರು ಹಾಕಿದೆ. ಈ ಹಿಂದೆ ಬಿಜೆಪಿ ಜೊತೆಗಿನ ಮೈತ್ರಿ ವೇಳೆ ಮಾಡದಷ್ಟು ದ್ರೋಹವನ್ನು ಕಾಂಗ್ರೆಸ್ ನನಗೆ ಮಾಡಿತ್ತು. ಆದರೂ ಎರಡು ಪಕ್ಷದ ನಡುವೆ ಹೊಂದಾಣಿಕೆ ಅಗತ್ಯ ಎಂದು ಕಾಂಗ್ರೆಸ್ ಎಂಎಲ್ಎಗಳಿಗೆ 19 ಸಾವಿರ ಕೊಟಿ ಅನುದಾನ ಕೊಟ್ಟಿದೆ ಇವರು ಮಾತ್ರ ನನಗೆ ಸಹಕಾರ ನೀಡಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ರೆ ನಮಗೇನೂ ಸಿಗುತ್ತೆ. ಯಡಿಯೂರಪ್ಪ 6 ತಿಂಗಳು ಕಾಲ ಸಿಎಂ ಆಗಿದ್ದುಕೊಂಡು ವಾಪಸ್ಸು ಹೋಗುತ್ತಾರೆ. ಮತ್ತೆ ನಾನೇ ಸಿಎಂ ಆಗುತ್ತೇನೆ ಅಂತ ಈ ಸಿದ್ದರಾಮಯ್ಯ ಕನಸು ಕಂಡಿದ್ದವರು ಎಂದು ವಾಗ್ದಾಳಿ ನಡೆಸಿದರು.
ಶಾಪ ವಿಮೋಚನೆ
ಮೈತ್ರಿ ಮಾಡಿಕೊಂಡ ಮೊದಲ ದಿನವೇ ನನ್ನ ಹೆಸರು ಕೆಡುತ್ತಿರುವುದು ಗೊತ್ತಾಯ್ತು ಆದರೂ, ಅವರ ಜೊತೆ ಕೈ ಜೊಡಿಸಿದೆ. 24 ಪಕ್ಷಗಳು ಬಿಜೆಪಿ ವಿರುದ್ದ ಒಂದು ಸಂದೇಶ ನೀಡುವ ಉದ್ದೇಶ ಇತ್ತು. ಇದೇ ಕಾರಣಕ್ಕೆ ಅವರಿಗೆ ಗೌರವ ಕೊಟ್ಟೆ. ಅಧಿಕಾರಲ್ಲಿ ಉಳಿಯಬೇಕಿದ್ದರೆ ನನಗೇನು ಕಷ್ಟ ಇರಲಿಲ್ಲ. ನಮ್ಮ ಕುಟುಂಬಕ್ಕೆ ಅದೊಂದು ಶಾಪ ಇದೆ. ನಾವು ಯಾರನ್ನ ಬೆಳೆಸುತ್ತೇವೋ ಅಂತವರಿಂದಲೇ ಮೋಸಗೊಳ್ಳುತ್ತಿದ್ದೇವೆ. ಆ ಶಾಪವನ್ನ ಹೇಗೆ ವಿಮೋಚನೆ ಮಾಡಬೇಕು ಎನ್ನುವುದು ನಮಗಿನ್ನು ತಿಳಿಯುತ್ತಿಲ್ಲ. ಒಂದು ರಿಸರ್ಚ್ ಮಾಡಿ ಆ ಬಳಿಕ ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ ಎಂದರು.
ಜನತಾದಳ ಬದುಕಿದ್ದರೆ ಕಾಂಗ್ರೆಸ್ ಜೀವಂತ
ಜನತಾದಳ ಬದುಕಿದ್ದರೆ ನಾವು ಬದುಕಿರುತ್ತೇವೆ. ಇಲ್ಲದಿದ್ದರೆ ನಾವು ಸಾಯುತ್ತೇವೆ ಅಂತ ಕಾಂಗ್ರೆಸ್ನವರಿಗೆ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ಸೋಲು ಗೆಲುವಿನಲ್ಲಿ ಜನತಾದಳ ಪಾತ್ರ ಇದೆ ಎಂಬುದನ್ನು ಸಿದ್ದರಾಮಯ್ಯನ ಮಾತಿನಲ್ಲೆ ಅರ್ಥ ಮಾಡಿಕೊಳ್ಳಬಹುದು. ಶಿರಾದಲ್ಲಿ 70 ಸಾವಿರ ಮತ ಪಡೆದು ಗೆದ್ದಿದ್ದರು. ಆದರೆ, ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನತಾದಳ ವೀಕ್ ಆಗಿದ್ದರಿಂದಲೇ ನಮಗೆ ಸೋಲಾಯಿತು ಅಂತಾರೆ. ಇದರಿಂದಲೇ ಕಾಂಗ್ರೆಸ್ ಗೆಲುವು ಸೋಲಿನಲ್ಲಿ ಜೆಡಿಎಸ್ ಪಾತ್ರ ಇದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಇದನ್ನು ಓದಿ: ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ ಪಕ್ಷದಿಂದ ಶಿಸ್ತುಕ್ರಮ; ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ
ಬಿಜೆಪಿಗೆ ಹೆಚ್ಚು ಸ್ಥಾನ ಬರಲು ಕಾಂಗ್ರೆಸ್ ಕಾರಣ
ಬಿಜೆಪಿಗೆ 105 ಸ್ಥಾನ ಗಿಫ್ಟ್ ಕೊಟ್ಟಿದ್ದೆ ಸಿದ್ದರಾಮಯ್ಯ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಿ.ಟೀಂ ಅಂತ ಪ್ರಚಾರ ಮಾಡಿದ್ದರು. ಇದರಿಂದಲೇ ಬಿಜೆಪಿಗೆ 105 ಸೀಟು ಬಂತು. ಇಲ್ಲವಾಗಿದ್ದರೆ ಬಿಜೆಪಿ 70-80 ಕ್ಕೆ ಬಿದ್ದುಹೋಗುತ್ತಿತ್ತು. ಸಿದ್ದರಾಮಯ್ಯ ಮಹಾನಭಾವರಿಂದಲೇ ಇಷ್ಟೇಲ್ಲ ಕಾರಣ ಆಯಿತು ಎಂದು ಕುಟುಕಿದರು.
ಕದ್ದು ಮುಚ್ಚಿ ಸಿಎಂ ಭೇಟಿ
ಸಿದ್ದರಾಮಯ್ಯನವರ ಥರ ನಾನು ಜನರ ದಾರಿ ತಪ್ಪಿಸಿ ರಾಜಕಾರಣ ಮಾಡುವುದಿಲ್ಲ. ನಾನು ನೇರವಾಗಿ ಎಲ್ಲರ ಎದುರೆ ರಾಜಕಾರಣ ಮಾಡುತ್ತೇನೆ. ಅವರು ಯಾರನ್ನ ಭೇಟಿ ಮಾಡಿದ್ದಾರೆ. ಎಷ್ಟೋತ್ತಿನಲ್ಲಿ ಭೇಟಿ ಮಾಡಿದ್ದಾರೆ ಅನ್ನೋದನ್ನ ಕಾಲ ಬಂದಾಗ ಹೇಳುತ್ತೇನೆ. ಅದನ್ನ ಅವರ ಪಕ್ಷದವರೇ ಹೇಳುತ್ತಾರೆ ಬಿಡಿ. ನಾನು ಕೃಷ್ಣ ಕಚೇರಿಯಲ್ಲಿ ಯಡಿಯೂರಪ್ಪರನ್ನ ಭೇಟಿ ಮಾಡಿದ್ದೆ. ಸಿದ್ದರಾಮಯ್ಯನವರು ಸಹ ಯಡಿಯೂರಪ್ಪರನ್ನ ಭೇಟಿ ಮಾಡಿದರೆ ಸಮಸ್ಯೆ ಇಲ್ಲ. ಆದರೆ ಅವದು ಕದ್ದುಮುಚ್ಚಿ ಭೇಟಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ