ಹುಬ್ಬಳ್ಳಿ: ರಾಜ್ಯದಲ್ಲಿ ಸಿಡಿ ಸದ್ದು (Karnataka CD Case) ಜೋರಾಗಿದೆ. ಸಿಡಿ ಬಗ್ಗೆ ಬರೀ ಮಾತಾಡಿದ್ದೇ ಆಗಿದೆ. ಒಂದನ್ನಾದ್ರೂ ರಿಲೀಸ್ ಮಾಡಿ ತೋರಿಸಿ ಅಂತ ಜಗದೀಶ್ ಶೆಟ್ಟರ್ (Jagadish Shettar ) ಮಾರ್ಮಿಕವಾಗಿ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ನ್ಯೂಸ್ 18 ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿ.ಡಿ ರಾಜಕಾರಣ ಜೋರಾಗಿದೆ. ಒಬ್ಬರ ಬಗ್ಗೆ ಮತ್ತೊಬ್ಬರು ಮಾತಾಡುವುದು ಹೆಚ್ಚಾಗಿದೆ. ಆದರೆ ಇದುವರೆಗೂ ಒಂದು ಸಿ.ಡಿಯೂ ರಿಲೀಸ್ ಆಗಿಲ್ಲ ಎಂದಿದ್ದಾರೆ.
ಸಿಡಿ ಬಿಡುಗಡೆಯಾದರೆ ಏನಾದ್ರೂ ಮಾತನಾಡಬಹುದು. ಒಂದಾದರೂ ಸಿಡಿ ಬಿಡುಗಡೆ ಮಾಡಲಿ. ಆಗ ನಾವು ಏನಾದ್ರೂ ಹೇಳೋಕೆ ಬರುತ್ತೆ. ಏನಾದರೂ ಆ್ಯಕ್ಷನ್, ರಿಯಾಕ್ಷನ್ ಆಗುತ್ತೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿ ಬಾಂಬ್ ಸಿಡಿಸಿದ್ದರು.
ಬಜೆಟ್ ನಲ್ಲಿ ರಾಜ್ಯಕ್ಕೆ ಬಂಪರ್ ಎಂದ ಶೆಟ್ಟರ್
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ಸಿಕ್ಕಿದೆ. ನೀರಾವರಿ ಯೋಜನೆಗೂ ಆದ್ಯತೆ ಕೊಡಲಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದೆ. ಇದೊಂದು ಸಮತೋಲಿತ ಬಜೆಟ್ ಆಗಿದೆ. ಅಭಿವೃದ್ಧಿ ಪರವಾಗಿರುವಂತಹ ಬಜೆಟ್ ಆಗಿದೆ ಎಂದಿದ್ದಾರೆ.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿರೋದಕ್ಕೆ ಸ್ವಾಗತ
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗಬೇಕೆಂಬ ಬೇಡಿಕೆ ಇತ್ತು. ಅದಕ್ಕೆ ಕೇಂದ್ರ ಬಜೆಟ್ ನಲ್ಲಿ ಸ್ಪಂದನೆ ಸಿಕ್ಕಿದೆ ಎಂದು ಶೆಟ್ಟರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. 5300 ಕೋಟಿ ರೂಪಾಯಿ ಅನುದಾನ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಮಧ್ಯ ಕರ್ನಾಟಕದ ನೀರಾವರಿ ಯೋಜನೆ ಪ್ರಗತಿಗೆ ಅನುಕೂಲವಾಗಲಿದೆ. ರೈಲ್ವೆ, ಮೂಲಭೂತ ಸೌಕರ್ಯ ಮತ್ತೆ ಯೋಜನೆಗಳಿಗೂ ಆದ್ಯತೆ ಸಿಕ್ಕಿದೆ. ಕೃಷಿಗೆ ಸಂಬಂಧಿಸಿದ ಹಲವಾರು ಯೋಜನೆಗಳು ಘೋಷಣೆಯಾಗಿವೆ. ಉದ್ಯೋಗಾವಕಾಶಗಳ ಹೆಚ್ಚಳಕ್ಕೂ ಬಜೆಟ್ ಪೂರಕವಾಗಿದೆ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಫ್ಲೈಓವರ್ ಪಾಲಿಟಿಕ್ಸ್
ಹುಬ್ಬಳ್ಳಿಯಲ್ಲಿ ಫ್ಲೈಓವರ್ ಪಾಲಿಟಿಕ್ಸ್ ಶುರುವಾಗಿದೆ. ಫ್ಲೈಓವರ್ ಗಾಗಿ ಕೆ.ಎಚ್. ಪಾಟೀಲ್ ಪ್ರತಿಮೆ ತೆರವು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಹುಬ್ಬಳ್ಳಿಯ ಇಂದಿರಾಗಾಂಧಿ ಉದ್ಯಾನವನದ ಬಳಿ ಕೆ.ಎಚ್ ಪಾಟೀಲ್ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಪ್ಲೈಓವರ್ ಕಾಮಗಾರಿ ಹೆಸರಲ್ಲಿ ರಾತ್ರೋ ರಾತ್ರಿ ಪ್ರತಿಮೆ ತೆರವು ಮಾಡಿ ಬೇರೆಡೆ ಪ್ರತಿಮೆ ಸ್ಥಳಾಂತರಿಸಲಾಗಿದೆ.
ಏಕಾಏಕಿ ದಿವಗಂತ ಕೆಎಚ್ ಪಾಟೀಲ್ ಪ್ರತಿಮೆ ತೆರವು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕಳೆದ ಮೂವತ್ತು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಪ್ರತಿಮೆಯನ್ನು ತೆರವು ಮಾಡಿದ್ದಕ್ಕೆ ಪ್ರತಿಮೆ ಪ್ರತಿಷ್ಠಾಪನೆ ಸಮಿತಿಯಿಂದ ಜಿಲ್ಲಾಡಳಿತ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ನೋಟಿಸ್ ಕೊಡದೆ ಪ್ರತಿಮೆ ಸ್ಥಳಾಂತರ ಮಾಡಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಬಸವಣ್ಣನ ಪ್ರತಿಮೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಕೆ.ಎಚ್ ಪಾಟೀಲ್ ಪ್ರತಿಮೆ ತೆರವು ಮಾಡಲಾಗಿದೆ ಎಂದು ಪ್ರತಿಷ್ಠಾಪನೆ ಸಮಿತಿ ಮತ್ತು ಕೆ.ಎಚ್.ಪಾಟೀಲರ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಸ್ಥಳಾಂತರಿಸಿದ ಪ್ರತಿಮೆ ಪರಿಶೀಲಿಸಿದ ಕೆ.ಎಚ್ ಪಾಟೀಲ್ ಅಭಿಮಾನಿಗಳು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಶಾಸಕಿ ಕುಸುಮಾ ಶಿವಳ್ಳಿ ಮತ್ತಿತರರ ಭೇಟಿ ನೀಡಿ, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರನ್ನು ವರ್ಗಾವಣೆಗೆ ಆಗ್ರಹಿಸಿದ್ದಾರೆ.
ಯಾವುದೇ ನೋಟಿಸ್ ನೀಡದೆ ಸ್ಥಳಾಂತರ ಮಾಡಲಾಗಿದೆ. ಸಹಕಾರಿ ರಂಗದ ಭೀಷ್ಮನಿಗೆ ಅಪಮಾನ ಮಾಡಲಾಗಿದೆ. ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಮತ್ತಿತರ ಪ್ರತಿಮೆ ಸ್ಥಳಾಂತರ ಮಾಡಿಲ್ಲ. ಬಸವೇಶ್ವರ, ಕೆ.ಎಚ್.ಪಾಟೀಲರ ಮೂರ್ತಿ ಮಾತ್ರ ಸ್ಥಳಾಂತರ ಮಾಡಲಾಗಿದೆ. ಮೊದಲಿನ ಜಾಗದಲ್ಲಿಯೇ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡೋದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ