6 ತಿಂಗಳೂ ಅಧಿಕಾರ ನಿಭಾಯಿಸಲಾಗದ ವಿಶ್ವನಾಥ್​ ಬಗ್ಗೆ ನನಗೆ ಅನುಕಂಪವಿದೆ; ಟ್ವಿಟ್ಟರ್​ನಲ್ಲಿ ಕಾಲೆಳೆದ ಸಿದ್ದರಾಮಯ್ಯ

ವಿಶ್ವನಾಥ್​ ಅವರಿಂದ ತೆರವಾದ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಚ್​.ಕೆ. ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಮಧು ಬಂಗಾರಪ್ಪ ಅವರಿಗೆ ಜೆಡಿಎಸ್​ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.

Sushma Chakre | news18
Updated:July 4, 2019, 3:02 PM IST
6 ತಿಂಗಳೂ ಅಧಿಕಾರ ನಿಭಾಯಿಸಲಾಗದ ವಿಶ್ವನಾಥ್​ ಬಗ್ಗೆ ನನಗೆ ಅನುಕಂಪವಿದೆ; ಟ್ವಿಟ್ಟರ್​ನಲ್ಲಿ ಕಾಲೆಳೆದ ಸಿದ್ದರಾಮಯ್ಯ
ಎಚ್​.ವಿಶ್ವನಾಥ್​- ಸಿದ್ದರಾಮಯ್ಯ
  • News18
  • Last Updated: July 4, 2019, 3:02 PM IST
  • Share this:
ಬೆಂಗಳೂರು (ಜು. 4): ರಾಜಕೀಯದಲ್ಲಿ ಹಾವು-ಮುಂಗುಸಿಯಂತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ- ಜೆಡಿಎಸ್​ ಮುಖಂಡ ಹೆಚ್​. ವಿಶ್ವನಾಥ್​ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ನಂತರ ಅನಿವಾರ್ಯವಾಗಿ ಮುಖಾಮುಖಿಯಾಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಲೋಕಸಭೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಜೆಡಿಎಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೆಚ್​. ವಿಶ್ವನಾಥ್​ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದರು. ಅವರ ಆರೋಪಕ್ಕೆ ಇಂದು ಸಿದ್ದರಾಮಯ್ಯ ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ.

ಮೈತ್ರಿ ಸರ್ಕಾರದ ವೈಫಲ್ಯಕ್ಕೆ ಸಿದ್ದರಾಮಯ್ಯನವರೇ ಕಾರಣ. ಮೈತ್ರಿ ಸರ್ಕಾರ ಸಿದ್ದರಾಮಯ್ಯನವರ ಕೈಗೊಂಬೆಯಾಗಿದೆ. ಅಲ್ಲಿ ಹಿರಿಯ ನಾಯಕರ ಮಾತಿಗೆ ಕಿಮ್ಮತ್ತಿನ ಬೆಲೆಯಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅತೃಪ್ತರ ಮನವೊಲಿಸುವಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಸಮನ್ವಯ ಸಮಿತಿಯಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷನಾದ ನನಗೂ ಬೆಲೆಯಿಲ್ಲ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ಗೂ ಬೆಲೆಯಿಲ್ಲ ಎಂದು ಬಹಿರಂಗವಾಗಿ ಹೆಚ್​. ವಿಶ್ವನಾಥ್​ ಆರೋಪ ಮಾಡಿದ್ದರು.

H. Vishwanath
ಎಚ್.ವಿಶ್ವನಾಥ್


ವಿಶ್ವನಾಥ್​ ಅವರಿಂದ ತೆರವಾದ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಚ್​.ಕೆ. ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್​ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, 'ತಮಗೆ ಸಿಕ್ಕ ಅಧ್ಯಕ್ಷ ಹುದ್ದೆಯನ್ನು ಸರಿಯಾಗಿ 6 ತಿಂಗಳು ಕೂಡ ನಿಭಾಯಿಸಲಾಗದೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿರುವ ಹೆಚ್. ವಿಶ್ವನಾಥ್  ಸದಾ ಇತರರ ಸಾಮರ್ಥ್ಯವನ್ನು ಪ್ರಶ್ನಿಸುತ್ತ ತಮ್ಮ ದೌರ್ಬಲ್ಯವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.  ಅವರ ಬಗ್ಗೆ ನನಗೆ ಅನುಕಂಪವಿದೆ' ಎಂದು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

 ಇಂದು ಜೆಡಿಎಸ್ ನೂತನ​ ರಾಜ್ಯಾಧ್ಯಕ್ಷರಾಗಿ ಹೆಚ್​.ಕೆ. ಕುಮಾರಸ್ವಾಮಿ ಅಧಿಕೃತ ಘೋಷಣೆ

ತಮ್ಮನ್ನು ಟೀಕಿಸಿರುವ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿರುವ ಹೆಚ್​. ವಿಶ್ವನಾಥ್​, ಸಿದ್ದರಾಮಯ್ಯನವರಿಗೆ ಬಹುವಚನದಲ್ಲಿ ಮಾತನಾಡಿ ಗೊತ್ತೇ ಇಲ್ಲ. ಎಲ್ಲರಿಗೂ ಸಂಧಿಪಾಠ ಮಾಡುವ ಸಿದ್ದರಾಮಯ್ಯನವರಿಗೆ ಏಕವಚನ, ಬಹುವಚನ ಯಾವುದೆಂದು ಗೊತ್ತಿಲ್ಲ. ಅವರು ಏಕವಚನದಲ್ಲಿ ಮಾತಾಡಿದ್ದರಿಂದ ನಂಗೇನೂ ಬೇಜಾರಿಲ್ಲ ಎಂದಿದ್ದಾರೆ.

ಹೆಚ್​.ಕೆ. ಕುಮಾರಸ್ವಾಮಿ ನೇಮಕಕ್ಕೆ ಸಂತಸ:

ಜೆಡಿಎಸ್​ ನೂತನ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹೆಚ್​. ವಿಶ್ವನಾಥ್​, ಹೆಚ್​.ಕೆ. ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅತ್ಯಂತ ಸಂತೋಷ ತಂದಿದೆ. ಒಂದು ವರ್ಷದ ಹಿಂದೆ ನಾನು ಅಧ್ಯಕ್ಷನಾಗಿದ್ದೆ. ನಾನು ಅಧಿಕಾರ ಸ್ವೀಕರಿಸಿದ ದಿನವೇ ಹೆಚ್​.ಕೆ. ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ್ದಾರೆ. ನಾನು ಸೋತರೂ ನನ್ನ ಪಥ ಸೋತಿಲ್ಲ ಅಂತ ದೇವೇಗೌಡರು ಪಕ್ಷ ಸಂಘಟನೆ ಮಾಡಿದ್ದಾರೆ. ಯುವಕರ ತಂಡ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ಪಕ್ಷದಲ್ಲಿ ಮಾನವ ಸಂಪನ್ಮೂಲಗಳ ಬಳಕೆ ಆಗಬೇಕು. ಪ್ರತಿಭಾನ್ವಿತರನ್ನ ಹುಡುಕಿ ಅಧಿಕಾರ ಕೊಡಬೇಕು. ಅಂತಹ ಹೊಸ ಹುರುಪು, ಉತ್ಸಾಹ ಇಂದು ನಮ್ಮಲ್ಲಿ ಕಾಣುತ್ತಿದೆ ಎಂದಿದ್ದಾರೆ.

ವಿಶ್ವನಾಥ್​ ಜೆಡಿಎಸ್​ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದು ಯಾಕೆ? ಇಲ್ಲಿದೆ ಅಸಲಿಯತ್ತು

ಜೆಡಿಎಸ್​ ರಾಜ್ಯಾಧ್ಯಕ್ಷರಿಗೆ ಎಲ್ಲಾ ಜವಾಬ್ದಾರಿ ಕೊಡಬೇಕು, ಜೊತೆಗೆ ಸ್ವಾತಂತ್ರ್ಯವನ್ನೂ ನೀಡಬೇಕು ಎಂದು ಹೇಳಿರುವ ಹೆಚ್​. ವಿಶ್ವನಾಥ್​ ಪರೋಕ್ಷವಾಗಿ ನನಗೆ ಇವೆಲ್ಲ ಇರಲಿಲ್ಲ ಎಂದು ಹೇಳಿದ್ದಾರೆ. ಯುವ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ ಉತ್ತಮ ಕೆಲಸ‌ ಮಾಡಿದ್ದಾರೆ. ಜೆಡಿಎಸ್ ಪಕ್ಷ ಜಾತ್ಯತೀತ ನಿಲುವಿನ ಪಕ್ಷವಾಗಿದೆ‌. ರಾಷ್ಟ್ರೀಯ ಪಕ್ಷದ ಜೊತೆ ಜೆಡಿಎಸ್​ ಸರ್ಕಾರ ರಚಿಸಿದೆ. ನಿಖಿಲ್ ಕುಮಾರಸ್ವಾಮಿ ಸೋಲನ್ನು ಮೆಟ್ಟಿನಿಂತು ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಕರನ್ನು ಪ್ರೋತ್ಸಾಹಿಸಬೇಕು. ಪಕ್ಷದ ಜೊತೆ ನಾವು ಸದಾ ಇರುತ್ತೇವೆ. ಕರ್ನಾಟಕದಲ್ಲಿ ನೂತನ ಶಕೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಉತ್ತಮವಾಗಿ ಸಂಘಟನೆಯಾಗುವ ವಿಶ್ವಾಸವಿದೆ ಎಂದು ಹೆಚ್​. ವಿಶ್ವನಾಥ್ ಹೇಳಿದ್ದಾರೆ.

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ