• Home
  • »
  • News
  • »
  • state
  • »
  • ರಾಜ್ಯದ ಆಡಳಿತ ಯಂತ್ರ ಯಾರ ಕೈಲಿದೆಯೋ ಗೊತ್ತಾಗ್ತಿಲ್ಲ; ವಿಜಯೇಂದ್ರಗೆ ಪರೋಕ್ಷ ತಿರುಗೇಟು ನೀಡಿದ ಕುಮಾರಸ್ವಾಮಿ

ರಾಜ್ಯದ ಆಡಳಿತ ಯಂತ್ರ ಯಾರ ಕೈಲಿದೆಯೋ ಗೊತ್ತಾಗ್ತಿಲ್ಲ; ವಿಜಯೇಂದ್ರಗೆ ಪರೋಕ್ಷ ತಿರುಗೇಟು ನೀಡಿದ ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

ಕರ್ನಾಟಕದಲ್ಲಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕರೇ ಮಾತನಾಡ್ತಿದಾರೆ. ಯತ್ನಾಳ್ 11 ಪುಟಗಳ ಸುದೀರ್ಘ ಪತ್ರ ಬರೆದಿದಾರೆ. ಪ್ರಧಾನಿಗಳು ಬೇರೆ ರಾಜ್ಯದ ಭ್ರಷ್ಟ ವ್ಯವಸ್ಥೆ ಬಗ್ಗೆ ಮಾತಾಡ್ತಾರೆ. ಆದ್ರೆ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಧಾನಿಗಳ ಕಣ್ಣಿಗೆ ಕಾಣ್ತಿಲ್ಲವೆ? ಎಂದು ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಕಲಬುರ್ಗಿ(ಫೆ.25): ರಾಜ್ಯದ ಸಿಎಂ ಯಡಿಯೂರಪ್ಪ ಅವರೋ ಅಥವಾ ಮತ್ತಿನ್ಯಾರೋ. ರಾಜ್ಯದ ಆಡಳಿತ ಯಂತ್ರ ಯಾರ ಕೈಲಿದೆ ಅಂತಾನೇ ಗೊತ್ತಾಗ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಮಗ ವಿಜಯೇಂದ್ರರ ಹೆಸರು ಪ್ರಸ್ತಾಪಿಸದೆಯೇ ವಾಗ್ದಾಳಿ ನಡೆಸಿದರು. ಆಡಳಿತ ಯಂತ್ರ ಯಾರ ಕೈಯಲ್ಲಿದೆ ಅಂತ ಗೊತ್ತಾಗ್ತಿಲ್ಲ. ಸ್ವತಃ ಬಿಜೆಪಿ ಶಾಸಕರೇ ಓಪನ್ ಆಗಿ ಮಾತನಾಡ್ತಿದಾರೆ ಎಂದು ಟೀಕಿಸಿದರು.


ವಿಧಾನಸೌಧದಲ್ಲಿ ಅಂಗೀಕಾರವಾದ ಕಾರ್ಯಕ್ರಮಗಳಿಗೆ ಇವರ ಬಳಿ ಹಣವಿಲ್ಲ. ವಿಧಾನಸೌಧದಲ್ಲಿ 220 ಶಾಸಕರು ಒಪ್ಪಿಗೆ ಸೂಚಿಸಿದ ಕಾರ್ಯಕ್ರಮಗಳಿಗೆ ಹಣ ಇಲ್ಲ ಅಂದ್ರೆ ಹೇಗೆ? ಎಲ್ಲರೂ ಒಪ್ಪಿಗೆ ಸೂಚಿಸೋದ್ರಲ್ಲಿ ಅರ್ಥವೇನಿದೆ. ಆಡಳಿತದ ನೀತಿ ನಿಯಮಗಳು ದಿನೇ ದಿನೇ ಕುಸಿತ ವಾಗುತ್ತಿವೆ. ಸರ್ಕಾರ ಅಭಿವೃದ್ಧಿಗಿಂತ ಹೆಚ್ಚಾಗಿ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿಕೊಂಡು ಹೊರಟಿದ್ದಾರೆ ಎಂದು ಕಿಡಿಕಾರಿದರು.


ಕೊರೋನಾ ಕಾರಣದಿಂದಾಗಿ ಕಳೆದ ಒಂದು ವರ್ಷ ಕಲಬುರ್ಗಿಗೆ ಭೇಟಿ ನೀಡೋಕೆ ಆಗಿರಲಿಲ್ಲ. ಪಕ್ಷದ ಸಂಘಟನೆ ಒಂದಷ್ಟು ಹಿಮ್ಮುಖವಾಗಿದೆ. ಹೀಗಾಗಿ ಪಕ್ಷದ ಮುಖಂಡರಿಗೆ ಸಂಘಟನೆಗೆ ಸೂಚನೆ ನೀಡಿದ್ದೇವೆ. ಉಪ ಚುನಾವಣೆ ಫಲಿತಾಂಶಗಳಿಂದ ನಾವು ಆತಂಕಗೊಂಡಿಲ್ಲ. ಸರ್ಕಾರದ ಆಡಳಿತದ ವೈಖರಿಯನ್ನು ಗಮನಿಸುತ್ತಿದ್ದೇನೆ. ತಂತ್ರಗಾರಿಕೆ ಮೂಲಕ ಬಿಜೆಪಿಯು ಮೈತ್ರಿ ಸರ್ಕಾರದ ಪತನ ಮಾಡಿತು. ಸರ್ಕಾರ ರಚಿಸಿ, ಉಪ ಚುನಾವಣೆಯಲ್ಲಿ ಗೆದ್ದಿದೆ. ಬಿಜೆಪಿ ಸರ್ಕಾರ ರಚನೆಗೊಂಡ ನಂತರ ನಾಡಿನ ರೈತರ ದುರದೃಷ್ಟವೆಂಬಂತೆ ಪ್ರಕೃತಿ ವೈಪರೀತ್ಯಗಳಾಗಿವೆ. ನೆರೆ ಇತ್ಯಾದಿ ಸಂಕಷ್ಟ ಬಂದಿತು. ಸರ್ಕಾರ ಆ ಸಂದರ್ಭದಲ್ಲಿ ದೊಡ್ಢ ಪ್ರಮಾಣದ ಪರಿಹಾರವನ್ನು ಘೋಷಿಸಿತು. ಆದರೆ ಬೆಳೆ, ಮನೆ ಪರಿಹಾರ ತಲುಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೋವಿಡ್ ಕಾರಣ ಮುಂದಿಟ್ಟುಕೊಂಡು ಆಡಳಿತದಲ್ಲಿ ಸಂಪೂರ್ಣ ವೈಫಲ್ಯವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.


ಬೆಂಗಳೂರಿನಲ್ಲಿ ಕುಖ್ಯಾತ ಮನೆ ಕಳ್ಳನ ಬಂಧನ; 1 ಕೆ.ಜಿಗೂ ಹೆಚ್ಚು ಚಿನ್ನ ಜಪ್ತಿ ಮಾಡಿದ ಸಿಸಿಬಿ ಪೊಲೀಸರು


ಬೆಳೆ ಹಾನಿ ಪರಿಹಾರದ ಕುರಿತ ಕಂದಾಯ ಸಚಿವರ ಹೇಳಿಕೆಗೆ ಎಚ್.ಡಿ.ಕೆ. ಕಿಡಿ ಕಾರಿದರು. ರೈತರು ಒಂದನೇ ಕಂತನ್ನು ಮಾತ್ರ ತಗೊಂಡಿದಾರೆ. ಎರಡನೆಯ ಕಂತು ತಗೊಳ್ಳೋಕೆ ಫಲಾನುಭವಿಗಳೇ ಹಿಂದೆ ಸರೀತಿದಾರೆ ಅನ್ನೋದು ರೈತರ ಬಗ್ಗೆ ಸರ್ಕಾರದ ನಿಷ್ಕಾಳಜಿ ಎತ್ತಿ ತೋರಿಸುತ್ತದೆ. ಯಾರೂ ಪರಿಹಾರ ಕೊಟ್ರೆ ಬೇಡ ಅನ್ನೋಲ್ಲ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದರೂ, ಪರಿಹಾರ ಕೊಟ್ಟರೂ ರೈತರು ತಗೊಳ್ತಿಲ್ಲ ಅಂತ ಕಂದಾಯ ಸಚಿವರು ಹೇಳ್ತಿದಾರೆ ಎಂದು ಕಿಡಿಕಾರಿದರು.


ಪಶ್ಚಿಮ ಬಂಗಾಳದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯೋದಾಗಿ ಪ್ರಧಾನಿ ಹೇಳ್ತಿದಾರೆ. ಕರ್ನಾಟಕದಲ್ಲಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕರೇ ಮಾತನಾಡ್ತಿದಾರೆ. ಯತ್ನಾಳ್ 11 ಪುಟಗಳ ಸುದೀರ್ಘ ಪತ್ರ ಬರೆದಿದಾರೆ. ಪ್ರಧಾನಿಗಳು ಬೇರೆ ರಾಜ್ಯದ ಭ್ರಷ್ಟ ವ್ಯವಸ್ಥೆ ಬಗ್ಗೆ ಮಾತಾಡ್ತಾರೆ. ಆದ್ರೆ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಧಾನಿಗಳ ಕಣ್ಣಿಗೆ ಕಾಣ್ತಿಲ್ಲವೆ? ಎಂದು ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.


ಏಮ್ಸ್ ನ್ನು ಕಲಬುರ್ಗಿಗೆ ಕೊಡಬೇಕೆಂದು ನಿರ್ಧಾರವಾಗಿತ್ತು. ಆದ್ರೆ ಅದನ್ನೂ ಕಿತ್ತುಕೊಂಡು ಬೇರೆ ಕಡೆ ಕೊಡಲಾಗ್ತಿದೆ. ಈಗಾಗಲೇ ಮೂಲಭೂತ ಸೌಕರ್ಯ ಇರೋ ಕಡೆ ಮಾಡದೆ ಬೇರೆ ಕಡೆ ಕೊಡ್ತಿರೋದು ಈ ಭಾಗದ ಕಲ್ಯಾಣದ ಬಗೆಗಿನ ಕಾಳಜಿ ತೋರುತ್ತೆ. ಬರೀ ಕಲ್ಯಾಣ ಕರ್ನಾಟಕ ಅಂತ ಬದಲಿಸಿದ್ರೆ ಪ್ರಯೋಜನವಿಲ್ಲ. ನಾನು ಸಿಎಂ ಇದ್ದಾಗ ಕಲ್ಯಾಣ ಕರ್ನಾಟದ ಮೂರು ಕಡೆ ಗ್ರಾಮ ವಾಸ್ತವ್ಯ ಮಾಡಿದೆ. ಈ ಭಾಗದ ಜನ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ವೇಳೆ ನಾವು ಕೊಟ್ಟ ಕಾರ್ಯಕ್ರಮಗಳನ್ನು ಬೇರೆಡೆಗೆ ತೆಗೆದುಕೊಂಡು ಹೋದ್ರು. ಯಾಕೆ ತೆಗೆದುಕೊಂಡು ಹೋದ್ರು ಅಂತ ಬಿಜೆಪಿ ನಾಯಕರು ಹೇಳಬೇಕು ಎಂದು ಆಗ್ರಹಿಸಿದರು.


ರೈತರ ಸಾಲ ಮನ್ನಾಕ್ಕೆ 25 ಸಾವಿರ ಕೋಟಿ ರೂಪಾಯಿ ಇಟ್ಟಿದ್ದೆ. ಅದನ್ನೂ ಡೈವರ್ಟ್ ಮಾಡಿದ್ರು. ಕೇವಲ 15 ಸಾವಿರ ಕೋಟಿ ಮಾತ್ರ ಬಿಡುಗಡೆ ಮಾಡಿದ್ರು. ಈ ದೇಶದ ಕಾನೂನು ಕೇವಲ ಶ್ರೀಮಂತರಿಗೆ ಅನ್ನುವಂತಾಗಿದೆ ಎಂದರು. ಕೇಂದ್ರ ಸರ್ಕಾರ ನೀರಾವರಿ ಮತ್ತು ಗಡಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸ್ತಿದೆ. ಇದೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಜನತೆಯ ಮುಂದೆ ಹೋಗ್ತೇವೆ ಎಂದರು.


ಮೀಸಲಾತಿಗಾಗಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕೆ., ಬಿಸಿಲಿನಲ್ಲಿ ಮಠಾಧೀಶರು ಪಾದಯಾತ್ರೆಗೆ ಹೋಗೋ ಪರಿಸ್ಥಿತಿ ನಿರ್ಮಾಣ ಮಾಡಿರೋದು ದುರದೃಷ್ಟಕರ. ಇದನ್ನು ಸರ್ಕಾರ ಲಘುವಾಗಿ ತಗೋಬಾರದು. ಗಂಭೀರವಾಗಿ ತಗೊಂಡು ಮೀಸಲಾತಿ ಕೊಡಲು ಕ್ರಮ ಕೈಗೊಳ್ಳಲಿ ಎಂದರು. ಉಪ ಚುನಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕೆ, ಬಸವಕಲ್ಯಾಣ, ಮಸ್ಕಿ ಹಾಗೂ ಸಿಂಧಗಿ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸ್ತೇವೆ. ಬೆಳಗಾವಿ ಲೋಕಸಭೆಯಲ್ಲಿ ವೀಕ್ ಇದ್ದು, ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.


ನಮ್ಮ ಶಕ್ತಿ ಏನಂತ ತೋರಿಸೋಕೆ ಮೈಸೂರಿನಲ್ಲಿ ಮೇಯರ್ ಸ್ಥಾನದಲ್ಲಿ ಗೆದ್ದು ತೋರಿಸಿದ್ದೇವೆ. ಸಿದ್ಧರಾಮಯ್ಯ ಮೊದ್ಲು ಅಹಿಂದ ಅಂದ್ರು. ಈಗ ಹಿಂದ ಅಂತ ಹೇಳ್ತಿದಾರೆ. ಸಿದ್ಧರಾಮಯ್ಯ ಅವರ ಸಿದ್ಧಾಂತ ಏನು ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು