HOME » NEWS » State » FORMER CM HD KUMARASWAMY REACTS ABOUT RAM MANDIR CONSTRUCTION LG

ರಾಮಮಂದಿರ ನಿರ್ಮಾಣ: ದೇಣಿಗೆ ಸಂಗ್ರಹ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ; ಕುಮಾರಸ್ವಾಮಿ ಆರೋಪ

ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ದೇಣಿಗೆ ಸಂಗ್ರಹಕ್ಕೂ ನನ್ನ ವಿರೋಧವಿಲ್ಲ. ಪಾರದರ್ಶಕತೆ ಇಲ್ಲದೆ ಹಣ ಸಂಗ್ರಹ ಬೇಡ. ಬೀದಿ ಬೀದಿಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ರಾಮನ ಹೆಸರು ದುರ್ಬಳಕೆ ಆಗಬಾರದು. ಜನಸಾಮಾನ್ಯರ ಹಣಕ್ಕೂ ಮೋಸ ಆಗಬಾರದು. ಆನ್‌ಲೈನ್ ಮೂಲಕ ಹಣ ಸಂಗ್ರಹ ಮಾಡಿ

news18-kannada
Updated:February 17, 2021, 2:39 PM IST
ರಾಮಮಂದಿರ ನಿರ್ಮಾಣ: ದೇಣಿಗೆ ಸಂಗ್ರಹ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ; ಕುಮಾರಸ್ವಾಮಿ ಆರೋಪ
ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.
  • Share this:
ಬೆಂಗಳೂರು(ಫೆ.16): ನಾನು ರಾಮನ ಬಗ್ಗೆ ಅವಮಾನ ಮಾಡಿಲ್ಲ. ಧರ್ಮದ ಬಗ್ಗೆಯೂ ಅವಹೇಳನ ಮಾಡಿಲ್ಲ. ವಿಹೆಚ್‌ಪಿ ಸಂಘಟನೆ ಹಣ ಸಂಗ್ರಹ ಮಾಡುತ್ತಿದೆ. ಯಾರು ವಿಹೆಚ್‌ಪಿಗೆ ಅನುಮತಿ ನೀಡಿದವರು? ಬೀದಿ ಬೀದಿಯಲ್ಲಿ ಹಣ ಸಂಗ್ರಹ ಮಾಡಿ ಎಲ್ಲಿಗೆ ಕೊಡುತ್ತಾರೆ? ಮಾರ್ಕಿಂಗ್ ಮಾಡುತ್ತಿರುವುದು ಯಾಕೆ? ನಾವು ಚಿಲ್ಲರೆ ರಾಜಕೀಯ ಮಾಡಿಕೊಂಡು ಬಂದಿಲ್ಲ. ಇದೊಂದು ಧಾರ್ಮಿಕ ಭ್ರಷ್ಟಾಚಾರ ಎನ್ನುತ್ತೇನೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ನನ್ನ ಹೇಳಿಕೆಗೆ ಹಲವಾರು ಸಂಘಟನೆಗಳ ಪ್ರತಿಕ್ರಿಯೆ ಗಮನಿಸಿದ್ದೇನೆ. ಮಂತ್ರಿಗಳು ಕೂಡ ಹೇಳಿಕೆ ಕೊಟ್ಟಿದ್ದಾರೆ. ಜೆಡಿಎಸ್ ಪಕ್ಷವನ್ನ ಬೆಳಕಿಗೆ ತರಲು ಬಾಲಿಷ ಹೇಳಿಕೆ ಎಂದು ಹೇಳಿದ್ದಾರೆ. ನಾನು ರಾಮನ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ಇಂದು ಧರ್ಮದ‌ ಭ್ರಷ್ಟಾಚಾರ ನಡೆಯುತ್ತಿದೆ.  ಧರ್ಮದ ದುರುಪಯೋಗ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ರಾಮ ಮಂದಿರಕ್ಕೆ ಹಣ ಸಂಗ್ರಹಕ್ಕೆ ಅನುಮತಿ‌ ಕೊಟ್ಟವರು ಯಾರು? ಸಂಗ್ರಹವಾದ ಹಣಕ್ಕೆ ಲೆಕ್ಕ ಇಟ್ಟವರು ಯಾರು? ಹಣ ನೀಡದವರ ಮನೆ ಮಾರ್ಕ್ ಮಾಡುತ್ತಿದ್ದಾರೆ.  ಹೀಗೆಂದು ಶಿವಮೊಗ್ಗದಲ್ಲಿ ನಾನು ಹೇಳಿಕೆ ನೀಡಿದ್ದೆ.

ಗದಗ- ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾದ ಬಿಡಾಡಿ ದನಗಳ ಹಾವಳಿ; ನಗರಸಭೆ ವಿರುದ್ಧ ಜನರ ಆಕ್ರೋಶ

ಮಾರ್ಕ್ ಮಾಡುವ ವಿಚಾರ ಅವರೇ ಒಪ್ಪಿದ್ದಾರೆ.  ಮನೆಗೆ ಸ್ಟಿಕರ್ ಅಂಟಿಸುತ್ತಿರುವ ವಿಚಾರ ಒಪ್ಪಿಕೊಂಡಿದ್ದಾರೆ. ದೇಶಕ್ಕೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕತೆ ಎಲ್ಲಿದೆ ಇದರಲ್ಲಿ.  ನಾನು ಬಿಜೆಪಿ ಅಥವಾ ಸರ್ಕಾರದ ಬಗ್ಗೆ ಟೀಕೆ ಮಾಡಲಿಲ್ಲ.  ಕೆಲ ವ್ಯಕ್ತಿಗಳು ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದಿದ್ದೇನೆ. ಸಂಘ ಸಂಸ್ಥೆಗಳು ಹಣದ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು.

ನಮ್ಮ ಕುಟುಂಬದವರು ಅಭಿಮಾನ ಶೂನ್ಯರಲ್ಲ.  ಅಶ್ವತ್ ನಾರಾಯಣ್ ಜಾಬ್‌ಕೋಡ್ ವಿಷಯಲ್ಲಿ ಕೋಟ್ಯಂತರ ರೂ ಲೂಟಿ ಹೊಡೆದಿದ್ದು. ನಾವು ಇಂತಹ ಕೆಲಸ ಮಾಡಿ ಬಂದಿಲ್ಲ, ನಾಜಿ ಹಾಗೂ ಆರ್‌ಎಸ್‌ಎಸ್ ಸಂಘಟನೆ ಸಂಸ್ಕೃತಿ ಬಗ್ಗೆ ಹಲವಾರು ಇತಿಹಾಸ ತಜ್ಞರು ಬರೆದಿದ್ದಾರೆ. 1920ರಲ್ಲಿ ನಾಜಿ ಸಂಘಟನೆ 1926ರಲ್ಲಿ ಆರ್‌ಎಸ್‌ಎಸ್ ಸಂಘಟನೆ ಬಂತು.  ಆರ್‌ಎಸ್‌ಎಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ದೇಶಕ್ಕೆ ನಿಮ್ಮ ಕೊಡುಗೆ ಏನು? ಬಿಜೆಪಿ ಸರ್ಕಾರ ಪೆಟ್ರೋಲ್ ಬೆಲೆಯನ್ನು ಮೂರಂಕಿಗೆ ತರುತ್ತಿದೆ. ಗ್ಯಾಸ್ ಬೆಲೆ ಏರಿಕೆ ಮಾಡಿದ್ದೀರಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಂದುವರೆದ ಅವರು, ನಮ್ಮ ಮನೆಗೂ ದೇಣಿಗೆ ಸಂಗ್ರಹಕ್ಕೆ ಬಂದಿದ್ದರು. ದೇಶದ ಪ್ರತೀಕ ಕಟ್ಟಲು ಹಣ ನೀಡಿ ಎಂದರು. ನನಗೆ ಹಣಕ್ಕಾಗಿ ಬೆದರಿಕೆ ಹಾಕಿದರು. ಯಾರು ಕಳಿಸಿದ್ದು ನಿಮ್ಮನ್ನು ಎಂದು ಕೇಳಿದೆ. ನನಗೇ ಬಿಡಲಿಲ್ಲ, ಇನ್ನು ಜನರನ್ನು ಬಿಟ್ಟಾರೆಯೇ? ಜನರಿಗೂ ಬೆದರಿಕೆ ಹಾಕುತ್ತಿದ್ದಾರೆ. ನಾನು ಭಾವನಾತ್ಮಕವಾಗಿ ರಾಜಕೀಯ ಮಾಡಿಲ್ಲ. ಹಣ ಸಂಗ್ರಹ ಹೆಸರಿನಲ್ಲಿ ಲೂಟಿ ಆಗುತ್ತಿದೆ.  1989ರಲ್ಲಿ ಇಟ್ಟಿಗೆ, ಕಬ್ಬಿಣ, ಹಣ ಸಂಗ್ರಹ ಮಾಡಿದ್ದು ಎಲ್ಲೋಯ್ತು? ಈಗಲೂ ಹಣ ಸಂಗ್ರಹ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ದೇಣಿಗೆ ಸಂಗ್ರಹಕ್ಕೂ ನನ್ನ ವಿರೋಧವಿಲ್ಲ. ಪಾರದರ್ಶಕತೆ ಇಲ್ಲದೆ ಹಣ ಸಂಗ್ರಹ ಬೇಡ. ಬೀದಿ ಬೀದಿಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ರಾಮನ ಹೆಸರು ದುರ್ಬಳಕೆ ಆಗಬಾರದು. ಜನಸಾಮಾನ್ಯರ ಹಣಕ್ಕೂ ಮೋಸ ಆಗಬಾರದು. ಆನ್‌ಲೈನ್ ಮೂಲಕ ಹಣ ಸಂಗ್ರಹ ಮಾಡಿ. ನಮ್ಮ ಜೆಡಿಎಸ್ ಶಾಸಕರು ದೇಣಿಗೆ ನೀಡಿದ್ದಾರೆ. ಹಲವಾರು ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿದ್ದೇವೆ. ದೇವೇಗೌಡರು ದೇವರ ಆಶೀರ್ವಾದದಿಂದ ಪ್ರಧಾನಿಯಾದವರು. ಅಧಿಕೃತ ವ್ತಕ್ತಿ ಬಂದರೆ ದೇಣಿಗೆ ನೀಡುತ್ತೇನೆ. ಒಂದಲ್ಲ ಎರಡು ಬಾರಿ ಕೇಳಿದರೂ ಹಣ ನೀಡುತ್ತೇನೆ ಎಂದರು.

ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯನವರು ಅಹಿಂದ ಸಮಾವೇಶ ನಡೆಸುವ ವಿಚಾರವಾಗಿ, ಸಿದ್ದರಾಮಯ್ಯ ಹಿಂದೆ ಡಿಸಿಎಂ‌ ಆಗಿದ್ದಾಗ ಅಹಿಂದ ಮಾಡಿದ್ರು. ಅದರಿಂದ ರಾಜಕೀಯ ಬೆಳವಣಿಗೆಗಳೂ ಆಯ್ತು. ಆದರೆ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು.  ಅಹಿಂದ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ಇತ್ತು. ಆದರೆ ಆಗ ಅಹಿಂದ ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ಈಗ ಮತ್ತೊಮ್ಮೆ ಸಿಎಂ ಆಗಲು ಇಂತಹ ಯತ್ನ ಎಂದು ಟೀಕಿಸಿದರು.
Published by: Latha CG
First published: February 17, 2021, 2:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories