​​​​ಬಗೆಹರಿಯದ ಕೆಪಿಸಿಸಿ ಅಧ್ಯಕ್ಷ ಗಾದಿ ಕಗ್ಗಂಟು - ಬರಿಗೈಲಿ ವಾಪಸ್ಸಾದ ಸಿದ್ಧರಾಮಯ್ಯ - ಡಿಕೆಶಿ ಲಾಬಿ ಆರಂಭ

ಸಿದ್ದರಾಮಯ್ಯ ತಮ್ಮ ಕೆಲಸ ಮಾಡಿ ಬೆಂಗಳೂರಿನ ಕಡೆ ಹೊರಟಿದಾರೆ. ಮುಂದೆ ಡಿ.ಕೆ. ಶಿವಕುಮಾರ್ ದೆಹಲಿಗೆ ಬಂದು ಲಾಭಿ ಮಾಡುವ ಸಾಧ್ಯತೆ ಇದೆ. ಇಷ್ಟೆಲ್ಲದರ ನಡುವೆ ಸರ್ಪ್ರೈಸ್ ಕ್ಯಾಂಡಿಡೇಟ್ ಬರಬಹುದು ಎಂಬ‌ ಹೊಸ ಸುದ್ದಿ ಕೂಡ ಸಿಗುತ್ತಿದೆ

news18-kannada
Updated:January 15, 2020, 7:16 PM IST
​​​​ಬಗೆಹರಿಯದ ಕೆಪಿಸಿಸಿ ಅಧ್ಯಕ್ಷ ಗಾದಿ ಕಗ್ಗಂಟು - ಬರಿಗೈಲಿ ವಾಪಸ್ಸಾದ ಸಿದ್ಧರಾಮಯ್ಯ - ಡಿಕೆಶಿ ಲಾಬಿ ಆರಂಭ
ಸಿದ್ದರಾಮಯ್ಯ
  • Share this:
ನವದೆಹಲಿ(ಜ.15) : ಕೆಪಿಸಿಸಿ ಅಧ್ಯಕ್ಷಗಾದಿ ವಿಷಯವನ್ನು ಫೈನಲ್ ಮಾಡಿಕೊಂಡೇ ಹೋಗಬೇಕು ಅಂತಾ ಇವತ್ತು ಕೂಡ ದೆಹಲಿಯಲ್ಲೇ ಸಿದ್ದರಾಮಯ್ಯ ಅವರು ಉಳಿದುಕೊಂಡಿದ್ದರು. ಆದರೆ, ವಿಷಯ ಇತ್ಯರ್ಥ ಆಗಿಲ್ಲ ಅಥವಾ ಹೈಕಮಾಂಡ್ ಕೂಡ ಅಂಥ ಯಾವುದೇ ಸುಳಿವು ನೀಡಿಲ್ಲ.

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷನನ್ನು ನೇಮಿಸುವ ವಿಚಾರ ಗಜಗರ್ಭವಾದಂತಾಗಿದೆ‌. ಅಭಿಪ್ರಾಯ ಸಂಗ್ರಹ ಮತ್ತಿತರ ಪ್ರಕ್ರಿಯೆಗಳೆಲ್ಲಾ ಮುಗಿದು ಮಾಜಿ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಡಿ.ಕೆ. ಶಿವಕುಮಾರ್ ಹೆಸರುಗಳು ಅಂತಿಮ ಹಂತಕ್ಕೆ ಬಂದಿವೆ. ಇಬ್ಬರಲ್ಲಿ ಒಬ್ಬರ ಹೆಸರು ಘೋಷಣೆ ಆಗಬೇಕು. ಅದು ಇವತ್ತಾಗುತ್ತೆ, ನಾಳೆ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ, ಅಧಿಕೃತ ಘೋಷಣೆ ಮಾತ್ರ ಹೊರಬೀಳುತ್ತಿಲ್ಲ. ಹೊರಬೀಳುವ ಸುಳಿವುಗಳು ಕೂಡ ಸಿಗುತ್ತಿಲ್ಲ.

ತಮ್ಮ ಆಪ್ತ ಎಂ.ಬಿ. ಪಾಟೀಲ್ ಅವರಿಗೆ ಕೆಪಿಸಿಸಿ ಪಟ್ಟ ಕೊಡಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಪಕ್ಷ ನಾಯಕ‌ ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕಾಗಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ನಿನ್ನೆ ಇಡೀ ದಿನ ದೆಹಲಿಯಲ್ಲಿ ಇದ್ದ ಸಿದ್ದರಾಮಯ್ಯ, ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತಿತರ ನಾಯಕರನ್ನು ಭೇಟಿ ಮಾಡಿ ಉತ್ತರ ಕರ್ನಾಟಕದ ಲಿಂಗಾಯತರಿಗೆ ಅಧ್ಯಕ್ಷ ಗಾದಿ‌ಕೊಡಬೇಕು ಎಂದು ಹೇಳುವ ಮೂಲಕ ಎಂ.ಬಿ.‌ ಪಾಟೀಲ್ ಪರ ವಕಾಲತ್ತು ವಹಿಸಿದ್ದರು. ಸಾಲದೆಂಬಂತೆ ಇವತ್ತು ಕೂಡ ದೆಹಲಿಯಲ್ಲೇ ಉಳಿದುಕೊಂಡು ಪ್ರಯತ್ನ‌ ಮುಂದುವರೆಸಿದರು.

ಇತ್ತೀಚೆಗೆ ಸಿದ್ದರಾಮಯ್ಯ ಅನಾರೋಗ್ಯಕ್ಕೀಡಾಗಿದ್ದಾಗ ರಾಹುಲ್ ಗಾಂಧಿ ಕರೆ ಮಾಡಿ ಮಾತನಾಡಿದ್ದರು. ಬೇಗ ಹುಷಾರಾಗುವಂತೆ ವಿಷ್ ಮಾಡುವುದರ ಜೊತೆಗೆ ದೆಹಲಿಗೆ ಬಂದಾಗ ಭೇಟಿಯಾಗಿ ಎಂದೂ ಹೇಳಿದ್ದರು. ಅದರಂತೆ ಇವತ್ತು ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ : ಮಠಾಧೀಶರಿಂದ ಮುಖ್ಯಮಂತ್ರಿಗಳನ್ನು ಬೆದರಿಸೋ ಕೆಲಸ - ಸಂಖ್ಯಾಬಲದಿಂದ ಬೆದರಿಸ್ತೇವೆ ಅನ್ನೋದು ತಪ್ಪು ; ನಿಡುಮಾಮಿಡಿಶ್ರೀ

ಭೇಟಿ ವೇಳೆ ನಿನ್ನೆ ಸೋನಿಯಾ ಗಾಂಧಿ ಬಳಿ ಹೇಳಿದ್ದಂತೆ ಉತ್ತರ ಕರ್ನಾಟಕದ ಲಿಂಗಾಯತರಿಗೆ ಅಧ್ಯಕ್ಷ ಗಾದಿ‌ಕೊಡಬೇಕು ಎಂಬ ಸೂತ್ರ ಮುಂದಿಟ್ಟು ಎಂ.ಬಿ.‌ ಪಾಟೀಲ್ ಪರ ಬ್ಯಾಟಿಂಗ್ ಮಾಡಿದರು. ಇದೇ ವೇಳೆ ತಮ್ಮ ಪ್ರತಿಪಕ್ಷದ ನಾಯಕನ‌ ಸ್ಥಾನದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ತಮ್ಮ ಕೆಲಸ ಮಾಡಿ ಬೆಂಗಳೂರಿನ ಕಡೆ ಹೊರಟಿದಾರೆ. ಮುಂದೆ ಡಿ.ಕೆ. ಶಿವಕುಮಾರ್ ದೆಹಲಿಗೆ ಬಂದು ಲಾಭಿ ಮಾಡುವ ಸಾಧ್ಯತೆ ಇದೆ. ಇಷ್ಟೆಲ್ಲದರ ನಡುವೆ ಸರ್ಪ್ರೈಸ್ ಕ್ಯಾಂಡಿಡೇಟ್ ಬರಬಹುದು ಎಂಬ‌ ಹೊಸ ಸುದ್ದಿ ಕೂಡ ಸಿಗುತ್ತಿದೆ. ಆದು ಯಾವಾಗ ಅಂತ ಗೊತ್ತಿಲ್ಲ.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ