ಚಾಮರಾಜನಗರ(ಮಾ.07) : ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್ ವಿರೋಧಿಸಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶಕ್ಕೂ ಮೊದಲು ಮಾತನಾಡಿದ ಅವರು ಪ್ರಧಾನಿಯವರು ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬದಲು ದೇಶವನ್ನು ದಿವಾಳಿ ಮಾಡುತ್ತಿದ್ದಾರೆ. ಅವರು ಬೇರೆಯವರ ಮಾತನ್ನು ಕೇಳಲ್ಲ, ತಾವೇ ನೇಮಿಸಿದ ತಜ್ಞರ ಮಾತನ್ನು ಕೇಳಲ್ಲ. ನೋಟ್ ಬ್ಯಾನ್ ಆದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಎಲ್ಲ ಭರವಸೆಗಳು ಹುಸಿಯಾಗಿವೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಧರ್ಮದ ಹೆಸರಿನಲ್ಲಿ, ರಾಷ್ಟ್ರೀಯತೆ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ತಪ್ಪಿನ ಬಗ್ಗೆ ಮಾತನಾಡಿದವರನ್ನು ದೇಶದ್ರೋಹಿಗಳೆಂದು ಪಾಕಿಸ್ತಾನದ ಏಜೆಂಟ್ಗಳೆಂದು ಬಿಂಬಿಸುತ್ತಾರೆ ಎಂದು ಕಿಡಿಕಾರಿದರು.
ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೂಷಿಸಲು ಹೋಗಲ್ಲ. ಅವರು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದನ್ನು ಕೇಳುತ್ತಾರೆ. ಕೇಂದ್ರದಲ್ಲಿ ಯಾವ ಮಂತ್ರಿಗೂ ಸ್ವಾತಂತ್ರ್ಯ ಇಲ್ಲ. ಎಲ್ಲ ನೀತಿ ನಿಯಮಗಳು ಮೋದಿ ಹೇಳಿದಂತೆ ಆಗುತ್ತಿವೆ ಎಂದು ಪ್ರಧಾನಿ ಮೋದಿ ವಿರುದ್ದ ಖರ್ಗೆ ಗುಡುಗಿದರು.
ಇದನ್ನೂ ಓದಿ : ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ: 2 ಕೆಜಿ ಅಕ್ಕಿ ಬದಲು ರಾಗಿ, ಜೋಳ; ಬಿಸಿ ಪಾಟೀಲ್
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಆಗಲಿದೆ ಎಂದ ಅವರು, ಖರ್ಗೆ ಮುಖ್ಯಮಂತ್ರಿಯಾಗಬೇಕು ಎಂದು ದೇವೇಗೌಡರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿ, ನನ್ನನ್ನು ಹಲವು ಬಾರಿ ಸಿಎಂ ಮಾಡಾಯ್ತು ಬಿಡಿ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ